





ಪುತ್ತೂರು: ಮುಂಡೂರು ಗ್ರಾಮದಲ್ಲಿ ಗೋಮಾಳಕ್ಕೆ ಮೀಸಲಿರಿಸಿದ ಜಾಗವನ್ನು ಗೋ ಶಾಲೆ ಆರಂಭಿಸಲು ಪುತ್ತಿಲ ಪರಿವಾರ ಟ್ರಸ್ಟ್ ಗೆ ನೀಡಬೇಕೆಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿಯ ಕುರಿತು ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಯವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಟ್ರಸ್ಟ್ ನ ಪದಾಧಿಕಾರಿಗಳು ತಿಳಿಸಿದ್ದಾರೆ, ಪುತ್ತೂರಿನಲ್ಲಿ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗೋ ಶಾಲೆಬೇಕೆಂದು ಸಾರ್ವಜನಿಕರ ಅಭಿಪ್ರಾಯದಂತೆ ಪೇಜಾವರ ಸ್ವಾಮೀಜಿಗಳು ಕಳೆದ ವರ್ಷದ ಶ್ರೀನಿವಾಸ ಕಲ್ಯಾಣ ಸಂದರ್ಭದಲ್ಲಿ ಗೋ ಶಾಲೆ ಆರಂಭಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದರು.





ಈ ಹಿನ್ನೆಲೆಯಲ್ಲಿ ಟ್ರಸ್ಟ್ ಗೋ ಪ್ರೇಮಿಗಳ ಸಲಹೆ ಪಡೆದು ಸರಕಾರ ಜಾಗ ನೀಡಿದರೆ ವರ್ಷದ ಒಳಗೆ ಸಾರ್ವಜನಿಕರ ಸಹಕಾರದೊಂದಿಗೆ ಗೋ ಶಾಲೆ ಆರಂಭಿಸುವುದೆಂದು ಸಂಕಲ್ಪ ಮಾಡಿದ್ದು ಜಾಗವನ್ನು ಮಂಜೂರು ಮಾಡಿದಲ್ಲಿ ಮುಂದಿನ ದಿನದಲ್ಲಿ ಸುಸಜ್ಜಿತ ಗೋ ಶಾಲೆ ಪುತ್ತೂರಿನಲ್ಲಿ ನಿರ್ಮಾಣವಾಗಿ ಗೋ ಪ್ರೇಮಿಗಳ ಬಹುವರ್ಷದ ಕನಸು ನನಸಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಕಾರ್ಯದರ್ಶಿ ರವಿ ರೈ, ಪ್ರಮುಖರಾದ ಉಮೇಶ್ ಕೊಡಿಬೈಲು, ಗಣೇಶ್ ಭಟ್, ಅನಿಲ್ ತೆಂಕಿಲ, ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.









