ಪುತ್ತೂರು: ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡಮಿಯ ಹಿರಿಯ ವಿದ್ಯಾರ್ಥಿಗಳು, ಶ್ರೀಪಂಚಲಿಂಗೇಶ್ವರ ಫ್ರೌಢಶಾಲೆ ಈಶ್ವರಮಂಗಲ ಹಾಗೂ ಅರಣ್ಯ ಇಲಾಖೆ ಪುತ್ತೂರು ಇವರ ಸಹಯೋಗದೊಂದಿಗೆ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡಮಿಯ(ರಿ) ಇದರ 30ನೇ ವರ್ಷದ ಅಂಗವಾಗಿ ಸಾಮಾಜಿಕ ಚಟುವಟಿಕೆ ಪ್ರಕೃತಿ ಸಂಸ್ಕೃತಿ ಹಾಗೂ ವನಮಹೋತ್ಸವ ಕಾರ್ಯಕ್ರಮ ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ಫ್ರೌಢಶಾಲೆಯಲ್ಲಿ ನಡೆಯಿತು.

ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡಮಿಯ ವಿದ್ವಾನ್ ದೀಪಕ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬದಲಾದ ಕಾಲಘಟ್ಟದಲ್ಲಿ ಪ್ರಕೃತಿಯಲ್ಲಿ ತುಂಬಾ ವ್ಯತ್ಯಾಸ ಆಗಿದೆ. ಭಾರತೀಯ ಪರಂಪರೆಯಲ್ಲಿ ಪ್ರಕೃತಿ ಅವಿಭಾಜ್ಯ ಅಂಗವಾಗಿದೆ. ಪ್ರಕೃತಿ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಪ್ರಕೃತಿಯನ್ನು ಉಳಿಸಿಕೊಳ್ಳುವ ಕಾಲ ಬಂದಿದೆ. ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ನಾವು ಉಳಿಸಬೇಕು. ಪ್ರಕೃತಿ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿ ಎಲ್ಲರೂ ಪ್ರಕೃತಿ ಪ್ರೀತಿಸಿ ಗಿಡ ನೆಡಿ ಎಂದರು.

ಮುಖ್ಯ ಅತಿಥಿ, ಪುತ್ತೂರು ತಾಲೂಕು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಮಾತನಾಡಿ ಭಾರತೀಯ ಸಂಸ್ಕೃತಿ ಮತ್ತು ಪ್ರಕೃತಿ ಅವಿಬಾಜ್ಯ ಅಂಗವಾಗಿದೆ. ವೃಕ್ಷನ್ನು ಯಾರು ಉಳಿಸುತ್ತಾರೊ ಅವರು ಉಳಿಯುತ್ತಾರೆ. ಕೈಗಾರಿಕೆ, ಉದ್ಯಮಗಳಿಂದ ಆಮ್ಲಜನಕದ ಕೊರತೆ ಕಾಡುತ್ತಿದೆ. ಮರಗಳಿಂದ ಆಮ್ಲಜನಕ ಸಿಗುತ್ತದೆ. ಪರಿಸರ ಹಾಳಾಗುತ್ತಿದೆ. ನೀರು ಭೂಮಂಡಲದ ಮೊದಲ ಸೃಷ್ಟಿಯಾಗಿದೆ. ಪ್ರಕೃತಿಯನ್ನು ನಾವು ಆರಾಧಿಸುತ್ತೇವೆ, ಆದುದರಿಂದ ಪ್ರಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಗುರುಪ್ರಸಾದ್ ಐ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿ ವನಮಹೋತ್ಸವ ಕೂಡ ಹಬ್ಬವಾಗಿದೆ. ನಾವು ಅನುಭವಿಸುವ ಗಾಳಿ, ಮರಗಳು ನಮ್ಮ ಹಿರಿಯರು ಬಿಟ್ಟು ಕೊಟ್ಟ ಆಸ್ತಿ. ಇದನ್ನು ಮುಂದಿನ ಪೀಳಿಗೆಗೆ ಉಳಿಸವುದೇ ನಮ್ಮ ಆಸ್ತಿಯಾಗಿದೆ. ಗಿಡ ನೆಟ್ಟ ಕೂಡಲೇ ಫಲ ಬರುವುದಿಲ್ಲ. ಅದನ್ನು ಪೋಷಿಸಿದಾಗ ಮುಂದಿನ ಪೀಳಿಗೆಗೆ ಅದರ ಫಲ ಸಿಗುತ್ತದೆ ಎಂದು ಹೇಳಿದರು. ಅದ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ಮಾತನಾಡಿ ಕಾಡು ಮೊದಲಿನ ಹಾಗೆ ಇಲ್ಲ. ಕಾಡು ಇಂದು ನಶಿಸುತ್ತಾ ಇದೆ. ಕಾಡನ್ನು ನಾವೇ ಹಾಳು ಮಾಡಿದ್ದೇವೆ. ಇದರಿಂದ ಕಾಡಿನ ಪ್ರಾಣಿ, ಪಕ್ಷಿಗಳು ನಾಡಿಗೆ ಬರುತ್ತಿದೆ. ಸಸ್ಯಗಳಲ್ಲಿ ಔಷಧೀಯ ಗುಣಗಳಿವೆ. ಇದನ್ನು ನಾವು ಉಪಯೋಗಿಸಬೇಕು. ಇದರಿಂದ ನಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ. ಆದುದರಿಂದ ನಾವೆಲ್ಲರೂ ಗಿಡ, ಮರಗಳನ್ನು ಬೆಳೆಸೋಣ ಇದರಿಂದ ಸಂಸ್ಕೃತಿಯೂ ಉಳಿಯುತ್ತದೆ ಎಂದರು.
ಹಿರಿಯ ವಿದ್ಯಾರ್ಥಿ ದಾಮೋದರ ಪಾಟಾಳಿ, ಶ್ರೀಪಂಚಲಿಂಗೇಶ್ವರ ಫ್ರೌಢಶಾಲೆಯ ಸಂಚಾಲಕ ಸರ್ವತ್ತೋಮ ಬೋರ್ಕರ್, ನಿವೃತ್ತ ಮುಖ್ಯ ಶಿಕ್ಷಕ ನಾಗಪ್ಪಯ್ಯ ವಿ., ನಿವೃತ್ತ ಮುಖ್ಯಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಶುಭಹಾರೈಸಿದರು. ಶ್ರೀಪಂಚಲಿಂಗೇಶ್ವರ ಫ್ರೌಢಶಾಲೆಯ ಮುಖ್ಯಶಿಕ್ಷಕಿ ವನಿತಾ ಸ್ವಾಗತಿಸಿದರು. ಶಿಕ್ಷಕಿ ಸುಪ್ರಭಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮುರಳಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳಾದ ಚೇತನಾ ಐ, ಸುಷ್ಮಾ, ಆಶಿಶ್ ಎಂ. ಮೆಣಸಿನಕಾನ ಹಾಗೂ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದರು. ಸುಮಾರು ೨೫೦ ವಿದ್ಯಾರ್ಥಿಗಳಿಗೆ ಗಿಡ ವಿತರಿಸಲಾಯಿತು. ಬಳಿಕ ಶಾಲಾ ಪರಿಸರದಲ್ಲಿ ವನಮಹೋತ್ಸವ ನಡೆಸಲಾಯಿತು. ಹಿರಿಯ ವಿದ್ಯಾರ್ಥಿ ಚೇತನಾರವ ಪ್ರಾಯೋಜಕತ್ವದಲ್ಲಿ ಸಿಹಿತಿಂಡಿ ವಿತರಿಸಲಾಯಿತು.