ನಿಡ್ಪಳ್ಳಿ: ಪಾಣಾಜೆ ಗ್ರಾಮದ ಸೂರಂಬೈಲು ಶಾಲೆ, ತೂಂಬಡ್ಕ, ಭರಣ್ಯ, ರಣಮಂಗಲ ದೇವಸ್ಥಾನ ಮತ್ತು ಜಾಂಬ್ರಿ ಸಂಪರ್ಕ ರಸ್ತೆ ಹೊಂಡ ಗುಂಡಿಗಳಿಂದ ಹದಗೆಟ್ಟಿದ್ದು ದುರಸ್ತಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇತಿಹಾಸ ಪ್ರಸಿದ್ದ ಜಾಂಬ್ರಿ ಗುಹೆ ಮತ್ತು ಅಲ್ಲಿಯ ಜಲಪಾತ, ನಯನ ಮನೋಹರ ಪ್ರಕೃತಿಯನ್ನು ವೀಕ್ಷಿಸಲು ಹೊರ ಊರಿನಿಂದಲೂ ಪ್ರವಾಸಿಗರು ಬರುತ್ತಿರುತ್ತಾರೆ. ಅಲ್ಲದೆ ಗ್ರಾಮದ ದೇವಸ್ಥಾನ, ಶಾಲೆಗೆ ಹೋಗುವ ರಸ್ತೆ ಈ ರೀತಿ ಹದಗೆಟ್ಟಿದ್ದು ಸಂಚಾರಕ್ಕೆ ಬಹಳ ಸಮಸ್ಯೆಯಾಗಿದೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಇಲ್ಲಿನ ಯುವಕರು ಸೇರಿ ಹೊಂಡ ಮುಚ್ಚುವ ಶ್ರಮದಾನ ಮಾಡುತ್ತಾರೆ.ಆದರೆ ಮಳೆಗಾಲದಲ್ಲಿ ಮತ್ತೆ ಹೊಂಡ ಗುಂಡಿ ಬಿದ್ದು ಜನರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಆದುದರಿಂದ ಅಧಿಕಾರಿಗಳು ಈ ರಸ್ತೆಯನ್ನು ಆದ್ಯತೆಯ ಮೇರೆಗೆ ಮರು ಡಾಮರೀಕರಣ ಮಾಡುವ ಮೂಲಕ ಖಾಯಂ ಆಗಿ ಉಳಿಯುವಂತೆ ಮಾಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರತಿ ವರ್ಷ ಶ್ರಮದಾನ ಮಾಡುತ್ತೇವೆ
ಈ ರಸ್ತೆಯಲ್ಲಿ ಪ್ರತಿನಿತ್ಯ ಹೆಚ್ಚು ವಾಹನಗಳು ಸಂಚರಿಸುತ್ತವೆ. ಆದುದರಿಂದ ರಸ್ತೆ ತೀರಾ ಹದಗೆಟ್ಟಿದೆ. ಇಲ್ಲಿನ ಸಂಘ ಸಂಸ್ಥೆಗಳು ಮತ್ತು ಊರಿನ ಯುವಕರು ಸೇರಿ ಪ್ರತಿ ವರ್ಷ ಶ್ರಮದಾನದ ಮೂಲಕ ಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಇದರ ಕಡೆ ಗಮನ ಹರಿಸಿ ತಕ್ಷಣ ಸ್ಪಂದಿಸಲಿ.
ಪ್ರದೀಪ್ ಪಾಣಾಜೆ, ಸ್ಥಳೀಯರು.
ಪಂಚಾಯತ್ ನಿಂದ ದುರಸ್ತಿ ಸಾಧ್ಯವಿಲ್ಲ
ಈ ರಸ್ತೆ ತುದಿಯಿಂದ ತುದಿವರೆಗೆ ಗುಂಡಿ ಬಿದ್ದಿದೆ. ಕಳೆದ ಬೇಸಿಗೆ ಕಾಲದಲ್ಲಿ ನಾವು ಶ್ರಮದಾನದ ಮೂಲಕ ಗುಂಡಿ ಮುಚ್ಚುವ ಕೆಲಸ ಮಾಡಿದ್ದೇವೆ. ದುರಸ್ತಿಗಾಗಿ ಅನುದಾನಕ್ಕೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಶಾಸಕರಿಗೆ ಒಂದು ವರ್ಷದ ಹಿಂದೆ ಬರೆಯಲಾಗಿದೆ. ಆದರೆ ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೋಟೆ ಎಂಬಲ್ಲಿ ಅತಿ ಹೆಚ್ಚು ಕೆಟ್ಟು ಹೋಗಿದೆ. ತಕ್ಷಣ ಇಲಾಖೆ ಸ್ಪಂದಿಸಲಿ ಎಂಬುದೇ ನಮ್ಮ ಬೇಡಿಕೆಯಾಗಿದೆ.
ಮೋಹನ ನಾಯ್ಕ ತೂಂಬಡ್ಕ, ಪಂಚಾಯತ್ ವಾರ್ಡ್ ಸದಸ್ಯರು