ಜೈಲಿಗೆ ಹೋದರು ತೊಂದರೆಯಿಲ್ಲ 15 ದಿವಸದಲ್ಲಿ ರಸ್ತೆ ನಿರ್ಮಾಣ – ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಭರವಸೆ
ಪುತ್ತೂರು: ಇರ್ದೆ ಗ್ರಾಮದ ದೂಮಡ್ಕ – ಚಾಕೋಟೆ- ಮದಕ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ಮನೆಗಳಿಗೆ ಮೂಲ ಸೌಕರ್ಯವಾದ ರಸ್ತೆ ಸಂಪರ್ಕವಿಲ್ಲದೆ 102 ವರ್ಷ ಕಳೆದಿದೆ. ಜನಪ್ರತಿನಿಧಿಗಳಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕವೂ ಮನವಿ ಮಾಡಿ ಆಗಿದೆ. ಯಾವುದೇ ಸ್ಪಂದನೆಯಿಲ್ಲ. ಹಾಗಾಗಿ ಮುಂದೆ ನಾವು ಪೇಪರ್ ವರ್ಕ್ ಮಾಡದೆ ನೇರ 15 ದಿನದೊಳಗೆ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ದೂಮಡ್ಕ – ಚಾಕೋಟೆ- ಮದಕ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ಮನೆಗಳಗೆ 90 ವರ್ಷಗಳ ಹಿಂದಿನಿಂದಲೇ ಪಂಚಾಯತ್ ಕಾಲು ದಾರಿ ಊರ್ಜಿತದಲ್ಲಿದೆ. ಆದರೆ ಅದು ಈಗ ಅಗರ್ ರೂಪ ತಾಳಿದೆ. ಸಂಪರ್ಕ ರಸ್ತೆಯಿಲ್ಲದೆ ಈ ಭಾಗದ ಜನರು ಅನಾರೋಗ್ಯ ಪೀಡಿತ ಸಂದರ್ಭದಲ್ಲಿ ಹೊತ್ತುಕೊಂಡು ಹೋಗುವಂತಹ ಅನಿವಾರ್ಯತೆ ಉಂಟಾಗಿದೆ. ಕಳೆದ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದ ಹಸುವೊಂದು ವೈದ್ಯರು ಕಾಲುದಾರಿಯಲ್ಲಿ ನಡೆದುಕೊಂಡು ಬರುವ ಸಂದರ್ಭ ತಡವಾದ್ದರಿಂದ ಹಸು ಮೃತಪಟ್ಟ ಘಟನೆಯೂ ನಡೆದಿದೆ. ವಿಧವೆಯೊಬ್ಬರ ಮನೆ ಕುಸಿದು ಬಿದ್ದಾಗ ಮನೆಯ ಸಂಪೂರ್ಣ ಹಾನಿಯಾಗಿದೆ. ಅವರಿಗೆ ಮನೆ ಪುನಃನಿರ್ಮಾಣ ಮಾಡಲು ಲಕ್ಷಾಂತರ ರೂಪಾಯಿ ಖರ್ಚಾಗುವ ಸಂದರ್ಭ ಸರಕಾರದ ಪರಿಹಾರ ಕೇವಲ 10ಸಾವಿರ ಸಿಕ್ಕಿದೆ. ರಸ್ತೆ ನಿರ್ಮಾಣ ಮಾಡಬಾರದೆಂದು ಸ್ಥಳೀಯರೊಬ್ಬರು ದಾರಿಯನ್ನು ಕಿರಿದುಗೊಳಿಸಿದ್ದಾರೆ. ಸಂಪರ್ಕ ದಾರಿಯಲ್ಲಿ ಅನಗತ್ಯವಾಗಿ ದುರುದ್ದೇಶದಿಂದ ಗುಡಿಸಲು ನಿರ್ಮಿಸಿ ದಾರಿಯನ್ನು ಮುಚ್ಚಿದ್ದಾರೆ. ಒಟ್ಟಾರೆಯಾಗಿ ಮೂಲ ಸೌಕರ್ಯದಿಂದ ವಂಚಿತರಾದ ಮನೆಗಳಿಗೆ ಸಂಪರ್ಕ ರಸ್ತೆ ಮಾಡಲು ಶಾಸಕರಿಗೆ, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯಿಂದ 15 ದಿನದೊಳಗೆ ನಾವು ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ. ಇದರಲ್ಲಿ ನಾನು ಜೈಲಿಗೆ ಹೋದರೂ ಪರವಾಗಿಲ್ಲ, ಪರಿಶಿಷ್ಟ ಪಂಗಡದ ಜನರಿಗೆ ಮೂಲಸೌಕರ್ಯ ಮಾಡಿಕೊಡುತ್ತೇನೆ ಎಂದವರು ಹೇಳಿದರು.
