ಭ್ರಷ್ಟಾಚಾರ, ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ-ಪ್ರತಾಪಸಿಂಹ ನಾಯಕ್
ಪುತ್ತೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಗ್ಯಾರಂಟಿ ಯೋಜನೆಯಲ್ಲಿ ಉಚಿತವನ್ನೂ ಸರಿಯಾಗಿ ಕೊಡದೆ ಅಭಿವೃದ್ಧಿಯು ಶೂನ್ಯವಾಗಿದೆ. ಕಾಂಗ್ರೆಸ್ ಸರಕಾರ ಕೆಲಸ ಮಾಡದ ಗ್ಯಾರಂಟಿ ಸರಕಾರವಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಗ್ಯಾರಂಟಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳಿನ ಅಭಾವದಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಗುತ್ತಿರುವ ತೊಂದರೆ, ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ನಡೆಯುವ ಪ್ರತಿಭಟನೆಯ ಅಂಗವಾಗಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರ ಕೆಂಪುಕಲ್ಲು ಹೊಯಿಗೆಯ ಮೇಲೆ ರಾಯಲ್ಟಿ ಧನವನ್ನು ಏರಿಕೆ ಮಾಡಿ ಕಾರ್ಮಿಕರ ಜೀವನವನ್ನು ಬೀದಿಗೆ ತಂದು ನಿಲ್ಲಿಸಿದೆ. ಕೆಂಪುಕಲ್ಲು ಹೊಯಿಗೆ ಸಿಗದೆ ಜನರು ಸಂಕಷ್ಟ ಪಡುತ್ತಿದ್ದಾರೆ. ನಮಗೆ ಕಲ್ಲು, ಹೊಯಿಗೆ ಕೊಡಿ. ಕೆಲಸ ಕೊಡಿ. ನಮಗೆ ನಿಮ್ಮ ಉಚಿತಗಳು ಬೇಡ ಎಂದು ಸರಕಾರದ ನೀತಿಗಳನ್ನು ಖಂಡಿಸಿದರು. ಪುತ್ತೂರು ಶಾಸಕರು ಕೂಡ ಪ್ರತಿಭಟನೆಗೆ ಬರಬೇಕಿತ್ತು. ಅವರ ಮೆಡಿಕಲ್ ಕಾಲೇಜು ಕಲ್ಲು ಹೊಯಿಗೆ ಇಲ್ಲದೆ ನಿಂತಿದೆ. ಶಾಲಾ ಮಕ್ಕಳಿಗೆ ನೀಡುವ ಆಹಾರ ಸಾಗಾಟದ ಲಾರಿಗೆ ಬಾಡಿಗೆ ಕೊಡುವ ಯೋಗ್ಯತೆ ಈ ಸರಕಾರಕ್ಕಿಲ್ಲ. ಇಂತಹ ಬೇಜವಾಬ್ದಾರಿ ಸರಕಾರವನ್ನು ಕರ್ನಾಟಕದ ಇತಿಹಾಸದಲ್ಲೇ ನಾನು ನೋಡಲಿಲ್ಲ. ಸರಕಾರದಲ್ಲಿ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾತ್ರ ಕುರ್ಚಿ ಬಿಟ್ಟುಕೊಡುತ್ತಿಲ್ಲ ಎಂದರು. ಸರಕಾರದಿಂದ ಬೆಲೆಏರಿಕೆಯೇ ಉಚಿತವಾಗಿದೆ. ಸರಕಾರ ಎಲ್ಲದಕ್ಕೂ ತೆರಿಗೆ ವಿಧಿಸುತ್ತಿದೆ. ಕಸ ಹೆಕ್ಕುವುದಕ್ಕೂ ತೆರಿಗೆ ಹಾಕುತ್ತಿದೆ. ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ 3 ಲಕ್ಷಕ್ಕೂ ಮಿಕ್ಕಿ ಸಾಲ ತೆಗೆದುಕೊಂಡಿದೆ. ಇದೇ ರೀತಿ ಮುಂದುವರೆದರೆ 5 ವರ್ಷದಲ್ಲಿ 10 ಲಕ್ಷ ಕೋಟಿ ಸಾಲ ದಾಟುತ್ತದೆ. ದ.ಕ.ಜಿಲ್ಲೆಯ ಜನರ ಸಮಸ್ಯೆಗೆ ಸರಿಯಾಗಿ ಕಾನೂನು ತರಬೇಕು. ಕಾನೂನು ಇರುವುದು ಜನರಿಗೆ ಗೌರವಯುತವಾಗಿ ಬದುಕು ನಡೆಸಲು. ಕಾನೂನಿನ ಹೆಸರಲ್ಲಿ ಜನರ ಹೊಟ್ಟೆಗೆ ಹೊಡೆಯಬಾರದು ಎಂದರು.

