ಪುತ್ತೂರು: ಕೆದಂಬಾಡಿ ಗ್ರಾ.ಪಂ ವ್ಯಾಪ್ತಿಯ ಸಾರೆಪುಣಿ-ಇದ್ಪಾಡಿ ದಾರಿ ಮಧ್ಯೆ ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿದ್ದು ಸಮಸ್ಯೆಯನ್ನು ಪರಿಹರಿಸಿಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆ, ಚರಂಡಿ, ಬೀದಿದೀಪ, ಅಪಾಯಕಾರಿ ಮರ… ಹೀಗೇ ನಾನಾ ಸಮಸ್ಯೆಗಳು ಅಲ್ಲಿದೆ. ಸಾರೆಪುಣಿಯಿಂದ ಇದ್ಪಾಡಿಗೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ಗಿಡಗಂಟಿ, ಹುಲ್ಲು, ಪೊದರುಗಳು ತುಂಬಿದ್ದು ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಈ ರಸ್ತೆಯ ಅಲ್ಲಲ್ಲಿ ಹೊಂಡ ನಿರ್ಮಾಣ ಆಗಿದ್ದು ರಸ್ತೆ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ ಚರಂಡಿಯ ನೀರು ಕೂಡಾ ರಸ್ತೆಗೆ ಹರಿಯುತ್ತಿದೆ. ಇದೇ ರಸ್ತೆಯ ಮಧ್ಯೆ ಮಳೆಗೆ ಕೊಚ್ಚಿಕೊಂಡು ಬಂದಿರುವ ಜಲ್ಲಿ ಮಿಶ್ರಿತ ಮಣ್ಣು ಶೇಖರಣೆಗೊಂಡು ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರಸ್ತೆ ಬದಿಯಲ್ಲಿ ಬೃಹದಾಕಾರದ ಮರವೊಂದು ಅಪಾಯಕಾರಿಯಾಗಿದ್ದು, ಬೀಳುವ ಸ್ಥಿತಿಯಲ್ಲಿದ್ದರೂ ಅದನ್ನು ತೆರವುಗೊಳಿಸುವ ಗೋಜಿಗೂ ಯಾರೂ ಹೋಗಿಲ್ಲ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.
ಈ ರಸ್ತೆಯ ಬದಿಯಲ್ಲಿ ಬೀದಿ ದೀಪಗಳ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ರಾತ್ರಿ ವೇಳೆ ಮಕ್ಕಳು, ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇಲ್ಲಿದ್ದರೂ ಗ್ರಾಮ ಪಂಚಾಯತ್‌ನ ಸ್ಥಳೀಯ ಸದಸ್ಯರಿಗೆ ಇದ್ಯಾವುದೂ ಕಾಣುತ್ತಿಲ್ಲವೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಓಟು ಪಡೆದು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದವರು ಊರಿನ ಸಮಸ್ಯೆಯ ಬಗ್ಗೆ ತಿಳಿದೂ ತಿಳಿಯದ ಹಾಗೆ ಮಾಡುತ್ತಿದ್ದಾರೆ ಎನ್ನುವ ಆರೋಪ ಆ ಭಾಗದವರಿಂದ ಕೇಳಿ ಬಂದಿದೆ. ನಾವು ಊರಿನ ಮೂಲಭೂತ ಸಮಸ್ಯೆಯನ್ನು ಅನೇಕ ಬಾರಿ ಸಂಬಂಧಪಟ್ಟವರಲ್ಲಿ ಹೇಳಿದ್ದರೂ ಯಾವುದೇ ಸ್ಪಂದನೆಯಿಲ್ಲ, ಓಟು ಹಾಕುವುದು ನಮ್ಮ ಹಕ್ಕಾದರೆ, ಸಾರ್ವಜನಿಕ ಬೇಡಿಕೆಯನ್ನು ಕೇಳುವುದೂ ನಮ್ಮ ಹಕ್ಕು, ಸಾರೆಪುಣಿ-ಇದ್ಪಾಡಿ ರಸ್ತೆ ಮಧ್ಯೆ ಅನೇಕ ಸಮಸ್ಯೆಗಳಿದ್ದು, ಮುಂದಕ್ಕೂ ಗ್ರಾ.ಪಂನವರು ಸ್ಪಂದಿಸದೇ ಇದ್ದಲ್ಲಿ ಊರಿನ ಜನರನ್ನು ಸೇರಿಸಿಕೊಂಡು ಕೆದಂಬಾಡಿ ಪಂಚಾಯತ್ ಮುಂಭಾಗದಲ್ಲಿ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ತಿಳಿಸಿದ್ದಾರೆ.
