ಚಿತ್ರ: ಕಪಿಲಾ ಡಿಜಿಟಲ್ ಸವಣೂರು
ಸವಣೂರು: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ದ.ಕ. ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು.
ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನಕ್ಕೆ ಕಳೆದ ಮೇ 13ರಂದು ದೈವಸ್ಥಾನದ ಬ್ರಹಕಲಶೋತ್ಸವಕ್ಕೆ ಆಗಮಿಸಬೇಕಿದ್ದ ರೆಡ್ಡಿ ಅಂದು ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಆಗಮಿಸಲು ಸಾಧ್ಯವಾಗಿರಲಿಲ್ಲ. ಮೇ 13 ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲಿನಿಂದ ಬಿಡುಗಡೆಗೆ ಮೊರೆ ಇಟ್ಟಿದ್ದರು. ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವ ನುಡಿ ನೀಡಿತ್ತು. ಗ್ರಾಮದ ದೈವ ಕೆಡೆಂಜೋಡಿತ್ತಾಯಿ ದೈವ ರೆಡ್ಡಿಗೆ ಜೈಲಿನಿಂದ ಬಿಡುಗಡೆಯಾಗುವ ಅಭಯ ನೀಡಿತ್ತು.
ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಅವರು ಬಿಡುಗಡೆಯಾಗಿದ್ದರು. ಹಾಗಾಗಿ ಜು.16ರಂದು ಸಂಕ್ರಮಣ ದಿನದಂದು ಸವಣೂರಿನಲ್ಲಿರುವ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಬಿಡುಗಡೆಯ ಒಂದೂವರೆ ತಿಂಗಳ ಬಳಿಕ ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ದೈವಸ್ಥಾನದ ಆವರಣದಲ್ಲಿ ನೂತನ ಸಭಾಭವನಕ್ಕೆ ಜನಾರ್ಧನ ರೆಡ್ಡಿ ಅವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೈವಗಳ ನಾಡು ಪರಶುರಾಮ ಸೃಷ್ಟಿಯ ತುಳುನಾಡು.ದೈವದ ಆಶೀರ್ವಾದ ಪಡೆಯಲು ನಾನು ಆರೇಲ್ತಡಿಗೆ ಬಂದಿದ್ದೇನೆ.ನನ್ನನ್ನು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿದ್ದರು.ಆದರೆ ಕಾನೂನು ತೊಡಕು ಉಂಟಾಗಿ ಜೈಲಿಗೆ ಹೋಗುವಂತಾಯಿತು.ಈ ಸಂದರ್ಭದಲ್ಲಿ ಇಲ್ಲಿನ ಜನರು ನನ್ನ ಬಿಡುಗಡೆಗಾಗಿ ದೈವದ ಬಳಿ ಪ್ರಾರ್ಥಿಸಿದ್ದರು.ಆ ಸಂದರ್ಭದಲ್ಲಿ ದೈವದ ನುಡಿಯಂತೆ ನಾನು ಜೈಲಿನಿಂದ ಬಿಡುಗಡೆಯಾಗುವಂತಾಗಿದೆ.ಜೀವನದಲ್ಲಿ ಎಲ್ಲಾ ಏಳು ಬೀಳುಗಳು ಕೂಡ ದೇವರ ಇಚ್ಛೆಯಂತೆ ನಡೆಯುತ್ತದೆ.ಕಾನೂನು ತೊಡಕು ಕೂಡ ಭಗವಂತನ ಪರೀಕ್ಷೆ ಎಂದು ನಾನು ಭಾವಿಸಿದ್ದೇನೆ.ಇಲ್ಲಿನ ದೈವದ ಕಾರಣಿಕತೆ ಬಣ್ಣಿಸಲು ಪದಗಳಿಲ್ಲ ಎಂದರು.
ಸೇವಾರೂಪದಲ್ಲಿ ನೇಮೋತ್ಸವ ಇಂಗಿತ ವ್ಯಕ್ತಪಡಿಸಿದ ರೆಡ್ಡಿ
ಮುಂದಿನ ವರ್ಷದ ನೇಮೋತ್ಸವವನ್ನು ನಾನು ಸೇವಾರೂಪದಲ್ಲಿ ಮಾಡುತ್ತೇನೆ.ನಾವು ಕುಟುಂಬ ಸಮೇತರಾಗಿ ಬಂದು ದೈವದ ಪ್ರಸಾದ ಸ್ವೀಕರಿಸುತ್ತೇವೆ.ನೂತನವಾಗಿ ನಿರ್ಮಾಣವಾಗುವ ಸಭಾಭವನದ ವೆಚ್ಚವನ್ನು ಭರಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ 15 ಲಕ್ಷ ರೂ ದೇಣಿಗೆ ನೀಡಿದರು.
ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಮಾತನಾಡಿ, ದೈವರಾಧಾನೆಗೆ ಅದರದೇ ಆದ ಮಹತ್ವವಿದೆ.ದೈವವು ನಂಬಿದವರಿಗೆ ಮಾವನ ಸ್ಥಾನದಲ್ಲಿ ನಿಂತು ರಕ್ಷಣೆ ಹಾಗೂ ತಾಯಿಯ ಸ್ಥಾನದಲ್ಲಿ ನಿಂತು ಪೊರೆಯುತ್ತಾರೆ.ದೈವಗಳು ನಂಬಿದವರ ಕೈಯನ್ನು ಯಾವತ್ತೂ ಬಿಡುವುದಿಲ್ಲ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಜನಾರ್ದನ ರೆಡ್ಡಿ ಅವರ ಜೀವನದಲ್ಲಿ ದೈವದ ಕಾರಣಿಕತೆ ದೊಡ್ಡ ಪ್ರಭಾವ ಬೀರಿದೆ.ಈ ಮೂಲಕ ಆರೇಲ್ತಡಿ ದೈವಸ್ಥಾನದ ಶಕ್ತಿಗಳ ಸತ್ಯ ಜಗದಗಲ ಪಸರಿಸುವಂತಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿದರು.
ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್., ನಳಿನ್ ಕುಮಾರ್ ಶೆಟ್ಟಿ ಮುಗೇರುಗುತ್ತು,ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಪ್ರಶಾಂತ್ ಕೆಡೆಂಜಿ, ಆರೇಲ್ತಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಕಿನಾರ, ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ ಉಪಸ್ಥಿತರಿದ್ದರು.
ಪ್ರಕಾಶ್ ಕುದ್ಮನಮಜಲು, ತಾರಾನಾಥ ಕಾಯರ್ಗ, ತೀರ್ಥರಾಮ ಕೆಡೆಂಜಿ, ಗಂಗಾಧರ ಪೆರಿಯಡ್ಕ ಅತಿಥಿಗಳನ್ನು ಗೌರವಿಸಿದರು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಿನೇಶ್ ಮೆದು ಸ್ವಾಗತಿಸಿದರು, ಕೋಶಾಧಿಕಾರಿ ರಾಜೇಶ್ ಇಡ್ಯಾಡಿ ವಂದಿಸಿದರು. ಗೌರವ ಸಲಹೆಗಾರ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ರಸ್ತೆ ಉದ್ಘಾಟನೆ
ಈ ಸಂದರ್ಭದಲ್ಲಿ ನಳಿನ್ ಕುಮಾರ್ ಅವರ ಅನುದಾನ 90 ಲಕ್ಷ ರೂ.ಗಳ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಲಾಯಿತು. ಗುತ್ತಿಗೆದಾರರಾದ ಗಿರೀಶ್ ಮೆದು ಅವರನ್ನು ಗೌರವಿಸಲಾಯಿತು.
ಬಸ್ ತಂಗುದಾಣ ಉದ್ಘಾಟನೆ
ಶಾಸಕಿ ಭಾಗೀರಥಿ ಮುರುಳ್ಯ ಅವರ ಅನುದಾನದಲ್ಲಿ ಆರೇಲ್ತಡಿಯಲ್ಲಿ ನಿರ್ಮಾಣಗೊಂಡ ಬಸ್ ತಂಗುದಾಣವನ್ನು ಉದ್ಘಾಟಿಸಲಾಯಿತು. ಗುತ್ತಿಗೆದಾರರಾದ ಗಂಗಾಧರ ಪೆರಿಯಡ್ಕ, ರಾಜೇಶ್ ಇಡ್ಯಾಡಿ ಅವರನ್ನು ಗೌರವಿಸಲಾಯಿತು.
ಸವಣೂರಿನಲ್ಲಿ ಸ್ವಾಗತ
ಜನಾರ್ದನ ರೆಡ್ಡಿ ಅವರನ್ನು ಸವಣೂರು ಜಂಕ್ಣನ್ ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಆರೇಲ್ತಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿದರು. ಚೆಂಡೆ ವಾದ್ಯಗಳೊಂದಿಗೆ ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.