ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆ

0


ಹೊಸದನ್ನು ಅನ್ವೇಷಣೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು: ಕೃಷ್ಣ ಎನ್

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಬ್ಬ ಆದರ್ಶ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹೊಸದನ್ನು ಅನ್ವೇಷಣೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಂವಹನಾ ಕೌಶಲ್ಯ ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆಗ ಅವಕಾಶಗಳು ಅರಸಿಕೊಂಡು ಬರುತ್ತವೆ ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಸಾಫ್ಟ್‌ವೇರ್ ಇಂಜಿನಿಯರ್ ಕೃಷ್ಣ ಎನ್. ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನೂತನವಾಗಿ ರೂಪಿಸಿರುವ ಗಣಕಯಂತ್ರ ಪ್ರಯೋಗಾಲಯವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.


ಪ್ರತಿಯೊಬ್ಬರಿಗೂ ಒಳ್ಳೆಯ ಅವಕಾಶಗಳು ದೊರೆಯುತ್ತವೆ. ಸತತವಾದ ಸಾಧನೆಯ ಮೂಲಕವಾಗಿ ಉನ್ನತವಾದ ಸ್ಥಾನವನ್ನು ಪಡೆಯಲು ಸಾಧ್ಯ. ಸಚಿನ್ ತೆಂಡೂಲ್ಕರ್ ತನ್ನ ಬಾಲ್ಯದಿಂದಲೇ ಕ್ರಿಕೆಟ್ ಆಟದ ಮೇಲೆ ಆಸಕ್ತಿ ವಹಿಸಿ ಅದನ್ನೇ ಮುಖ್ಯ ಗುರಿಯನ್ನಾಗಿಸಿ ಮುನ್ನಡೆದ ಕಾರಣದಿಂದ ಅಪೂರ್ವವಾದ ಸಾಧನೆ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗಿದೆ. ನಿರಂತರ ಶ್ರಮ ಹಾಗೂ ಅಪರಿಮಿತ ಆಸಕ್ತಿಯೇ ಯಶಸ್ಸಿನ ಮೆಟ್ಟಿಲು ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಶಕ್ತಿ ಇದೆ. ಅದನ್ನು ಉಪಯೋಗಿಸಿ ಹೆಚ್ಚಿನ ಯೋಗ್ಯ ಪ್ರತಿಭಾವಂತರಾಗಿ ವಿದ್ಯಾರ್ಥಿಗಳು ಹೊರಹೊಮ್ಮಬೇಕು. ನೂತನವಾಗಿ ನಿರ್ಮಾಣಗೊಂಡಿರುವ ಪ್ರಯೋಗಾಯದ ಲಾಭವನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮದಾಗಿಸಿಕೊಳ್ಳಬೇಕು ಎಂದು ನುಡಿದರು.


ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿಯೂ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಮಹತ್ತರವಾದ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸಿನ ತುದಿಯನ್ನು ಮುಟ್ಟಬೇಕಾದರೆ ಕಂಪ್ಯೂಟರ್ ಜ್ಞಾನ ಅತೀ ಅವಶ್ಯಕ ಎಂದು ಹೇಳಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು.


ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಾಂಕ್ ಎಲ್. ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿನಿಯರಾದ ಶಿಶಿರ ಮತ್ತು ಬಳಗದವರು ಪ್ರಾರ್ಥಿಸಿ, ಹೃತ್ವಿಕ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಪ್ರಾಂಶುಪಾಲ ಪ್ರದೀಪ್ ಕೆ ಎನ್ ಸ್ವಾಗತಿಸಿ, ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್. ವಂದಿಸಿದರು.

LEAVE A REPLY

Please enter your comment!
Please enter your name here