ಕೊತ್ತಂಬರಿ ಸೊಪ್ಪಿನಲ್ಲಿದೆ ಆರೋಗ್ಯ ರಕ್ಷಣೆಗೆ ಔಷಧಿ…

0

ಊಟದ ಸಾರಿಗೆ, ಸಂಜೆ ಚ್ಯಾಟ್ಸ್‌ಗಳಾದ ಚುರ್ಮುರಿ, ಮಸಾಲೆ ಪೂರಿಗಳಿಗೆ ಕೊತ್ತಂಬರಿ ಸೊಪ್ಪು ಇಲ್ಲದಿದ್ದರೆ ರುಚಿಯಾಗಲಾರದು. ಕೆಲವು ಸಾಂಬಾರುಗಳಿಗೆ ಕೊತ್ತಂಬರಿ ಇಲ್ಲದಿದ್ದರೂ ರುಚಿಸದು. ಆಹಾರವಾಗಿ ಹೇಗೆ ಪ್ರಮುಖ ಪಾತ್ರವಹಿಸುತ್ತದೋ ಹಾಗೆಯೇ ಆರೋಗ್ಯ ರಕ್ಷಣೆಗೆ ಔಷಧಿಯಾಗಿಯೂ ಅಷ್ಟೇ ಪ್ರಾಮುಖ್ಯತೆ ಇದೆ. ಭಾರತದಾದ್ಯಂತ ಎಲ್ಲಾ ಋತುಗಳಲ್ಲಿ ಬೆಳೆಯುವ ಗಿಡ. ನಮ್ಮ ಮನೆ ಖರ್ಚಿಗೆ ಚಟ್ಟಿಯಲ್ಲಿ ಬೀಜ ಹಾಕಿ ಸುಲಭವಾಗಿ ಬೆಳೆಸಿ ಉಪಯೋಗಿಸಬಹುದು. ತರಕಾರಿ ಅಂಗಡಿಯಲ್ಲಿ ಅರ್ಧದಿಂದ ಒಂದು ಅಡಿ ಎತ್ತರದ ಗಿಡಗಳು ಸಿಗುತ್ತವೆ. ಆದರೆ 2-3 ಅಡಿ ಬೆಳೆದು ಗುಚ್ಚಾಕಾರದಲ್ಲಿ ಹೂ ಬಿಟ್ಟು ಕೊತ್ತಂಬರಿಯನ್ನು ಕೊಡುತ್ತದೆ. ಶರೀರದ ಉರಿ ದಾಹ ಕಡಿಮೆ ಮಾಡಲು ನಮ್ಮ ಆಡುಭಾಷೆಯಲ್ಲಿ ಹೇಳುವಂತೆ ಉಷ್ಣ ಕಡಿಮೆ ಮಾಡಲು ಕೊತ್ತಂಬರಿ ಜೀರಿಗೆ ಕಷಾಯ ಅಥವಾ ಬೆಲ್ಲ ಸೇರಿಸಿ ಹಾಲು ಹಾಕಿದ ಕಷಾಯ ಕುಡಿಯದವರು ಇರಲಿಕ್ಕಿಲ್ಲ.


ಕೊತ್ತಂಬರಿ ಎಲೆ:
ತಲೆ ನೋವು ಇರುವಾಗ ಎಲೆಯನ್ನು ಅಥವಾ ದಂಡು ಸಹಿತ ನೀರಲ್ಲಿ ಅರೆದು ಹಣೆಗೆ ಲೇಪ ಮಾಡಿದರೆ ಕಡಿಮೆಯಾಗುವುದು. ಗೇರು ಬೀಜದ ಸೂನೆ ತಾಗಿ ಸುಟ್ಟಂತೆ ಚರ್ಮ ಕಂಡು ಬರುವಾಗ ಇದನ್ನು ಅರೆದು ಹಚ್ಚಿದರೆ ಕಡಿಮೆಯಾಗುತ್ತದೆ. ಗೇರು ಬೀಜದಂತೆ ಗಟ್ಟದ ಗೇರು (ಭಲ್ಲಾತಕ) ಎಂಬ ಔಷಧಿಯೂ ಇದೆ. ಕೆಲವರು ಅದನ್ನು ಕೈಯಲ್ಲಿ ಮುಟ್ಟಿದರೆ ದಡಿಕೆ ಏಳುತ್ತದೆ. ಅಲರ್ಜಿಯಂತೆ ಚರ್ಮ ದಪ್ಪವಾಗಿ ತುರಿಕೆ ಪ್ರಾರಂಭವಾದರೆ ಎಲೆಯನ್ನು ಅರೆದು ಹಚ್ಚಿ ಹತ್ತು ಎಂ.ಎಲ್.ನಷ್ಟು ಗಿಡದ ಜ್ಯೂಸ್ ಕುಡಿದರೆ ಕಡಿಮೆಯಾಗುವುದು. ಬಾಯಿ ಹುಣ್ಣು ಇರುವಾಗ ಗಿಡದ ಜ್ಯೂಸನ್ನು ಬಾಯಲ್ಲಿ ಇರಿಸಿ ಉಗಿದರೆ ಕಡಿಮೆಯಾಗುವುದು. ಸರ್ಪ ಸುತ್ತಿನಲ್ಲಿ, ಮೈಯಲ್ಲಿ ಉರಿ ಇರುವಾಗಲೂ ಇದನ್ನು ಅರೆದು ಹಚ್ಚುವುದರಿಂದ ಕಡಿಮೆಯಾಗುವುದು.


