’ಮತ್ತೆ ಮೊದಲಿಂದ’ ಗೀತಾ ಗುಚ್ಛದ ನಾಲ್ಕು ಪ್ರೇಮಗೀತೆಗಳು ರಿಲೀಸ್ : ’ಭಟ್ರ’ ಗರಡಿಯಲ್ಲಿ ಮಿಂಚುತ್ತಿರುವ ಪುತ್ತೂರಿನ ’ಸಂಜನ್ ಕಜೆ’

0

ಮತ್ತೆ ಮೊದಲಿನಿಂದ ಎಂಬ ನಾಲ್ಕು ಬಣ್ಣಗಳ ಅಚ್ಚ ಕನ್ನಡದ ಪ್ರೇಮಗೀತೆಗಳು ಸಿನಿ ರಸಿಕರ ಮನರಂಜಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ವೀಕ್ಷಣೆಯೊಂದಿಗೆ ಮುನ್ನುಗ್ಗುತ್ತಿದೆ. ಈ ಗೀತಾ ಗುಚ್ಛದಲ್ಲಿ ನಾಲ್ಕು ಪ್ರೇಮ ಗೀತೆಗಳಿದ್ದು, ನಾಲ್ಕೂ ಹಾಡುಗಳು ನಾಲ್ಕು ಬಣ್ಣಗಳನ್ನು ಪ್ರತಿನಿಧಿಸುತ್ತದೆ. ಗೀತೆ-1 ನೀಲಿ, ಗೀತೆ-2 ಬಿಳುಪು, ಗೀತೆ-3 ಕೆಂಪು, ಗೀತೆ-4 ಹಸಿರು. ಈ ಪೈಕಿ ಮೂರು ಆಲ್ಬಂ ಸಾಂಗ್‌ಗಳು ಈಗಾಗಲೇ ಬಿಡುಗಡೆಯಾಗಿದ್ದು, ನೀ ಹೋದ ಮೇಲೆ ಅನುಮಾನ ಬಂತು… ನಿನಗೊಂದು ಹೃದಯ ಇತ್ತೇ ಮೊದಲಿನಿಂದ ಎಂಬ ನಾಲ್ಕನೇ ಹಾಗೂ ಕೊನೆಯ ಆಲ್ಬಂ ವಿಡಿಯೋದಲ್ಲಿ ನಟ ಸಂಜನ್ ಕಜೆ ಅವರಿಗೆ ನಟಿ ಅಂಜಲಿ ಗೌಡ ಅವರು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ನೆನಪಿನ ಬಣ್ಣ ಹಸಿರಿನಲ್ಲಿ ಈ ಜೋಡಿ ತೆರೆಹಂಚಿಕೊಂಡಿದ್ದು, ಅಂಜಲಿ ಗೌಡ ಅವರು ಹಾಕಿದ ಹೆಜ್ಜೆ ಸಿನಿರಸಿಕರ ಮನದಲ್ಲಿ ಹಚ್ಚೆ ಹಾಕಿದೆ.

ಈ ಸುಂದರ ಗೀತಾ ಗುಚ್ಛದ ನಾಲ್ಕನೇ ಹಾಗೂ ಕೊನೆಯ ಹಾಡನ್ನು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಬಿಡುಗಡೆಗೊಳಿಸಿದ್ದಾರೆ. ಅನೇಕ ಸೂಪರ್‌ಹಿಟ್ ಸಿನಿಮಾನಗಳನ್ನು ನೀಡಿದ ಹಾಗೂ ಡೈಲಾಗ್‌ಗಳಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತಿ ಗಳಿಸಿದ ನಿರ್ದೇಶಕ ಯೋಗರಾಜ್ ಭಟ್ ಅವರೇ ಈ ಹಾಡುಗಳನ್ನು ಬರೆದಿರುವುದು ಇನ್ನೊಂದು ವಿಶೇಷ. ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಟ್ರು, ಈ ಗೀತಾ ಗುಚ್ಛದಲ್ಲಿ ನಾಲ್ಕು ಪ್ರೇಮಗೀತೆಗಳಿದ್ದು, ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ ಎಂದಿದ್ದಾರೆ.

