ಬೆಟ್ಟಂಪಾಡಿ: ಕುಳ ತರವಾಡು ಮನೆ ನೆಟ್ಟಣಿಗೆ ಅಂಚೆ ಕಾಸರಗೋಡು ಇಲ್ಲಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ಕುಳತ್ತ ಕಂಡೊಡು ಕುಸಲ್ದ ಗೊಬ್ಬುಲು ಎಂಬ ಕಾರ್ಯಕ್ರಮ ಜು. 19 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳ್ಳೂರು ಕೃಷಿ ಭವನದ ಕೃಷಿ ಅಧಿಕಾರಿ ಅದ್ವೈತ ಎಂ.ವಿ ಇವರು ಮಾತನಾಡಿ, ಕೃಷಿ ಪದ್ಧತಿಯು ಅನುಕರಣೆಯಿಂದ ಮಕ್ಕಳಿಗೆ ಬರುತ್ತದೆ. ನಮ್ಮ ಹಿರಿಯರು ಅಲ್ಪಮಟ್ಟಿಗಾದರೂ ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಅನುಕರಣೆ ಸಾಧ್ಯ. ಮಕ್ಕಳಿಗೆ ಕೃಷಿಯ ಅರಿವಿಲ್ಲ ಎನ್ನುವುದು ತಪ್ಪು. ಅನ್ನಾಹಾರವಿಲ್ಲದೆ ನಾವಿಲ್ಲ. ಇಂತಹ ಕಾರ್ಯಕ್ರಮವನ್ನು ಸೂಕ್ತ ಸ್ಥಳದಲ್ಲಿಯೇ ಆಯೋಜಿಸಿದ್ದೀರಿ ಎಂದರು. ಮುಖ್ಯ ಅತಿಥಿ ಅರಣ್ಯ ಸಂಚಾರಿದಳ ಮಂಗಳೂರು ವಲಯ ಅರಣ್ಯಾಧಿಕಾರಿ ಸಂತೋಷ್ ರೈ ಕೆ ಮಾತನಾಡಿ, ಮಣ್ಣಿನ ಗೌರವದ ಅರಿವಾಗಬೇಕು. ಅದರ ಸತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಕೆಲಸವನ್ನು ಮಾಡುತ್ತಿದ್ದೀರಿ ಎಂದರು.

ಪೈರು ಬೆಳೆಯುವ ಗದ್ದೆಗೆ ಕ್ಷೀರ ಸಮರ್ಪಣೆ
ಕುಳತ್ತ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಗದ್ದೆಗೆ ಇಳಿಯುವ ಮುಂಚಿತವಾಗಿ ಶುಭ ಮುಹೂರ್ತದಲ್ಲಿ ಗದ್ದೆಗೆ ಕ್ಷೀರ ಸಮರ್ಪಣೆ ಮಾಡಲಾಯಿತು.

ವೈಭವದ ಮೆರವಣಿಗೆ
ಸಾಂಪ್ರದಾಯಿಕ ಶೈಲಿಯಲ್ಲಿ ಗ್ರಾಮ್ಯ ಪದ್ಧತಿಗೆ ಅನುಗುಣವೆಂಬಂತೆ ಎಲ್ಲಾ ವಿದ್ಯಾರ್ಥಿನಿಯರು ಮಗ್ಗದ ಸೀರೆ, ಕತ್ತಿ, ಮುಟ್ಟಲೆ ಹಾಗೂ ವಿದ್ಯಾರ್ಥಿಗಳು ಕಂಬೈ,ಕತ್ತಿ ಮುಟ್ಟಲೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪಾಡ್ದನದ ಇಂಪು ಹಳ್ಳಿ ಸೊಗಡಿನ ವೈಶಿಷ್ಟ್ಯತೆಯನ್ನು ಸೂಚಿಸುತ್ತಿತ್ತು.

ತಟ್ಟಿ ಹೆಣೆಯೋಣ ಬನ್ನಿ ಚಪ್ಪರಕೆ
ಶಾಮಿಯಾನಗಳಿಂದ ಮುಕ್ತಿ ಪಡೆಯುವ ಆಲೋಚನೆಯಿಂದ ವಿದ್ಯಾರ್ಥಿಗಳಿಗೆ ತೆಂಗಿನ ಗರಿಗಳಿಂದ ಚಪ್ಪರಕ್ಕೆ ಹಾಗೂ ದೈವಿಕ ಆಚರಣೆಗಳಿಗೆ ಬಳಸುವ ತಟ್ಟಿ ಹೆಣೆಯುವ ಕೌಶಲ್ಯವನ್ನು ಶ್ರೀಮತಿ ತಿರುಮಲೇಶ್ವರಿ ಕುತ್ಯಡ್ಕ ಇವರು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.

ಮಕ್ಕಳಿಗೆ ಮಿಮಿಕ್ರಿಯ ರಂಜನೆ
ಗಿನ್ನಿಸ್ ಸುರೇಶ್ ಯಾನೆ ಸುರೇಶ್ ಯಾದವ್ ಜಯನಗರ ಮುಳ್ಳೇರಿಯ ಇವರು ವಿದ್ಯಾರ್ಥಿಗಳಿಗೆ ಬಲು ಪ್ರಿಯವಾದ ಹಕ್ಕಿಗಳ ಕೂಗು ಪ್ರಾಣಿಗಳ ಕೂಗು ಹಾಗೂ ಇನ್ನಿತರ ಅನೇಕ ವ್ಯಕ್ತಿಗಳ ದನಿಗಳನ್ನು ಅನುಕರಣೆ ಮಾಡುತ್ತಾ ಮಕ್ಕಳಿಗೆ ಮಿಮಿಕ್ರಿಯ ಸ್ವಾದವನಿತ್ತರು.

