ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯತ್‌ನ ಶಿರ್ವತ್ತಡ್ಕ ಪದಂಬಳ ಎಂಬಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ‘ಸ್ವಚ್ಛ ಸಂಕೀರ್ಣ’ ಇದರ ಅನಾವರಣ ಕಾರ್ಯಕ್ರಮ ನಡೆಯಿತು.

ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಅನಾವರಣ ಕಾರ್ಯಕ್ರಮ ನೆರವೇರಿಸಿದರು. ಬಳಿಕ ಮಾತನಾಡಿದ ಕಾರ್ತಿಕೇಯನ್ ಅವರು, ಘನ ತ್ಯಾಜ್ಯ ಘಟಕಕ್ಕೆ ಇಲ್ಲಿ ಜಮೀನು ಕಾದಿರಿಸುವಲ್ಲಿ ಗ್ರಾಮ ಆಡಳಿತಾಧಿಕಾರಿ ಸಂತೋಷ್ ಹಾಗೂ ಹಿಂದಿನ ಪಿಡಿಒ ವೆಂಕಟೇಶ್ ಅವರ ಪ್ರಯತ್ನ ಇತ್ತು. ಘಟನ ತ್ಯಾಜ್ಯ ಸಂಗ್ರಹಕ್ಕೆ ಬಿಲ್ಡಿಂಗ್ ನಿರ್ಮಾಣದ ವೇಳೆಯೂ ಹಲವು ತೊಂದರೆಯಾದರೂ ಬಿಲ್ಡಿಂಗ್ ಆಗಿದೆ. ಸಹಕರಿಸಿದ ಎಲ್ಲರಿಗೂ ಗ್ರಾ.ಪಂ.ನಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಅತಿಥಿಯಾಗಿದ್ದ ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಅವರು ಮಾತನಾಡಿ, ಇಚ್ಛಾಶಕ್ತಿಯಿಂದ ಅಧಿಕಾರಿಗಳು ಕೆಲಸ ಮಾಡಿದಾಗ ಯಶಸ್ಸು ಕಾಣಲು ಸಾಧ್ಯವಿದೆ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಈ ನಿಟ್ಟಿನಲ್ಲಿ ಈ ಘಟಕ ಕಾರ್ಯಾರಂಭಗೊಳ್ಳಲಿ ಎಂದು ಹೇಳಿದರು.

ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾ ಅವರು ಮಾತನಾಡಿ, ನಾನು ಅಧ್ಯಕ್ಷೆಯಾಗಿದ್ದ ವೇಳೆ ಗ್ರಾಮದ ಸ್ವಚ್ಛತೆ ನಿಟ್ಟಿನಲ್ಲಿ ಪದಂಬಳದಲ್ಲಿ ಘನತ್ಯಾಜ್ಯ ನಿರ್ಮಾಣಕ್ಕೆ ಹಾಗೂ ಗುಂಡ್ಯದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಹಲವು ಅಡೆ ತಡೆ ಇದ್ದರೂ ಗುದ್ದಲಿ ಪೂಜೆ ಮಾಡಲಾಗಿತ್ತು. ಅಧಿಕಾರಿಗಳ ಸಹಕಾರದಿಂದ ಈ ಎರಡೂ ಯೋಜನೆಗಳೂ ಅನುಷ್ಠಾನ ಆಗಿದೆ. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಎನ್‌ಆರ್‌ಎಲ್‌ಎಂನ ಸಂಯೋಜಕ ಜಗತ್ ಮಾತನಾಡಿ, ಮನೆ, ವಾಣಿಜ್ಯ ಸಂಕೀರ್ಣದಲ್ಲಿನ ಒಣಕಸವನ್ನು ಗ್ರಾಮದಲ್ಲಿರುವ ಘನತ್ಯಾಜ್ಯ ಘಟಕಗಳಲ್ಲಿ ಸಂಗ್ರಹಿಸಿ ಬಳಿಕ ಕೆದಂಬಾಡಿಯಲ್ಲಿರುವ ಎಂಆರ್‌ಎಫ್‌ನ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೊಂಡೊಯ್ಯಲಾಗುವುದು. ಪ್ರತಿ ಮನೆಯವರು ಒಣಕಸ, ಪ್ಲಾಸ್ಟಿಕ್‌ಗಳನ್ನು ನೀಡಿ ಸಹಕರಿಸಬೇಕು. ಇದರ ನಿರ್ವಹಣೆಯನ್ನು ಸಂಜೀವಿನಿ ಒಕ್ಕೂಟದವರು ಮಾಡಲಿದ್ದಾರೆ ಎಂದರು.
