ಮುಂದೆ ಪ್ರತೀ ವಲಯ ಮಟ್ಟದಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ: ಶಾಸಕ ಅಶೋಕ್ ರೈ
ಪುತ್ತೂರು: ಬಿಜೆಪಿಗರ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ ಸಭೆಯು ಪುತ್ತೂರು,ಉಪ್ಪಿನಂಗಡಿ ಹಾಗೂ ವಿಟ್ಲ ಬ್ಲಾಕ್ ಮಟ್ಟದಲ್ಲಿ ನಡೆದಿದೆ, ಈ ಕಾರ್ಯಕ್ರಮ ಯಶಸ್ವಿಯಾಗಿದೆ, ಬಿಜೆಪಿ ಸುಳ್ಳನ್ನು ಎಳೆಎಳೆಯಾಗಿ ಜನರ ಮುಂದೆ ಬಿಚ್ಚಿಟ್ಟಿದ್ದೇವೆ, ಜನರಿಗೆ ಬಿಜೆಪಿ ಸುಳ್ಳು ಗೊತ್ತಾಗಿದೆ ಮುಂದೆ ಪ್ರತೀ ವಲಯ ಮಟ್ಟದಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಆಶೋಕ್ ರೈ ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜು.5ರಂದು ನಡೆದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷದ ವತಿಯಿಂದ ನಿರಂತರ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ನಡೆಯುತ್ತಿರುವುದು ಅಭಿನಂದನಾರ್ಹವಾಗಿದೆ. ಕರ್ನಾಟಕ ಕಾಂಗ್ರೆಸ್ ಸರಕಾರದ ಸಾಧನೆ,ಪಂಚ ಗ್ಯಾರಂಟಿ ಹಾಗೂ ಪುತ್ತೂರಿನ ಅಭಿವೃದ್ದಿಯನ್ನು ಮೆಚ್ಚಿ ಅನೇಕ ಮಂದಿ ಮೊನ್ನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಾವಿರಾರು ಮಂದಿ ಇತರೆ ಪಕ್ಷದ ಕಾರ್ಯಕರ್ತರು,ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದು ಅವರನ್ನು ಅತ್ಯಂತ ಗೌರವಯುತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕರು ತಿಳಿಸಿದರು.

ಬೂತ್ ಅಧ್ಯಕ್ಷರ ಮನೆಯಲ್ಲೇ ಸಭೆ
ಮುಂದೆ ಪ್ರತೀ ಬೂತ್ ಅಧ್ಯಕ್ಷರ ಮನೆಯಲ್ಲೇ ವಲಯ ಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಇದಕ್ಕೆ ಪ್ರತೀಯೊಬ್ಬರ ಸಹಕಾರ ಬೇಕು ಎಂದು ಶಾಸಕರು ತಿಳಿಸಿದರು.
ವೇದಿಕೆಯಲ್ಲಿ ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಸೇವಾದಳದ ಜೋಕಿಂ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀದರ್ ರೈ ಮಠಂತಬೆಟ್ಟು, ಪುತ್ತೂರು ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.