
ಪುತ್ತೂರು: ಸಾಧನೆಗೆ ಇಚ್ಛಾಶಕ್ತಿ ಅತ್ಯಂತ ಪ್ರಮುಖವಾಗಿದ್ದು, ವಿದ್ಯಾರ್ಥಿಗಳು ಸ್ಪಷ್ಟ ಗುರಿಯನ್ನು ಇರಿಸಿಕೊಂಡು ಏಕಮನಸ್ಕರಾಗಿ ಗುರಿಮುಟ್ಟಲು ಪ್ರಯತ್ನಿಸಿದರೆ ಎಲ್ಲವನ್ನೂ ಸಾಧಿಸಬಹುದು ಎಂದು ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಮನ:ಶಾಸ್ತ್ರಜ್ಞ ಹಾಗೂ ಸಲಹೆಗಾರ ದುರ್ಗಾಪರಮೇಶ್ವರ ಭಟ್ ಹೇಳಿದರು.
ಜು.5ರಂದು ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಜತಮಹೋತ್ಸವ ಸಭಾಭವನದಲ್ಲಿ ನಡೆದ 2025 – 26ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ‘ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ’ದ ಕುರಿತು ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಕೇವಲ ಯಾವುದೋ ಒಂದು ಉತ್ತಮ ಸಂಸ್ಥೆಗೆ ಮಕ್ಕಳನ್ನು ಸೇರಿಸಿದರೆ ಪೋಷಕರ ಜವಾಬ್ದಾರಿ ಅಲ್ಲಿಗೆ ಮುಗಿಯದು. ಮಕ್ಕಳ ನಿತ್ಯದ ಚಟುವಟಿಕೆಗಳ ಬಗ್ಗೆ ಗಮನ ನೀಡುವುದಷ್ಟೇ ಅಲ್ಲದೆ, ಚಟುವಟಿಕೆಗಳಿಗೆ ಸಹಕಾರವನ್ನು ಕೂಡ ಪೋಷಕರು ನೀಡಬೇಕು. ಮಕ್ಕಳನ್ನು ಸರಿಯಾದ ಸಮಯದಲ್ಲಿ ತಿದ್ದಿ ಸೂಕ್ತ ಮಾರ್ಗದರ್ಶನವನ್ನು ನೀಡಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದ ಸವಾಲುಗಳನ್ನು ಎದುರಿಸಬೇಕಾದರೆ, ಇಂದೇ ನಾವು ಅವರನ್ನು ಅಂತಹ ಸವಾಲುಗಳಿಗೆ ಸಿದ್ಧಪಡಿಸಬೇಕಾಗಿದ್ದು, ಅಂತಹ ಮನಸ್ಥಿತಿಯನ್ನು ಮಕ್ಕಳಲ್ಲಿ ನಾವು ಬೆಳೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಯಿ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ.ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಮಕ್ಕಳಿಗೆ ಸರಿಯಾದ ಜೀವನ ಮೌಲ್ಯಗಳನ್ನು ನೀಡುವ ಮೂಲಕ ನಮ್ಮ ಸಮಾಜಕ್ಕೆ ಒಳಿತನ್ನು ಮಾಡುವಂತೆ ಬೆಳೆಸಬೇಕು. ಮಕ್ಕಳ ಪ್ರತಿ ಹಂತದ ಬೆಳವಣಿಗೆಯಲ್ಲಿ ತಂದೆ-ತಾಯಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಸಂಬಂಧಗಳಿಗೆ ಬೆಲೆಯನ್ನು ನೀಡಲು ಹೇಳಿಕೊಡಬೇಕು. ಮನೆಯಲ್ಲಿ ಉತ್ತಮವಾದ ವಾತಾವರಣ, ಸಮತೋಲನದ ಬದುಕು, ಒಳ್ಳೆಯ ಆಚಾರ ವಿಚಾರ, ದೇವರಲ್ಲಿ ಭಯ-ಭಕ್ತಿ ಹಾಗೂ ಆತ್ಮವಿಶ್ವಾಸದ ಅರಿವು ಮೂಡಿಸುವ ಜವಾಬ್ದಾರಿ ಹೆತ್ತವರದ್ದಾಗಿದೆ. ಮನೆಯನ್ನು ಸ್ವರ್ಗವನ್ನಾಗಿ ಮಾಡಿ ಸಂತಸ, ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
2024 – 25ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಡಾ. ಶ್ರೀ ಪ್ರಕಾಶ್ ಬಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ಮಾಯಿ ದೆ ದೇವುಸ್ ಚರ್ಚ್ ನ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ ಹಾಗೂ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಡಾ. ಶ್ರೀ ಪ್ರಕಾಶ್ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ರಕ್ಷಕ – ಶಿಕ್ಷಕ ಸಂಘದ ಕಾರ್ಯದರ್ಶಿ ಅಶ್ವಿನಿ ಕೆ ಸ್ವಾಗತಿಸಿ, 2024-25ನೇ ಸಾಲಿನ ಲೆಕ್ಕಪತ್ರವನ್ನು ಕೋಶಾಧಿಕಾರಿ ಸಂಜಯ್ ಎಸ್ ಮಂಡಿಸಿ, ವಂದಿಸಿದರು. ಉಷಾ ಎ ಕಾರ್ಯಕ್ರಮ ನಿರೂಪಿಸಿದರು.