ಮುಂದಿನ ದಿನಗಳಲ್ಲಿ ಜನರೇ ಕ್ರಾಂತಿ ನಡೆಸುತ್ತಾರೆ-ಸಂಜೀವ ಮಠಂದೂರು
ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ನೆಪದಲ್ಲಿ ಜನರನ್ನು ಮರುಳು ಮಾಡುತ್ತಿದೆ. ಒಂದು ಕೈಯಲ್ಲಿ ಉಚಿತ ಕೊಟ್ಟು ಇನ್ನೊಂದು ಕೈಯಿಂದ ಭರ್ಜರಿಯಾಗಿ ತಗೊಳ್ಳುತ್ತಿದೆ. ಇದೀಗ ಕೆಂಪು ಕಲ್ಲು, ಮರಳು ಪೂರೈಕೆ ಸ್ಥಗಿತವಾಗುವ ಹಾಗೆ ಮಾಡಿ ಕಾರ್ಮಿಕರ ಬದುಕನ್ನು ನುಚ್ಚುನೂರು ಮಾಡಿದೆ. ನಾವು ಕೋಣನ ಮುಂದೆ ಕಿಣ್ಣರಿ ಬಾರಿಸುವುದಿಲ್ಲ. ದಪ್ಪ ಚರ್ಮದ ಸರಕಾರಕ್ಕೆ ನಮ್ಮ ಕೂಗು ಕೇಳುವವರೆಗೂ ನಮ್ಮ ಹೋರಾಟ ಬಿಡುವುದಿಲ್ಲ ಎಂದರು. ರಾಜ್ಯದ ಮುಖ್ಯಮಂತ್ರಿಯವರು ಸೀಟಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸೀಟಿಗಾಗಿ ಹೋರಾಟ ಮಾಡುತ್ತಿರುವ ಸರಕಾರ ಜನಸಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಇವತ್ತು ದಿವಾಳಿಕೋರ ಸರಕಾರ ಕರ್ನಾಟಕದಲ್ಲಿದೆ. ಬಡವರ ಶೋಷಣೆ ಮಾಡುತ್ತಿದೆ ಎಂದರು. ಪುತ್ತೂರಿನ ಈಗಿನ ಶಾಸಕರು ಕೋಟಿ ಕೋಟಿ ಮಾತನಾಡುತ್ತಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ. ನನ್ನ ಎರಡು ವರ್ಷದ ಅವಧಿಯಲ್ಲಾದ ಅಭಿವೃದ್ಧಿ ಹಾಗೂ ಅವರ ಎರಡು ವರ್ಷದ ಅಭಿವೃದ್ಧಿಯ ಅಂಕಿ ಅಂಶ ನೋಡೋಣ. ಶಾಸಕರ ಗೋಮುಖವನ್ನು ಮಾತ್ರ ನೋಡಿದ್ದೀರಿ. ಆದರೆ ಇತ್ತೀಚೆಗೆ ಅವರು ವ್ಯಾಘ್ರಮುಖವನ್ನು ತೋರಿಸಿ ದರ್ಪ ಮೆರೆದಿದ್ದಾರೆ ಎಂದರು. ಕೆಂಪು ಕಲ್ಲಿಗೆ 96 ರೂ. ಇದ್ದ ರಾಯಲ್ಟಿ ದರವನ್ನು ಸರಕಾರ 295ಕ್ಕೆ ಏರಿಸಿದೆ. ಇದರಿಂದ ಒಂದು ಕೆಂಪು ಕಲ್ಲಿಗೆ 52 ರೂ. ವೆಚ್ಚ ತಗುಲುತ್ತದೆ. ಇದರಿಂದ ಕಲ್ಲು ಕೋರೆಗಳು ಬಂದ್ ಆಗಿ ಕಾರ್ಮಿಕರು ಜೀವನ ನಡೆಸುವುದು ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ಜನರೇ ಕ್ರಾಂತಿ ಎಬ್ಬಿಸಲಿದ್ದಾರೆ ಎಂದರು.