ದಿಗ್ಗಜರಿಂದ ಗಾಯನ, ಸಂಗೀತ ಸಂಯೋಜನೆ

ಯೋಗರಾಜ್ ಭಟ್ ಅವರ ಸಾಹಿತ್ಯದಲ್ಲಿ ಮೂಡಿಬಂದ ನಾಲ್ಕು ಪ್ರೇಮದ ಬಣ್ಣಗಳ ಹಾಡುಗಳಿಗೆ ದಿಗ್ಗಜ ಗಾಯಕರು ಗಾಯನ ಮಾಡಿದ್ದು, ನಾಲ್ವರು ಹೆಸರಾಂತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ. ಗೀತೆ-೧ರ ’ನಿನ್ನ ಕಣ್ಣು ನೀಲಿ’ ಎಂಬ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿದರೆ, ಅನಿರುದ್ಧ ಶಾತ್ತ್ರಿ ಸಂಗೀತ ಸಂಯೋಜಿಸಿದ್ದಾರೆ. ಗೀತೆ-೨ರ ’ಪ್ರಿಯ ಸಖಿ’ ಹಾಡನ್ನು ಗಾಯಕ ಚೇತನ್ ಸೋಸ್ಕ ಅವರು ಹಾಡಿದರೆ, ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಗೀತೆ-೩ರ ’ಉನ್ಮಾದ’ ಹಾಡನ್ನು (Male Version) ಗಾಯಕರಾದ ಹೇಮಂತ್ ಕುಮಾರ್ ಮತ್ತು ಅದಿತಿ ಖಂಡೇಗಲ ಅವರು ಹಾಡಿದರೆ (Female Version), ಚೇತನ್ ಮತ್ತು ಡ್ಯಾವಿ ಸಂಗೀತ ಸಂಯೋಜಿಸಿದ್ದಾರೆ. ಗೀತೆ-೪ರ ’ನೀ ಹೋದ ಮೇಲೆ’ ಹಾಡನ್ನು ಗಾಯಕ ವಾಸುಕಿ ವೈಭವ್ ಹಾಡಿದರೆ, ವಿ ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ.

ಉನ್ಮಾದ ಹಾಡಿನಲ್ಲಿ ಸಂಜನ್ ಅವರಿಗೆ ನಟಿ ದೇವಿಕಾ ಶಿಂಧೆ ಜೋಡಿಯಾಗಿ ಕಾಣಿಸಿಕೊಂಡರೆ, ಬಿಳುಪು ಬಣ್ಣದ ಹಾಡಿನಲ್ಲಿ ಅಮಿತಾ ಎಸ್ ಕುಲಾಲ್ ಹಾಗೂ ಹಸಿರು ಬಣ್ಣದ ಹಾಡಿನಲ್ಲಿ ಅಂಜಲಿ ಗೌಡ ಅವರು ಸ್ಕ್ರೀನ್ ಹಂಚಿಕೊಂಡಿದ್ದಾರೆ. ನೀಲಿ ಕಣ್ಣು ನೀಲಿ…ನೀಲಿ ಹಾಡಿನಲ್ಲಿ ಖ್ಯಾತ ಚಿತ್ರನಟಿ ನಿಧಿ ಸುಬ್ಬಯ್ಯ ಜೊತೆ ಸಂಜನ್ ಕಜೆ ಕಾಣಿಸಿಕೊಂಡಿದ್ದಾರೆ.

ನಟ ಸಂಜನ್ ಕಜೆ ಯಾರು?

ಖ್ಯಾತ ಆಯುರ್ವೇದ ವೈದ್ಯ ಗಿರಿಧರ ಕಜೆ ಅವರ ಅಣ್ಣ ಆಯುರ್ವೇದ ತಜ್ಞ ಶಶಿಧರ್ ಕಜೆ ಅವರ ಪುತ್ರ ಸಂಜನ್ ಕಜೆ. ಸಿನಿ ರಂಗಕ್ಕೆ ಅನೇಕ ಪ್ರತಿಭೆಗಳನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಪ್ರತಿಭೆ ಇವರಾಗಿದ್ದಾರೆ. ಸದ್ಯ ನಾಲ್ಕು ಬಣ್ಣಗಳ ಮೂಲಕ ಜನಮನ ರಂಜಿಸಿದ ಸಂಜನ್ ಮತ್ತು ಜೋಡಿಗಳ ಅಭಿನಯದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here