ಪುಸ್ತಕದ ಓದು, ಅರಿವಿನ ಮೂಲಕ ಆಗುವನು ಸಾಧಕ ಬದುಕಲ್ಲಿ, ನಾವು ಕಲಿತ ಪಾಠಗಳೇ ಜೀವನಕ್ಕೆ ಪೂರಕ:-ಸಾನಿಧ್ಯ ಮಾರನಹಳ್ಳಿ
ದಾರದ ಕಗ್ಗಂಟನ್ನು ಬಿಡಿಸಬೇಕಾದರೆ, ಅದರಲ್ಲಿನ ಯಾವ ದಾರವನ್ನು ಎಳೆಯಬೇಕು ಎಂದು ತಿಳಿದಿರಬೇಕು- ಕೀರ್ತನಾ
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಂದ ಗುರು ಪೂರ್ಣಿಮೆ ಗುರುವಂದನಾ ಕಾರ್ಯಕ್ರಮ ಜು.10ರಂದು ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್ ಪಿ.ವಿ. ದೀಪ ಬೆಳಗಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ತನ್ನ ವಿದ್ಯಾರ್ಥಿ ಜೀವನದ ಕೆಲವು ಘಟನೆಗಳನ್ನು ನೆನಪಿಸುತ್ತಾ ಅಹಂಭಾವವನ್ನು ಬಿಟ್ಟು ಗುರುಭಾವದಲ್ಲಿ ಸಮರ್ಪಿತವಾಗುವುದೇ ಗುರುಸೇವೆ ಎಂದರು.

ಕಾರ‍್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಧನುಷ್, ಶಮಿತ್, ರಿತಿಕ್ ಹಾಗೂ ದಿಶಾನ್ ಇವರು ಎಲ್ಲಾ ಗುರುಗಳಿಗೂ ಆರತಿ ಬೆಳಗಿ ತಿಲಕವನ್ನು ಇಟ್ಟು ಆಶೀರ್ವಾದವನ್ನು ಪಡೆದರು. ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಾನಿಧ್ಯ ಮಾರನಹಳ್ಳಿ ಮಾತನಾಡಿ, ಪುಸ್ತಕದ ಓದು, ಅರಿವಿನ ಮೂಲಕ ಆಗುವನು ಸಾಧಕ. ಬದುಕಲ್ಲಿ ನಾವು ಕಲಿತ ಪಾಠಗಳೆ ಜೀವನಕ್ಕೆ ಪೂರಕ ಇವೆರಡರ ಮಧ್ಯೆ ಗುರುವಿದ್ದರೆ ಆಗುವುದು ನಮ್ಮ ಜೀವನ ಸಾರ್ಥಕ ಎಂದರು.
ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೀರ್ತನಾ ದಿಕ್ಸೂಚಿ ಭಾಷಣದಲ್ಲಿ ಜೀವನದಲ್ಲಿ ತೊಡಕನ್ನು ಬಿಡಿಸಲು ಗುರುಗಳ ಮಾರ್ಗದರ್ಶನ ಉಪಯುಕ್ತ. ಒಂದು ದಾರದ ಕಗ್ಗಂಟನ್ನು ಬಿಡಸಬೇಕಾದರೆ ಅದರಲ್ಲಿ ಯಾವ ದಾರವನ್ನು ಎಳೆಯಬೇಕು ಎಂದರು. ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನಿಶ್ಮಾ ಗುರುಪೂರ್ಣಿಮ ಹಬ್ಬದ ಮಹತ್ವದ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಮಾತನಾಡಿ, ಗುರು ಎಂದರೆ ಕೇವಲ ಪಾಠ ಮಾಡುವ ಶಿಕ್ಷಕ ಮಾತ್ರ ಅಲ್ಲ, ನಮ್ಮ ಜೀವನದಲ್ಲಿ ಒಂದು ಅಕ್ಷರ ಕಲಿಸಿದವನು ಗುರುವಿನ ಸಮಾನ ಎಂದು ಹೇಳಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಎನ್.ಡಿ ಮಾತನಾಡಿ, ಗುರು ಎಂದೂ ಲಘುವಾಗಿ ವರ್ತಿಸಬಾರದು, ಗುರು ಯಾವತ್ತು ತನ್ನ ಸ್ಥಾನವನ್ನು ಅರಿತು ಮಾರ್ಗದರ್ಶನವನ್ನು ನೀಡಬೇಕು ಎಂದು ಹೇಳಿದರು. ಕಾರ‍್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕಿ ಮಾಧವಿ, ಹರ್ಷಿತಾ, ಸುಮಿತ್ರಾ, ಮಧುಶ್ರೀ, ವಂದನಾ, ನವ್ಯ, ಮೇಘ ಇವರು ಗುರುವಿನ ಮಹತ್ವ ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು. ಕಾರ‍್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಎಲ್ಲ ಗುರುಗಳಿಗೆ ನಮಸ್ಕರಿಸಿ ಆಶೀರ್ವಾದಗಳನ್ನು ಪಡೆದರು.

ಕಾರ‍್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿ ಸುಶಾಂತ್ ಪ್ರಾರ್ಥಿಸಿ, ವಿದ್ಯಾರ್ಥಿ ಧನುಷ್ ಸ್ವಾಗತಿಸಿದರು, ವಿದ್ಯಾರ್ಥಿ ಶಮಿತ್ ರೈ ವಂದಿಸಿ, ವಿದ್ಯಾರ್ಥಿನಿ ಸಾನಿಧ್ಯ ಮಾರನಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಶುತಿ ಪ್ರವೀಣ್ ಸಹಕರಿಸಿದರು.
