ಯಕ್ಷಗಾನ ಕಲೆಯು ಜಾಗತಿಕ ಮಟ್ಟದ ಮನ್ನಣೆಯನ್ನು ಪಡೆದುಕೊಂಡಿದೆ : ಜೈರಾಜ್ ಭಂಡಾರಿ
ಪುತ್ತೂರು: ಯಕ್ಷಗಾನ ಕಲೆಯು ಒಂದು ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ಅಭಿನಯ, ನೃತ್ಯ, ಸಂಭಾಷಣೆ ಇತ್ಯಾದಿಗಳನ್ನೊಳಗೊಂಡ ಶ್ರೀಮಂತ ಕಲೆಯಾಗಿದೆ. ಮಂಗಳೂರು ಕರಾವಳಿ, ಉಡುಪಿ ಕಡೆಗಳಲ್ಲಿ ಸೀಮಿತವಾಗಿ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಗಾನ ಕಲೆಯು ರಾಜ್ಯದ ಹಲವಾರು ಜಿಲ್ಲೆಗಳಲ್ಲೂ ವ್ಯಾಪಿಸಿ ಇಂದು ಜಾಗತಿಕ ಮಟ್ಟದವರೆಗೂ ಬೆಳವಣಿಗೆ ಕಂಡಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ನ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ಹೇಳಿದರು.
ಜು.12ರಂದು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣ ನಾಟ್ಯಾಭ್ಯಾಸ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಯಕ್ಷಗಾನ ನಾಟ್ಯದ ಹೆಜ್ಜೆಗಳನ್ನು ಉತ್ತಮವಾಗಿ ಕಲಿತು ಮುಂದಿನ ದಿನಗಳಲ್ಲಿ ತಮ್ಮ ಪ್ರತಿಭೆಯನ್ನು ಉಜ್ವಲವಾಗಿ ಬೆಳಗಿಸುವಂತೆ ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಸುರೇಶ ರೈ ಪಡ್ಡಂಬೈಲು ವಹಿಸಿದ್ದರು. ವೀಳ್ಯವನ್ನು ಕೊಡುವುದರ ಮೂಲಕ ಯಕ್ಷ ಗುರುಗಳಾದ ಬಾಲಕೃಷ್ಣ ಉಡ್ಡಂಗಳ ಇವರಲ್ಲಿ ನಾಟ್ಯಾಭ್ಯಾಸವನ್ನು ಪ್ರಾರಂಭಿಸುವಂತೆ ವಿನಂತಿಸಲಾಯಿತು.
ಯಕ್ಷಧ್ರುವ ಪುತ್ತೂರು ಘಟಕದ ಪ್ರಶಾಂತ್ ರೈ, ಎಸ್.ಡಿ.ಎಂ.ಸಿ ಸದಸ್ಯರಾದ ಭಾಸ್ಕರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಪ್ರಾಂಶುಪಾಲ ವಸಂತ ಮೂಲ್ಯ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಮಮತಾ ರೈ ವಂದಿಸಿದರು. ಶಿಕ್ಷಕಿ ಮಧುರ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
