ವಿಟ್ಲ : ಟಿಪ್ಪರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಅನಂತಾಡಿ ಅಶ್ವಥಡಿ ನಿವಾಸಿ ಅನೀಶ್ (34) ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೆಲಿಂಜ ಎಂಬಲ್ಲಿ ಜು.21ರಂದು ನಡೆದಿದೆ.ಕಲ್ಲಡ್ಕದಿಂದ ವಿಟ್ಲ ಕಡೆ ಬರುತ್ತಿದ್ದ ಕಾರಿಗೆ ಕಲ್ಲಡ್ಕ ಕಡೆ ತೆರಳುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಅನೀಶ್ ಅವರ ಸಹೋದರಿ ಮತ್ತು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಂತಾಡಿ ಅಶ್ವಥಡಿ ನಿವಾಸಿ ಅನೀಶ್ ಅವರು ತಮ್ಮ ಸಹೋದರಿ ಹಾಗೂ ಅವರ ಇಬ್ಬರ ಮಕ್ಕಳನ್ನು ವಿಟ್ಲದ ಮನೆಗೆ ಬಿಟ್ಟು ಬರಲೆಂದು ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು,ಕಾರಿನೊಳಗಿನವರು ತೀವ್ರ ಗಾಯಗೊಂಡು ಸ್ಥಳೀಯರಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರ ಗಾಯಗೊಂಡ ಅನೀಶ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ. ಮೃತರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.
