ಮ್ಯಾರಥಾನ್ನಲ್ಲಿ ಶಿವಾನಂದ ಶಿರಾಗಿ ಪ್ರಥಮ
ಪುತ್ತೂರು: ದಿ ಪುತ್ತೂರು ಕ್ಲಬ್ ವತಿಯಿಂದ ಬಾಕ್ಕಾರ್ಡ್ ಮತ್ತು ಬಿಂದು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪುತ್ತೂರು ಮಾನ್ಸೂನ್ ರನ್ -2025 ‘ಬಲೆ ಬಲಿಪುಗ’ ಮಿನಿ ಮ್ಯಾರಥಾನ್ ಜು.6ಕ್ಕೆ ಪುತ್ತೂರಿನಲ್ಲಿ ನಡೆದಿದೆ.1 ಸಾವಿರಕ್ಕೂ ಮಿಕ್ಕಿ ಸ್ಪರ್ಧಿಗಳು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.
ಪುತ್ತೂರನ್ನು ಭಾರತದ ರನ್ನಿಂಗ್ ಮ್ಯಾಪ್ನಲ್ಲಿ ಹಾಕುವ ಗುರಿಯನ್ನಿಟ್ಟುಕೊಂಡು ಮೊದಲ ಬಾರಿಗೆ ಆಯೋಜಿಸಲಾಗಿದ್ದ ಮ್ಯಾರಥಾನ್ 21 ಕಿ.ಮೀ. ನಡೆಯಿತು.18 ವರ್ಷ ಮೇಲಿನವರಿಗೆ 21 ಕಿ.ಮೀ, 15 ವರ್ಷ ಮೇಲ್ಪಟ್ಟವರಿಗೆ 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಸ್ಪರ್ಧೆ ಮಾಡಲಾಗಿತ್ತು.ಬೆಳಗ್ಗೆ ಗಂಟೆ 6.15 ಸುಮಾರಿಗೆ ಮ್ಯಾರಥಾನ್ಗೆ ದಿ ಪುತ್ತೂರು ಕ್ಲಬ್ನಲ್ಲಿ ಚಾಲನೆ ನೀಡಲಾಯಿತು.
ಬಾಕ್ಕಾರ್ಡ್ ಇದರ ಮುಖ್ಯ ಸಿಇಒ ರವೀಂದ್ರ ರೈ, ಬಿಂದು ಕಂಪೆನಿಯ ನಾಗರಾಜ್, ಪ್ರೊ| ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಬಾಟ ಕಂಪೆನಿಯ ಮುಖ್ಯಸ್ಥರ ಸಹಿತ ಹಲವಾರು ಮಂದಿ ಪ್ರಾಯೋಜಕರು ಶ್ವೇತವರ್ಣದ ಭಾವುಟವನ್ನು ತೋರಿಸುವ ಮೂಲಕ ಮ್ಯಾರಥಾನ್ಗೆ ಚಾಲನೆ ನೀಡಿದರು.
ದಿ ಪುತ್ತೂರು ಕ್ಲಬ್ನ ಅಧ್ಯಕ್ಷ ಡಾ.ದೀಪಕ್ ರೈ, ಉಪಾಧ್ಯಕ್ಷ ದೀಪಕ್ ಕೆ.ಪಿ, ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋ, ಬಿಂದು ಕಂಪೆನಿಯ ಮಾರ್ಕೆಟಿಂಗ್ ಮುಖ್ಯಸ್ಥ ಹರಿಪ್ರಸಾದ್, ದಿ ಪುತ್ತೂರು ಕ್ಲಬ್ನ ಕೋಶಾಧಿಕಾರಿ ದಿವಾಕರ್ ಕೆ.ಪಿ, ಕಾರ್ಯದರ್ಶಿ ವಿಶ್ವಾಸ್ ಶೆಣೈ, ಜಂಟಿ ಕಾರ್ಯದರ್ಶಿ ಪ್ರಭಾಕರ ಎಂ, ನಿರ್ದೇಶಕರಾದ ಶೇಟ್ ಇಲೆಕ್ಟ್ರೋನಿಕ್ಸ್ನ ಮಾಲಕ ರೂಪೇಶ್ ಶೇಟ್, ಚಂದ್ರಶೇಖರ್, ಬೂಡಿಯಾರು ರಾಧಾಕೃಷ್ಣ ರೈ, ಪ್ರಶಾಂತ್ ಶೆಣೈ, ಶಿವರಾಮ ಆಳ್ವ, ಮನೋಜ್ ರೈ ನಿತಿನ್ ಪಕ್ಕಳ, ಝೇವಿಯರ್ ಡಿ’ಸೋಜ, ಜಯಂತ ನಡುಬೈಲು, ಸಚ್ಚಿದಾನಂದ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪುತ್ತೂರು ಕ್ಲಬ್ನಿಂದ ಆರಂಭ ಸೇಡಿಯಾಪಿನಿಂದ ರಿಟರ್ನ್:
ದಿ ಪುತ್ತೂರು ಕ್ಲಬ್ನಿಂದ ಮ್ಯಾರಥಾನ್ ಆರಂಭಗೊಂಡು, ರೈಲ್ವೇ ಬೈಪಾಸ್ ರಸ್ತೆಯಾಗಿ ದರ್ಬೆ, ಬೊಳುವಾರು ಮುಖ್ಯರಸ್ತೆಯಾಗಿ, ಉಪ್ಪಿನಂಗಡಿ ರಸ್ತೆ, ಸೇಡಿಯಾಪು ತನಕ ಹೋಗಿ ಅಲ್ಲಿಂದ ಹಿಂದಕ್ಕೆ ಬಂದ ರಸ್ತೆಯಲ್ಲೇ ಬಂದು ದಿ ಪುತ್ತೂರು ಕ್ಲಬ್ ಅನ್ನು ಸ್ಪರ್ಧಿಗಳು ತಲುಪಿದರು.ದಾರಿಯುದ್ದಕ್ಕೂ ಹಲವು ಕಡೆ ಪುತ್ತೂರು ಸಂಚಾರ ಪೊಲೀಸರು ಹಾಗೂ ಆಯೋಜಕರ ಕಡೆಯಿಂದ ಸ್ವಯಂ ಸೇವಕರು ಮಾರ್ಗಸೂಚಿಗಳನ್ನು ನೀಡುವಲ್ಲಿ ಹಾಗು ವಾಹನ ಸಂಚಾರ ನಿಯಂತ್ರಣ ಮಾಡುವಲ್ಲಿ ಸಹಕರಿಸಿದರು.ಬೆಳಗ್ಗಿನ ಸಮಯ ಆಗಿದ್ದರಿಂದ ವಾಹನ ಸಂಚಾರ ವಿರಳವಾಗಿದ್ದು,ಸ್ಪರ್ಧಿಗಳಿಗೆ ರಸ್ತೆಯಲ್ಲಿ ಓಡಲು ಅನುಕೂಲವಾಗಿತ್ತು.ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋ ಅವರ ನೇತೃತ್ವದಲ್ಲಿ ಎಲ್ಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಸಹಕರಿಸಿದರು.ಜೊತೆಗೆ ವಿವೇಕಾನಂದ, ಸುದಾನ ವಸತಿಯುತ ಶಾಲೆ, ಸಂತ ಫಿಲೋಮಿನಾ ಹಾಗು ಅಕ್ಷಯ ಕಾಲೇಜಿನಿಂದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು.

ಸಮಯ ನಿಗದಿಗೆ ತಾಂತ್ರಿಕತೆ ಅಳವಡಿಕೆ:
ಮ್ಯಾರಥಾನ್ನಲ್ಲಿ ಭಾಗವಹಿಸಿದವರು ಓಡುವ ವೇಗ ಮತ್ತು ಸಮಯ ನಿಗದಿಗೆ ಹಾಗು ಅವರನ್ನು ಮಾನಿಟರ್ ಮಾಡಲು ಇದೇ ಮೊದಲ ಬಾರಿಗೆ ತಾಂತ್ರಿಕತೆ ಅಳವಡಿಸಲಾಗಿದ್ದು, ಮ್ಯಾರಥಾನ್ಗೆ ಎಲೆಕ್ಟ್ರೋನಿಕ್ ಟೈಮಿಂಗ್ಸ್ ಅಳವಡಿಸಲಾಗಿತ್ತು.ಪ್ರತಿ ಕ್ರೀಡಾಪಟುಗಳ ಶರ್ಟ್ ಟ್ಯಾಗ್ನಲ್ಲಿ ಎಲೆಕ್ಟ್ರೋ ಚಿಪ್ ಅಳವಡಿಸಲಾಗಿತ್ತು.