ಬಿಜೆಪಿ ಕಾರ್ಯಕರ್ತರು ಅಕ್ರಮವನ್ನು ಎಂದೂ ಬೆಂಬಲಿಸುವುದಿಲ್ಲ-ಪ್ರಸನ್ನ ಮಾರ್ತಾ
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಮಾತನಾಡಿ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯಿಂದ ಇದೀಗ ಇಡೀ ಸಮಾಜಕ್ಕೆ ಸಮಸ್ಯೆ ಉಂಟಾಗಿದೆ. ಕರ್ನಾಟಕದಲ್ಲಿ ಸರಕಾರ ಕೆಂಪು ಕಲ್ಲಿಗೆ 295 ರೂ. ಮಾಡಿದ್ದಾರೆ. ಇದರಿಂದ ಎಲ್ಲರಿಗೂ ತೊಂದರೆಯಾಗಿದೆ. ಕೆಂಪು ಕಲ್ಲು ಹಾಗೂ ಮರಳು ಪೂರೈಕೆಯನ್ನು ಸರಳೀಕರಣ ಮಾಡಿ ಎಂದರು. ಬಿಜೆಪಿ ಕಾರ್ಮಿಕರು ಅಕ್ರಮ ಮರಳು, ಕೆಂಪು ಕಲ್ಲು ಸಾಗಾಟವನ್ನು ಎಂದೂ ಬೆಂಬಲಿಸುವುದಿಲ್ಲ. ಸಕ್ರಮವಾಗಿಯೇ ಕೆಲಸ ಮಾಡುತ್ತಿದ್ದಾರೆ. ಸರಕಾರ ಆದಷ್ಟು ಬೇಗ ಜನರ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.
ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸಬೇಕು – ವಾಮನ ಪೈ
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಮಾತನಾಡಿ ಸರಕಾರದ ಕೆಂಪು ಕಲ್ಲು, ಮರಳು ನೀತಿಯಿಂದಾಗಿ ಬಡ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟ. ಇದರಿಂದ ವ್ಯಾಪಾರಿಗಳಿಗೆ ವ್ಯಾಪಾರ ಇಲ್ಲದಂತಾಗಿದೆ. ಸಿಮೆಂಟ್ ಮಾರಾಟವಿಲ್ಲದೆ ಅಂಗಡಿಗಳಲ್ಲಿ ಸಿಮೆಂಟ್ ಗಟ್ಟಿಯಾಗಿ ಕಲ್ಲಿನ ರೀತಿಯಾಗಿದೆ ಎಂದರು. ನದಿಗಳಿಂದ ಹೊಯಿಗೆ ತೆಗೆದರೆ ನೀರು ಬತ್ತಿ ಹೋಗುವುದಿಲ್ಲ ನೀರಿನ ಹರಿವು ಹೆಚ್ಚುತ್ತದೆ ಎಂದು ಹೇಳಿದ ಅವರು ಈ ಹೋರಾಟವನ್ನು ನಿಲ್ಲಿಸದೆ ನ್ಯಾಯ ಸಿಗುವವರೆಗೆ ಮುಂದುವರೆಸಬೇಕು ಎಂದರು.