ಈ ಹಿಂದೆ ಶಿರಾಡಿ ಗ್ರಾ.ಪಂ. ಅಭಿವೃದ್ಧಿಯಾಗಿದ್ದು ಪ್ರಸ್ತುತ ಉಳ್ಳಾಲ ತಾ.ಪಂ.ನಲ್ಲಿ ಸಹಾಯಕ ನಿರ್ದೇಶಕರಾಗಿರುವ ವೆಂಕಟೇಶ್ ಮಾತನಾಡಿ, ಹಲವು ಅಡೆ ತಡೆ ನಡುವೆ ಸ್ವಚ್ಛ ಸಂಕೀರ್ಣ ಆಗಿದೆ. ಇದರ ಸದುಪಯೋಗ ಆಗಬೇಕು ಎಂದರು. ಕಡಬ ತಾ.ಪಂ.ಸಹಾಯಕ ನಿರ್ದೇಶಕ ಸಂದೇಶ್ ಮಾತನಾಡಿ, ನರೇಗಾದಲ್ಲಿ ಸ್ವಚ್ಛ ಸಂಕೀರ್ಣ ಹಾಗೂ ಇಲ್ಲಿಗೆ ಸಂಪರ್ಕಿಸುವ ರಸ್ತೆ ಕಾಂಕ್ರಿಟೀಕರಣ ಆಗಿದೆ. ತ್ಯಾಜ್ಯದ ಜೊತೆಗೆ ಶುಲ್ಕ ಸಂಗ್ರಹವೂ ಆಗಬೇಕು. ಸಂಜೀವಿನಿಯವರಿಗೆ ಎಲ್ಲರು ಸಹಕಾರ ನೀಡಬೇಕೆಂದು ಹೇಳಿದರು.
ಗ್ರಾ.ಪಂ.ಸದಸ್ಯ ಸಣ್ಣಿಜೋನ್, ಲಕ್ಷ್ಮಣ ಗೌಡ ಕುದ್ಕೋಳಿ ಉಪಸ್ಥಿತರಿದ್ದರು. ಶಿರಾಡಿ ಗ್ರಾ.ಪಂ.ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಸ್ವಚ್ಛ ಸಂಕೀರ್ಣ ನಿರ್ಮಾಣ ನಿಟ್ಟಿನಲ್ಲಿ ವಿವಿಧ ರೀತಿಯ ಸಹಕಾರ ನೀಡಿದ ಅಕ್ರಮ ಸಕ್ರಮ ಸಮಿತಿ ಸದಸ್ಯ, ಜಿ.ಪಂ.ಮಾಜಿ ಸದಸ್ಯರೂ ಆದ ಪಿ.ಪಿ.ವರ್ಗೀಸ್, ಈ ಹಿಂದಿನ ಪಿಡಿಒ ವೆಂಕಟೇಶ್, ತಾ.ಪಂ.ಸಹಾಯಕ ನಿರ್ದೇಶಕ ಸಂದೇಶ್, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್, ಮಾಜಿ ಅಧ್ಯಕ್ಷೆ, ಹಾಲಿ ಉಪಾಧ್ಯಕ್ಷೆ ವಿನೀತಾ ತಂಗಚ್ಚನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯದರ್ಶಿ ಶಾರದಾ ಅವರು ಸನ್ಮಾನಿತರನ್ನು ಪರಿಚಯಿಸಿದರು.