ಉಪ್ಪಿನಂಗಡಿ: ಹೊಸದಾಗಿ ರಚಿಸಲ್ಪಟ್ಟ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಯುವ ನೇತಾರ ಯು.ಟಿ. ತೌಸೀಫ್ ಅವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪುತ್ತೂರು ಮತ್ತು ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ಗಳೆರಡು ಅಸ್ತಿತ್ವದಲ್ಲಿತ್ತು. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಗೆ ಹಲವು ಗ್ರಾಮಗಳು ಇದ್ದುದ್ದರಿಂದ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದು ತೀರ್ಮಾನಕ್ಕೆ ಬಂದಿದ್ದ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ್ನು ಪ್ರತ್ಯೇಕಿಸಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಅದರಂತೆ ಪುತ್ತೂರು ಬ್ಲಾಕ್‌ಗೆ ಕೃಷ್ಣಪ್ರಸಾದ್ ಆಳ್ವ ಹಾಗೂ ವಿಟ್ಲ ಬ್ಲಾಕ್‌ಗೆ ಪದ್ಮನಾಭ ಪೂಜಾರಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತಾದರೂ, ಹೊಸದಾದ ಉಪ್ಪಿನಂಗಡಿ ಬ್ಲಾಕ್‌ನ್ನು ರಾಷ್ಟ್ರೀಯ ಅಧ್ಯಕ್ಷರು ಅನುಮೋದಿಸಬೇಕಾಗಿತ್ತು. ಶಾಸಕ ಅಶೋಕ್ ಕುಮಾರ್ ರೈಯವರ ಸತತ ಪ್ರಯತ್ನದ ಫಲವಾಗಿ ಈ ಪ್ರಕ್ರಿಯೆ ನಡೆದ ಬಳಿಕ ಉಪ್ಪಿನಂಗಡಿ ಬ್ಲಾಕ್ ಅಧಿಕೃತಗೊಂಡಿದ್ದು, ಇದರ ಪ್ರಥಮ ಅಧ್ಯಕ್ಷರನ್ನಾಗಿ ಯು.ಟಿ. ತೌಷೀಫ್ ಎಂದೇ ಕರೆಯಲ್ಪಡುವ ಮೊಹಮ್ಮದ್ ತೌಸೀದ್ ಯು.ಟಿ. ಅವರನ್ನು ನೇಮಕಗೊಳಿಸಿ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಯು.ಟಿ. ತೌಸೀಫ್ ಅವರು, ತನ್ನ ವಿದ್ಯಾರ್ಥಿ ಜೀವನದಲ್ಲಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಎನ್‌ಎಸ್‌ಯುಐಯ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಎನ್‌ಎಸ್‌ಯುಐ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಅತ್ಯಧಿಕ ಮತಗಳಿಂದ ಗೆದ್ದು ಪುತ್ತೂರು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರೂ ಸೇವೆ ಸಲ್ಲಿಸಿದ್ದರು. ಅಲ್ಲದೇ, ಕಾಂಗ್ರೆಸ್ ಪಕ್ಷದ ವಿವಿಧ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಪ್ರಸಕ್ತ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಉಬಾರ್ ಡೋನಾರ್‍ಸ್ ಸಂಘಟನೆಯಲ್ಲಿ ಸಕ್ರೀಯವಾಗಿರುವ ಇವರು ಹಲವು ಸಮಾಜಮುಖಿ ಕೆಲಸಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.