2 ದಿನದಲ್ಲಿ ಹೇಳಿ ಎರಡೂವರೆ ವರ್ಷವಾದರೂ ಭರವಸೆ ಈಡೇರಿಲ್ಲ:
ಶಾಸಕ ಅಶೋಕ್ ಕುಮಾರ್ ರೈ ಅವರು ಚುನಾವಣೆ ಸಂದರ್ಭ ಕಾಲೋನಿಗೆ ಭೇಟಿ ನೀಡಿ ಕಾಲೋನಿಯವರ ಬೇಡಿಕೆಯಂತೆ ನಾನು ಶಾಸಕನಾದ ಎರಡು ದಿನದಲ್ಲಿ ಸಂಪರ್ಕ ರಸ್ತೆ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಇದೀಗ ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಎರಡೂವರೆ ವರ್ಷ ಆದರೂ ಅವರ ಭರವಸೆ ಈಡೇರಿಲ್ಲ. ಅವರ ಕಡೆಯಿಂದ ರಸ್ತೆಗೆ ಸಂಬಂಧಿಸಿ ಫೈಲ್ ಪಂಚಾಯತ್ಗೆ ಹೋಗಿದ್ದು, ಅಲ್ಲಿಂದ ಅದು ಪಟ್ಟಸ್ಥಳ ಎಂದು ಪೆಂಡಿಂಗ್ನಲ್ಲಿದೆ ಎಂದು ತಿಳಿದು ಬಂದಿದೆ. ಶಾಸಕರು ಪಟ್ಟಸ್ಥಳ ಅವರ ಹೆಸರಿಗೆ ಆದದ್ದು ಹೇಗೆ ಎಂಬುದನ್ನು ತಿಳಿಯುವ ಕೆಲಸ ಮಾಡಬೇಕಾಗಿತ್ತು ಎಂದು ಗಿರಿಧರ ನಾಯ್ಕ ಅವರು ಹೇಳಿದರು.
ನನ್ನ ಮೇಲೂ ಎಫ್ಐಆರ್:
ಪೊಲೀಸ್ ಠಾಣೆಯಲ್ಲಿ ಎಸ್ಸಿ, ಎಸ್ಟಿ ಸಭೆಯಲ್ಲಿ ಇದೇ ವಿಚಾರ ಪ್ರಸ್ತಾಪವಾದಾಗ, ಅದು ಸಿವಿಲ್ ಮೇಟರ್ ಆಗಿದ್ದ ಹಿನ್ನೆಲೆಯಲ್ಲಿ ಠಾಣೆ ಎಸ್.ಐ ಅವರು ಹೇಳಿದಕ್ಕೆ ನಾನು ಜಾಗನ್ನು ನೋಡಲು ಹೋಗಿದ್ದೆ. ಆದರೆ ಸಂಪರ್ಕ ರಸ್ತೆಗೆ ಅಡ್ಡಿ ಮಾಡಿದವರೇ ಹಲ್ಲೆ ಮಾಡಿದ್ದಾರೆಂದು ನನ್ನ ಮೇಲೆ ದೂರು ನೀಡಿ, ಎಫ್ಐಆರ್ ದಾಖಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಪ್ರಮೋದ್, ಕಾಲೋಲನಿ ನಿವಾಸಿಗಳಾದ ಚಂದ್ರಶೇಖರ್, ಆಶಾ ಕಾರ್ಯಕರ್ತೆ ದೇವತಿ, ಪ್ರತಿಮಾ ಅವರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಗೆ ಆಗಮಿಸಿದ ಕಾಲೋನಿಯ ಮಂದಿ
ಕಾಲೋನಿಯ 13 ಪರಿಶಿಷ್ಟ ಪಂಗಡದ ಮನೆಗಳಿಗೆ ಸಂಪರ್ಕ ರಸ್ತೆಯಿಲ್ಲ. ನಮಗೆ ರಸ್ತೆ ಕೊಡಿಸಿ. ನಮ್ಮ ಪರವಾಗಿ ಮೂಲಸೌಕರ್ಯ ಒದಗಿಸಲು ಪ್ರಯತ್ನ ಮಾಡುತ್ತಿರುವ ಗಿರಿಧರ ನಾಯ್ಕ ಅವರ ವಿರುದ್ಧ ಠಾಣೆಗೆ ಸ್ಥಳೀಯ ವ್ಯಕ್ತಿ ಸುಳ್ಳು ದೂರು ನೀಡಿದ್ದಾರೆ. ನಮಗೆ ಮೂಲಸೌಕರ್ಯ ಒದಗಿಸುವಂತೆ ಕಾಲೋನಿಯ ಸುಮಾರು 50ಕ್ಕೂ ಮಿಕ್ಕಿ ಮಂದಿ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು.