ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪೂರ್ವಭಾವಿ ಸಭೆ ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡು ಅಧ್ಯಕ್ಷತೆ ವಹಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಗಣೇಶೋತ್ಸವಕ್ಕೆ ಗ್ರಾಮಸ್ಥರು ತನು ಮನ ಧನದ ಸಹಕಾರ ನೀಡಬೇಕು. ಧಾರ್ಮಿಕ ವಿಧಿ ವಿಧಾನದಂತೆ ಗಣೇಶೋತ್ಸವ ನಡೆಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ವರ್ಷದ ಉತ್ಸವ ಸಮಿತಿ ಅಧ್ಯಕ್ಷರಾಗಿ ನಾರಾಯಣ ಪೂಜಾರಿ ನೀರಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ವಸಂತ ಗೌಡ ಪಿಜಕ್ಕಳ, ಕಾರ್ಯಕ್ರಮದ ದಿನ ದೀಪ ಪ್ರಜ್ವಲನೆಯನ್ನು ದಾಮೋದರ ಗೌಡ ಶೇಡಿಗುತ್ತು, ದೇವರ ರಥದ ಸಾರಥಿಯಾಗಿ ಕುಳ್ಳಾಜೆ ವೇಣುಗೋಪಾಲ ಇವರನ್ನು ಆಯ್ಕೆ ಮಾಡಲಾಯಿತು. ಜನಸ್ಪಂದನ ಸಮಿತಿ ಬೆದ್ರೋಡಿ ಇದರ ಅಧ್ಯಕ್ಷ ಪವನ್ ಗೌಡ ಸುಳ್ಯ ಮಾತನಾಡಿ, ಗಣಪತಿ ವಿಸರ್ಜನಾ ಸ್ಥಳದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜವಾಬ್ದಾರಿ ವಹಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಪ್ರಸಾದ್ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಊರಿನ ಧಾರ್ಮಿಕ ಮುಖಂಡರು, ಗ್ರಾ.ಪಂ.ಸದಸ್ಯರು, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು, ಸದಸ್ಯರು, ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಸದಸ್ಯರು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು, ಭಜನಾ ತಂಡದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ಬಾರಿಕೆ ಸ್ವಾಗತಿಸಿ, ಕೋಶಾಧಿಕಾರಿ ಸೀತಾರಾಮ ವಂದಿಸಿದರು. ಜಗದೀಶ್ ಬಾರಿಕೆ ನಿರೂಪಿಸಿದರು. ಸೇಸಪ್ಪ ಗೌಡ ಉಪಾತಿಪಾಲು ಪ್ರಾರ್ಥಿಸಿದರು.