ಕೊತ್ತಂಬರಿ ಬೀಜ :
ಎದೆ ಉರಿ:
ಅಸಿಡಿಟಿಯಿಂದ ಎದೆ ಉರಿ ಇರುವಾಗ ಅರ್ಧ ಚಮಚ ಕೊತ್ತಂಬರಿಯನ್ನು ತೊಳೆದು ಬಾಯಲ್ಲಿ ಜಗಿದು ನಿಧಾನವಾಗಿ ನುಂಗಿದರೆ ಕಡಿಮೆಯಾಗುತ್ತದೆ.
ಮೈ ಉರಿ, ಬಾಯಾರಿಕೆ : ಶರೀರದ ಉರಿಯ(ದಾಹ) ಅಂಶವನ್ನು ಕಡಿಮೆಮಾಡುವ ಉತ್ತಮ ಅಡುಗೆ ಮನೆಯ ಔಷಧಿ. ಹೆಚ್ಚಿನವರು ಜೀರಿಗೆ ಕೊತ್ತಂಬರಿ ಕಷಾಯ ಕುಡಿಯುತ್ತಿರುತ್ತಾರೆ. ಆದರೆ ಕೇವಲ ಕೊತ್ತಂಬರಿ ಉರಿಗೆ ಹೆಚ್ಚು ಪರಿಣಾಮಕಾರಿ. ಇಂಜಿನಿಗೆ ಕೂಲೆಂಟ್ ಇದ್ದಂತೆ ನಮ್ಮ ಶರೀರಕ್ಕೆ ಕೂಲ್ ಉಂಟು ಮಾಡುವ ಸಾಂಬಾರ ಪದಾರ್ಥ.
10 ಗ್ರಾಂ ಕೊತ್ತಂಬರಿ ಪುಡಿಗೆ ಅರ್ಧ ಲೀಟರ್ ನೀರು ಹಾಕಿ ಚೆನ್ನಾಗಿ ಕುದಿಸಿ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಪ್ರತಿನಿತ್ಯ ಕುಡಿದರೆ ಅತಿಯಾದ ಬಾಯಾರಿಕೆ, ಹೊಟ್ಟೆ ಸಂಕಟ, ಮೈ ಉರಿಗಳು ಕಡಿಮೆಯಾಗುತ್ತದೆ. ಸಕ್ಕರೆ ಹಾಕದೆ ಕುಡಿದರೆ ಕೊಲೆಸ್ಟ್ರಾಲ್, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ ಎಂದು ಪ್ರಾಣಿಗಳಲ್ಲಿ ಪ್ರಯೋಗಿಸಿ ಪರಿಣಾಮ ಕಂಡು ಕೊಂಡಿದ್ದಾರೆ.


ಕೆಂಗಣ್ಣು : ಹಳ್ಳಿಗಳಲ್ಲಿ ಕೆಂಗಣ್ಣು ಇರುವಾಗ ಕೊತ್ತಂಬರಿ ಹಾಕಿಟ್ಟ ನೀರನ್ನು ಕಣ್ಣಿಗೆ ಬಿಡುತ್ತಾರೆ. ಆದರೆ ಕೊತ್ತಂಬರಿಯನ್ನು ಚೆನ್ನಾಗಿ ತೊಳೆದು ಪನ್ನೀರಿನಲ್ಲಿ (Rose water) ಹಾಕಿಟ್ಟು ಕಣ್ಣಿಗೆ ಹಾಕಿದರೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಕೊತ್ತಂಬರಿಯ ಅರ್ಧದಷ್ಟು ಶುಂಠಿ ಸೇರಿಸಿ ಕಷಾಯ ಮಾಡಿ ಕುಡಿದರೆ ಅಜೀರ್ಣ, ಜ್ವರ ಕಡಿಮೆಯಾಗುತ್ತದೆ.
ಕೊತ್ತಂಬರಿ, ಶುಂಠಿ ಕಷಾಯಕ್ಕೆ ಲಿಂಬೆ ಹುಳಿ ಹಿಂಡಿ ಕುಡಿದರೆ ಚಳಿಗಾಲದ ಜ್ವರ ಕಡಿಮೆಯಾಗುತ್ತದೆ.
ಪಿತ್ತದ ಲಕ್ಷಣ ಇರುವವರು, ತಿಂಗಳ ಋತುಸ್ರಾವ ಅತಿ ಇರುವವರು, ತಲೆ ತಿರುಗಿದಂತಾಗುವ ಲಕ್ಷಣಗಳಿರುವಾಗ ಕೊತ್ತಂಬರಿ ಕಷಾಯ ಅಥವಾ ಹಾಲು ಕಷಾಯ ನಿತ್ಯ ಕುಡಿಯಬೇಕು.
ಸಣ್ಣ ಪುಟ್ಟ ಗಂಟುನೋವು, ಸೊಂಟ ನೋವು ಇರುವವರು ಕೊತ್ತಂಬರಿ, ಜೀರಿಗೆಯೊಂದಿಗೆ ಹತ್ತು ಗ್ರಾಂ ನಷ್ಟು ಆಲುಂಬುಡದ ಬೇರು (castor)ಸೇರಿಸಿ ಕಷಾಯ ಮಾಡಿ ಕುಡಿದರೆ ಕಡಿಮೆಯಾಗುತ್ತದೆ.
ಅಡುಗೆ ಮನೆಯ ಕರಡಿಗೆಯಲ್ಲಿ ಯಾವಾಗಲೂ ಇರುವ ಕೊತ್ತಂಬರಿ ಬಗ್ಗೆ ತಿಳಿದು ಕೊಂಡರೆ ಆಹಾರವೂ ಆಗುತ್ತದೆ, ಔಷಧಿಯೂ ಆಗುತ್ತದೆ.

LEAVE A REPLY

Please enter your comment!
Please enter your name here