ಎಲ್ಲಾ ಕಾರ್ಮಿಕರು ಹೋರಾಟ ಮಾಡಬೇಕು-ಪುರಂದರ ಶೆಟ್ಟಿ
ಕೆಂಪು ಕಲ್ಲು ಉದ್ಯಮಿ ಪುರಂದರ ಶೆಟ್ಟಿ ಮಾತನಾಡಿ ಸರಕಾರದ ನೀತಿಯಿಂದಾಗಿ ಕಾರ್ಮಿಕರಿಗೆ ತುಂಬಾ ಅನ್ಯಾಯವಾಗಿದೆ. ಕಾರ್ಮಿಕರ ನೋವು ನನಗೆ ತಿಳಿದಿದೆ. ನನ್ನ ಕಾರ್ಮಿಕರಿಗೆ ನಾನು ಸ್ಪಂದನೆ ನೀಡುತ್ತಿದ್ದೆ. ಬಿಜೆಪಿ ಸರಕಾರ ಇರುವವರೆಗೆ ಮನೆ ಕಟ್ಟಲು ತೊಂದರೆ ಆಗುತ್ತಿರಲಿಲ್ಲ. ಬಿಜೆಪಿ ಸರಕಾರ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದೆ. ಕಿಟ್ ಕೂಡ ನೀಡಿದೆ. ಆದರೆ ಇಂದು ಸರಕಾರದ ಜನ ವಿರೋಧಿ ನೀತಿಗಳಿಂದಾಗಿ ಕಾರ್ಮಿಕರು ಆತ್ಮಹತ್ಯೆ ಮಾಡುವ ಸಂದರ್ಭ ಬಂದಿದೆ. ಇದರ ವಿರುದ್ಧ ಎಲ್ಲಾ ಕಾರ್ಮಿಕರು ಹೋರಾಟ ಮಾಡಬೇಕು ಎಂದರು.
ಕೂಡಲೇ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು-ಲೋಕೇಶ್ ಹೆಗ್ಡೆ
ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ ಮಾತನಾಡಿ ಸರಕಾರ ಕೆಂಪು ಕಲ್ಲು, ಮರಳು ಸಿಗದ ಹಾಗೆ ಮಾಡುತ್ತಿದೆ. ಸರಕಾರ ತನ್ನ ಬೊಕ್ಕಸ ಹೆಚ್ಚು ಮಾಡಲು ಹೆಚ್ಚಿನ ತೆರಿಗೆ ವಿಧಿಸಿ ಕಾರ್ಮಿಕರನ್ನು ಬೀದಿಗೆ ತಂದಿದೆ. ಇದರ ಬಗ್ಗೆ ಸರಕಾರ ಮೀಟಿಂಗ್ ಮಾಡುತ್ತಿದೆಯೇ ಹೊರತು ಬೇರೆ ಏನೂ ಮಾಡುವುದಿಲ್ಲ. 2 ತಿಂಗಳಿನಿಂದ ಕಲ್ಲು, ಮರಳು ಸಿಗದೆ ಕಾರ್ಮಿಕರಿಗೆ ಸಂಕಷ್ಟ ಪಡುತ್ತಿದ್ದಾರೆ. ಉಪವಾಸ ಬೀಳುತ್ತಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡುವವರೆಗೂ ಬಂದಿದ್ದಾರೆ ಆದುದರಿಂದ ಸರಕಾರ ಈ ಕೂಡಲೇ ಸರಿಪಡಿಸಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಬಿಜೆಪಿ ಸರಕಾರದಿಂದ ರಾಷ್ಟ್ರ, ರಾಜ್ಯದಲ್ಲಿ ಅಲ್ಲದೆ ಪುತ್ತೂರಿನಲ್ಲಿಯೂ ಅಭಿವೃದ್ಧಿಯಾಗಿದೆ. ನಮ್ಮ ಅಂಕಿ ಅಂಶ ಮತ್ತು ಕಾಂಗ್ರೆಸ್ ಸರಕಾರದ ಅಂಕಿ ಅಂಶ ತುಲನೆ ಮಾಡಿದರೆ ಇದು ಗೊತ್ತಾಗುತ್ತದೆ. ಆದರೆ ಕಾಂಗ್ರೆಸ್ ಸರಕಾರ ರಾಜ್ಯದ ಚಿತ್ರಣವನ್ನು ಹಾಳು ಮಾಡಿದೆ. ಇದು ಜನವಿರೋಧಿ, ಬಡವರ ವಿರೋಧಿ ಸರಕಾರವಾಗಿದೆ ಎಂದರು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಕೋರ್ಟ್ ರೋಡ್ ಮೂಲಕ ಅಮರ್ ಜವಾನ್ ಸ್ಮಾರಕದವರೆಗೆ ನಡೆದು ಅಲ್ಲಿ ಪ್ರತಿಭಟನೆ ನಡೆಯಿತು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಸರಕಾರಕ್ಕೆ ಸಲ್ಲಿಸಲಿರುವ ಮನವಿ ಓದಿದರು. ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿ ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು ವಂದಿಸಿದರು. ಬಿಜೆಪಿ ಮುಖಂಡರಾದ ಎಸ್. ಅಪ್ಪಯ್ಯ ಮಣಿಯಾಣಿ, ಬಂಗಾರಡ್ಕ ವಿಶ್ವೇಶ್ವರ ಭಟ್, ರಾಧಾಕೃಷ್ಣ ಬೋರ್ಕರ್, ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ಶಶಿಕುಮಾರ್ ರೈ ಬಾಲ್ಯೊಟ್ಟು ಒಬಿಸಿ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಚಂದ್ರಶೇಖರ ರಾವ್ ಬಪ್ಪಳಿಗೆ, ವಿದ್ಯಾ ಆರ್. ಗೌರಿ, ಬೂಡಿಯಾರ್ ರಾಧಾಕೃಷ್ಣ ರೈ, ಸುರೇಶ್ ಆಳ್ವ, ಗೌರಿ ಬನ್ನೂರು, ಕರುಣಾಕರ ಗೌಡ ಎಲಿಯ, ಗ್ರಾಮಾಂತರ ಮಂಡಲ ಯುವಮೋರ್ಛಾ ಅಧ್ಯಕ್ಷ ಶಿಶಿರ್ ಪೆರುವೋಡಿ, ನಗರ ಮಂಡಲ ಯುವಮೋರ್ಛಾ ಅಧ್ಯಕ್ಷ ನಿತೇಶ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಗುರುವಪ್ಪ ಪೂಜಾರಿ, ಗ್ರಾಮಾಮತರ ಮಂಡಲ ಮಹಿಳಾ ಮೋರ್ಛಾ ಅಧ್ಯಕ್ಷೆ ಯಶೋಧಾ ಕೆ. ಗೌಡ, ನಗರ ಮಂಡಲ ಮಹಿಳಾ ಮೋರ್ಛಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಜೈಭಾರತ್ ಸಂಘದ ಮಾಜಿ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು ಸೇರಿದಂತೆ ಹಲವು ಮುಖಂಡರು, ನಗರಸಭಾ ಬಿಜೆಪಿ ಸದಸ್ಯರು, ಬಿಜೆಪಿ ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ
ಕೆಂಪು ಕಲ್ಲು, ಮರಳು ಅಭಾವವನ್ನು ಶೀಘ್ರ ಪರಿಹರಿಸುವಂತೆ ಬಿಜೆಪಿ ವತಿಯಿಂದ ತಹಶೀಲ್ದಾರ್‌ರವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಉಪತಹಶೀಲ್ದಾರ್ ಸುಲೋಚನಾರವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.