ಎಲೆ ಮರೆಯ ಶ್ರಮಿಕರಿಗೆ ಗೌರವಾರ್ಪಣೆ
ಯಕ್ಷಗಾನ ಕಲಾವಿದ, ಕಾರ್ಯಕ್ರಮ ನಿರೂಪಕ ಹಾಗೂ ಅತಿ ಕಡಿಮೆ ದರದಲ್ಲಿ ದನಕ್ಕೆ ಇಂಜೆಕ್ಷನ್ ಕೊಡುವ ಸರಳ ಜೀವಿ ಸಾಧಕ, ಸರ್ವೋದಯ ವಿದ್ಯಾ ಸಂಸ್ಥೆ ಸುಳ್ಯಪದವಿನಲ್ಲಿ ಜವಾನರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೇಶ್ ಸುಳ್ಯಪದವು, ನೇಜಿ ನಾಟಿ ಭತ್ತಕುಟ್ಟುವುದು, ಅಕ್ಕಿ ಕೇರುವುದು ಮುಂತಾದ ಕೃಷಿ ಪದ್ಧತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಮಹಿಳೆ ಗೌರಿ ಅಕ್ಕ, ಕೃಷಿ ಕ್ಷೇತ್ರದಲ್ಲಿ ಅದ್ಭುತ ಬೆಳವಣಿಗೆ ಕಂಡ ಶ್ರೀ ಚಂದ್ರಶೇಖರ ಬಜ, ತೋಟಕ್ಕೆ ಮದ್ದು ಬಿಡುವುದು ಹಾಗೂ ಅಡುಗೆ ಕೆಲಸಗಳಲ್ಲಿ ತೊಡಗಿಸಿಕೊಂಡ ಶಿವಪ್ಪ ನಾಯ್ಕ ನವರಿಗೆ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವತಿಯಿಂದ ಗೌರವಾರ್ಪಣೆ ನಡೆಯಿತು.

ಗದ್ದೆಯಲ್ಲಿ ಕುಸಲ್ದ ಗೊಬ್ಬುಲು
ಮಕ್ಕಳ ಪೂರ್ಣ ಮನರಂಜನೆಗೆ ಪೂರಕವೆಂಬಂತೆ ಗೂಟ ಸುತ್ತುವುದು, ಜೇಡರಬಲೆ, ಹಿಮ್ಮುಖ ಓಟ, ಲಕ್ಕಿ ಸರ್ಕಲ್, ಹಾಗೂ ಹಗ್ಗ ಜಗ್ಗಾಟದಂತಹ ಆಟಗಳು ವಿದ್ಯಾರ್ಥಿಗಳಿಗೆ ಸಂತಸದ ಎಲ್ಲೆ ಮೀರಿಸುವಂತಿತ್ತು. ಪೋಷಕರಾದ ಸೀತಾರಾಮ ಗೌಡ ಮಿತ್ತಡ್ಕ, ಪ್ರದೀಪ್ ರೈ ನುಳಿಯಾಲು ಹಾಗೂ ಸನತ್ ರೈ ಸಂಗಮ್ ನಿಲಯ ಸಹಕರಿಸಿದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಅಧ್ಯಕ್ಷರಾದ ಚನಿಯಪ್ಪ ನಾಯ್ಕ, ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಸತೀಶ್ ರೈ ಕಟ್ಟಾವು, ಶಿಕ್ಷಕಿ ಆಶಾ ಎಡಮೊಗರು ಹಾಗೂ ಕುಳ ತರವಾಡು ಮನೆಯ ದಾಮೋದರ ಮಣಿಯಾಣಿವರು ಉಪಸ್ಥಿತರಿದ್ದರು.

ಶಾಲಾ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರತಿ ವಿದ್ಯಾರ್ಥಿಗಳಿಗೆ ಒಂದೊಂದರಂತೆ ಸುಮಾರು 500 ಗಿಡಗಳನ್ನು ದಾಮೋದರ ಮಣಿಯಾಣಿ ಕುಳ ಇವರ ಬೇಡಿಕೆಯಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ಸಂತೋಷ್ ರೈ ಕೆ. ಇವರ ಸಹಕಾರದಿಂದ ಅರಣ್ಯ ಇಲಾಖೆ ವತಿಯಿಂದ ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ವೃಷ್ಟಿ,ಧನ್ವಿ. ಎ ಎಂ,ಪ್ರಣಿತ , ಸಾಕ್ಷ್ಯ ಜೆ ರೈ ಪ್ರಾರ್ಥಿಸಿದರು. ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ಸಹ ಶಿಕ್ಷಕಿ ಭವ್ಯ ವಂದಿಸಿದರು. ವಿದ್ಯಾರ್ಥಿನಿ ಧನ್ವಿ ರೈ ಕೋಟೆ ಕಾರ್ಯಕ್ರಮ ನಿರೂಪಿಸಿದರು.