ಪುತ್ತೂರು: ಪುತ್ತೂರಿನ ಸುದಾನ ವಸತಿಶಾಲೆಯಲ್ಲಿ ಜುಲೈ.9ರಂದು ಪುತ್ತೂರಿನ ರೋಟರಿ ಎಲೈಟ್ ನ ವಿದ್ಯಾರ್ಥಿ ಶಾಖೆ ಇಂಟರ‍್ಯಾಕ್ಟ್ ಕ್ಲಬ್ ಸ್ಪಂದನದ ಪದಗ್ರಹಣ ಕಾರ್ಯಕ್ರಮವು ನಡೆಯಿತು.
ರೋಟರಿ ಪುತ್ತೂರು ಎಲೈಟ್ ಸಂಘಟನೆಯ ಅಧ್ಯಕ್ಷೆ ನೋಟರಿ ರೊ. ಸಿಲ್ವಿಯಾ ಡಿಸೋಜ ಮಾತನಾಡಿ,ವಿದ್ಯಾರ್ಥಿಗಳು ಸಮಾಜ ಮುಖಿಯಾಗಿ ಚಿಂತಿಸುವಂತೆ ಮಾಡಲು ಮತ್ತು ಸೇವಾ ಮನೋಭಾವವನ್ನು ರೂಢಿಸಿಕೊಳ್ಳಲು ಸ್ಪಂದನ ಇಂಟರ‍್ಯಾಕ್ಟ್ ಕ್ಲಬ್ ಪ್ರೇರೇಪಿಸುತ್ತದೆ. ಜಗದ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಸಂಘಟಿತರಾಗಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ನಿಕಟ ಪೂರ್ವ ವಿದ್ಯಾರ್ಥಿ ಪ್ರತಿನಿಧಿ ರಿದಿಮಾ ಬೆಳಂದೂರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಧನೆಗಾಗಿ ಗೌರವಿಸಲಾಯಿತು. ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ (೧೦) ವಾರ್ಷಿಕ ವರದಿಯನ್ನು ವಾಚಿಸಿದರು.
ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪ್ರತಿನಿಧಿ ಸಿಯೋನ ಅಸುಂತ ಲೋಬೊ(೧೦) ಪದಗ್ರಹಣ ಸ್ವೀಕರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಹಾಗೂ ರೊ. ಅಬ್ದುಲ್ ರಝಾಕ್ ಶುಭಾಶಂಸನೆಗೈದರು. ಉಪ ಮುಖ್ಯಶಿಕ್ಷಕಿ ಲವೀನ ನವೀನ್ ಹನ್ಸ್, ರೋಟರಿ ಪುತ್ತೂರು ಎಲೈಟ್ ಕಾರ‍್ಯದರ್ಶಿ ರೊ. ಪದ್ಮವತಿ ರೊ. ಡಾ. ಪೀಟರ್ ವಿಲ್ಸನ್ ಪ್ರಭಾಕರ್, ರೊ. ಆಸ್ಕರ್ ಆನಂದ್, ರೊ. ಮೌನೇಶ್ ವಿಶ್ವಕರ್ಮ, ರೊ. ಸುಶಾಂತ್ ಹಾರ್ವಿನ್, ರೊ. ಬಾಲು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷೆ ರಿದಿಮಾ ಬೆಳಂದೂರು ಸ್ವಾಗತಿಸಿ, ವಿದ್ಯಾರ್ಥಿ ಕಾರ್ಯದರ್ಶಿ ಮಾನ್ ಶೆಟ್ಟಿ ಧನ್ಯವಾದವನ್ನು ಅರ್ಪಿಸಿದರು. ಈ ಕಾರ್ಯಕ್ರಮವನ್ನು ಇಂಟರ‍್ಯಾಕ್ಟ್ ಕ್ಲಬ್ ಸ್ಪಂದನ ಆಯೋಜಿಸಿದ್ದು, ಸಹಶಿಕ್ಷಕರಾದ ವಿನಯ ರೈ, ಆಶಾಲತಾ, ಗ್ಲಾಡಿಸ್ ಸಹಕರಿಸಿದರು.