ಸಂಪ್ಯದಲ್ಲಿ ಪಿಎಂ ಜನೌಷಧಿ ಕೇಂದ್ರ ಶುಭಾರಂಭ

0

ಪುತ್ತೂರು: ಬಡವರಿಗೆ ಕೈಗೆಟಕುವ ದರದಲ್ಲಿ ಔಷಧಿಗಳನ್ನು ನೀಡುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವು ಪುತ್ತೂರಿನ ಸಂಪ್ಯದಲ್ಲಿರುವ ಎಸ್.ಎ.ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿದೆ. ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಿಬ್ಬನ್ ಕತ್ತರಿಸಿ ದೀಪ ಬೆಳಗಿಸುವುದರ ಮೂಲಕ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ನಾವೆಲ್ಲರೂ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರಜೆಗಳು ಆರೋಗ್ಯವಂತರಾಗಿದ್ದರೆ ಈ ದೇಶ ಕೂಡ ಆರೋಗ್ಯವಾಗಿರುತ್ತದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆದರು. ಇದರಿಂದಾಗಿ ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ಬಡ ಜನರ ಕೈಸೇರುತ್ತಿದೆ ಎಂದರು.


ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರೋಗ್ಯವಂತನಾಗಿರಲು ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡುವುದು ಜನರ ಔಷಧಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪುತ್ತೂರು ನಗರದಲ್ಲಿ ಸುಮಾರು ಒಂಬತ್ತು ಕಡೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಬದಲಾದ ಜೀವನಶೈಲಿಯಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಔಷಧಿ ವೆಚ್ಚಗಳೂ ದುಬಾರಿಯಾಗಿವೆ. ಈ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರವೇ ಮುಂದೆ ಬಂದು ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಈ ಯೋಜನೆಯ ಆರಂಭದಲ್ಲಿ ಅಪಪ್ರಚಾರಗಳು ನಡೆದವು. ಆದರೆ ಇಂದು ಇಲ್ಲಿ ಲಭ್ಯವಾಗುವ ಔಷಧಿಗಳು ಉತ್ತಮ ಗುಣಮಟ್ಟದ್ದಾಗಿದೆ ಎಂದು ಜನರಿಗೆ ಮನವರಿಕೆಯಾಗಿದೆ. ಹೀಗಾಗಿ ಈ ಕೇಂದ್ರಗಳಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿ ಸಂಪ್ಯದಲ್ಲಿನ ಜನೌಷಧಿ ಕೇಂದ್ರದ ಮಾಲಕಿ ತಿರುಮಲೇಶ್ವರಿ ಮತ್ತು ಇವರ ಪತಿ ಸ್ವಸ್ತಿಕ್ ಪದ್ಯಣ ಅವರಿಗೆ ಶುಭಹಾರೈಸಿದರು.


ಅಕ್ಷಯ ಗ್ರೂಪ್‌ನ ಮಾಲಕ, ಉದ್ಯಮಿ ಜಯಂತ ನಡುಬೈಲು ಮಾತನಾಡಿ, ಸಂಪ್ಯ ಬೆಳೆಯುತ್ತಿರುವ ನಗರ. ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಂಪ್ಯವನ್ನು ನಗರಸಭೆಗೆ ವ್ಯಾಪ್ತಿಗೆ ಸೇರಿಸುವ ವ್ಯವಸ್ಥೆ ನಡೆಯುತ್ತಿದೆ. ಬೃಹತ್ ಆಸ್ಪತ್ರೆ, ಕಾಲೇಜು, ವಾಣಿಜ್ಯ ಕಟ್ಟಡಗಳು ಇತ್ಯಾದಿಗಳನ್ನು ಒಳಗೊಂಡಿರುವ ಈ ನಗರ ಅಭಿವೃದ್ಧಿಯತ್ತ ಸಾಗುತ್ತಿದೆ. ಜನೌಷಧಿ ಕೇಂದ್ರಗಳನ್ನು ಅಲ್ಲಲ್ಲಿ ಪ್ರಾರಂಭಿಸಬೇಕು. ಜನರ ಸಮೀಪವೇ ಈ ಕೇಂದ್ರಗಳು ಲಭ್ಯವಾದರೆ ಇನ್ನೂ ಉತ್ತಮ. ಹೀಗಾಗಿ ಸಂಪ್ಯದ ಜನರ ಅನುಕೂಲಕ್ಕಾಗಿ ಜನೌಷಧಿ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿ ಶುಭಹಾರೈಸಿದರು.


ಮಾಲಕ ಸ್ವಸ್ತಿಕ್ ಪದ್ಯಣ ಮಾತನಾಡಿ, ಜನೌಷಧಿ ಕೇಂದ್ರಗಳಲ್ಲಿ ಶೇ.೫೦ ರಿಂದ ಶೇ.೯೦ರಷ್ಟು ಕಡಿಮೆ ಬೆಲೆಗೆ ಔಷಧಿಗಳು ಲಭ್ಯವಾಗುತ್ತವೆ. ಇಲ್ಲಿ ವಿಭಿನ್ನ ಪ್ರಕಾರದ ಉತ್ಪನ್ನಗಳಿದ್ದು, ೨೮೦ ಸರ್ಜಿಕಲ್ ಉತ್ಪನ್ನಗಳಿವೆ ಎಂದರು. ಆಯುರ್ವೇದಿಕ್, ಹೋಮಿಯೋಪಥಿ, ಇಂಗ್ಲಿಷ್ ಮೆಡಿಸಿನ್ ರೀತಿಯಲ್ಲಿ ಅನೇಕ ಔಷಧಿಗಳನ್ನು ನೋಡಬಹುದು. ಆದರೆ, ಜನೌಷಧಿ ಕೇಂದ್ರಗಳಲ್ಲಿ ಲಭ್ಯವಾಗುವುದು ಜನರಿಕ್ ಔಷಧಿ. ಈ ಜನರಿಕ್ ಮೆಡಿಸಿನ್ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಇದು ಇಂಗ್ಲಿಷ್ ಮೆಡಿಸಿನ್ ಆಗಿದ್ದು, ಬ್ರಾಂಡೆಲ್ ಆಗಿರದಂತಹ ಮೆಡಿಸಿನ್‌ಗಳಾಗಿವೆ. ಯಾವುದೇ ಪ್ರಚಾರ, ಡಿಸೈನ್ ಇತ್ಯಾದಿಗಳಿಗೆ ಖರ್ಚು ಮಾಡದ ಹಿನ್ನೆಲೆ ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ಲಭ್ಯವಾಗುತ್ತವೆ. ಆದರೆ, ಜನೌಷಧಿಗಳಲ್ಲಿ ಲಭ್ಯವಾಗುವ ಔಷಧಿಯಲ್ಲಿನ ಕಂಟೆಂಟ್ ದುಬಾರಿ ಔಷಧಿಯಲ್ಲಿರುವಂತಹ ಕಂಟೆಂಟ್ ಒಂದೇ ಆಗಿರುತ್ತದೆ. ಗುಣಮಟ್ಟದಲ್ಲಿ ಯಾವುದೇ ಕಡಿಮೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಗ್ರಾಹಕರು ಇದರ ಸದುಪಯೋಗ ಮಾಡಬೇಕು ಎಂದರು.


ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಎಚ್, ಕಟ್ಟಡ ಮಾಲಕ ಅಬೂಬಕ್ಕರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಜನೌಷಧಿ ಕೇಂದ್ರದ ಮಾಲಕರಾದ ತಿರುಮಲೇಶ್ವರಿ ಮತ್ತು ಇವರ ಪತಿ ಸ್ವಸ್ತಿಕ್ ಪದ್ಯಣ ಅವರಿಗೆ ಶುಭಹಾರೈಸಿದರು.
ಈ ವೇಳೆ ಪದ್ಯಣ ಜಯರಾಮ್ ಭಟ್, ಶೀಲ ಗಣಪತಿ ಭಟ್ ಪದ್ಯಾಣ, ನಿತೀಶ್ ಶಾಂತಿವನ, ನಾರಾಯಣ ನಾಯಕ್, ಕಾವ್ಯಶ್ರೀ, ಮಂಜುಶ್ರೀ, ನಿರೀಕ್ಷಾ ಮತ್ತು ಸುಲೋಚನಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here