ಪುತ್ತೂರು ನಗರ ಕಾಂಗ್ರೆಸ್ ರದ್ದು ನಿರ್ಧಾರಕ್ಕೆ ಕಾರ್ಯಕರ್ತರ ಆಕ್ರೋಶ : ಕಾಂಗ್ರೆಸ್ ನಗರ ವಲಯಗಳ ಸಭೆ ದಿಢೀರ್ ಮುಂದೂಡಿಕೆ

0

ಪುತ್ತೂರು: ನಗರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಪುತ್ತೂರು ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಿ 7 ವಲಯಗಳನ್ನು ರಚನೆ ಮಾಡಿರುವ ಪಕ್ಷದ ತೀರ್ಮಾನಕ್ಕೆ ಕೆಲವು ಮುಖಂಡರು ಹಾಗೂ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಜು.22ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಬೇಕಾಗಿದ್ದ ವಲಯ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ದಿಢೀರ್ ಮುಂದೂಡಿಕೆಯಾಗಿದೆ.ಆದರೆ, ಶಾಸಕರಿಗೆ ಬಿಡುವಿಲ್ಲದ ಕಾರಣ ಅವರ ಸೂಚನೆಯಂತೆ ಸಭೆಯನ್ನು ಮುಂದೂಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ಪಷ್ಟನೆ ನೀಡಿದ್ದಾರೆ.


ಈ ಹಿಂದೆ ಪುತ್ತೂರು ನಗರ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದ್ದು ಅದರ ಅಡಿಯಲ್ಲಿ 40 ಬೂತ್‌ಗಳು ಕಾರ್ಯನಿರ್ವಹಿಸುತ್ತಿದ್ದವು.ಆದರೆ ಇದೀಗ, ಪಕ್ಷದ ಸಂವಿಧಾನದಲ್ಲಿ ಇಲ್ಲ ಎನ್ನುವ ಕಾರಣಕ್ಕಾಗಿ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಿ,ನಗರ ವ್ಯಾಪ್ತಿಯಲ್ಲಿ 7 ವಲಯಗಳ ರಚನೆ ಮಾಡಲು ಪಕ್ಷದ ಕೋರ್ ಕಮಿಟಿಯಲ್ಲಿ ತೀರ್ಮಾನವಾಗಿತ್ತು.ನಗರದಲ್ಲಿ ಪಕ್ಷವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಸಂಘಟಿಸಿ ಬಲ ಪಡಿಸುವ ನಿಟ್ಟಿನಲ್ಲಿ ಶಾಸಕರ ಚಿಂತನೆ ಹಾಗೂ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್‌ನಲ್ಲಿ ಈ ಕುರಿತು ತೀರ್ಮಾನಿಸಲಾಗಿದ್ದು ನಗರ ಕಾಂಗ್ರೆಸ್‌ನ ಬದಲಾಗಿ ನಗರದ 40 ಬೂತ್‌ಗಳ ಪೈಕಿ 6 ಬೂತ್‌ಗಳಿಗೆ ಒಂದು ವಲಯದಂತೆ ಒಟ್ಟು 7 ವಲಯಗಳನ್ನು ರಚಿಸಲಾಗಿದೆ.ಎಲ್ಲಾ 7 ವಲಯಗಳಿಗೂ ಅಧ್ಯಕ್ಷರನ್ನು ನೇಮಿಸಲಾಗಿದೆ.ನಗರದ 7 ವಲಯಗಳಿಗೆ ಸಂಬಂಧಿಸಿದಂತೆ ಮಹಮ್ಮದ್ ಆಲಿ, ದುರ್ಗಾಪ್ರಸಾದ್ ರೈ ಕುಂಬ್ರ ಹಾಗೂ ಅಮಳ ರಾಮಚಂದ್ರ ಅವರನ್ನು ಉಸ್ತುವಾರಿಗಳನ್ನಾಗಿ ಪಕ್ಷದಿಂದ ನೇಮಿಸಲಾಗಿದೆ. ಪ್ರಸ್ತುತ ನಗರ ಸಭೆಯಲ್ಲಿ 5 ಮಂದಿ ಮಾತ್ರ ಕಾಂಗ್ರೆಸ್ ಸದಸ್ಯರಿದ್ದು ಮುಂದಿನ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಲು ನಗರ ಕಾಂಗ್ರೆಸ್‌ನ್ನು 7 ವಲಯ ಕಾಂಗ್ರೆಸ್ ಆಗಿ ಮುನ್ನಡೆಸಲಾಗುವುದು.ಈ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಜು.22ರಂದು ನಗರ ಕಾಂಗ್ರೆಸ್ ಹಾಗೂ ನಗರ ಸಭೆಯ ನೇತೃತ್ವ ವಹಿಸಿಕೊಂಡು ಪಕ್ಷವನ್ನು ಮುನ್ನಡೆಸಿದ ಎಲ್ಲ ಮಾಜಿ ಅಧ್ಯಕ್ಷರುಗಳನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೌರವಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದರು.


ದಿಢೀರ್ ಸಭೆ ಮುಂದೂಡಿಕೆ:
ಜು.22ರಂದು ಸಭೆ ನಡೆಯಲಿದ್ದ ಕುರಿತು ಜು.21ರಂದು ರಾತ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ನೀಡಿದ್ದರು.ಆದರೆ,ಜು.22ರಂದು ಬೆಳಿಗ್ಗೆ ಸಭೆ ದಿಢೀರ್ ಮುಂದೂಡಿಕೆಯಾಗಿದೆ.


ನಗರ ಕಾಂಗ್ರೆಸ್ ಘಟಕ ರದ್ದತಿಗೆ ಆಕ್ಷೇಪ ಕಾರಣ:
ಪುತ್ತೂರು ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಿರುವ ತೀರ್ಮಾನಕ್ಕೆ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜು.22ರ ಸಭೆ ಮುಂದೂಡಿಕೆಯಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.


ಪ್ರಸ್ತುತ ಎಚ್.ಮಹಮ್ಮದ್ ಆಲಿಯವರು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಹಿಂದೆ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷತೆ ಹುದ್ದೆಯ ಆಕಾಂಕ್ಷಿಯಾಗಿದ್ದ ಆಲಿಯವರಿಗೆ ಅವಕಾಶ ನೀಡಲಾಗಿಲ್ಲ.ಇದರಿಂದ ಶಾಸಕರ ಸಹಿತ ಪಕ್ಷದ ಕೆಲವರ ವಿರುದ್ಧ ಅಸಮಾಧಾನಿತರಾಗಿರುವ ಮಹಮ್ಮದ್ ಆಲಿಯವರಿಗೆ ಪಕ್ಷದ ಜವಾಬ್ದಾರಿಯನ್ನೂ ತಪ್ಪಿಸುವ ದುರುದ್ದೇಶದಿಂದ ಇದೀಗ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಪಕ್ಷದ ಕೆಲವು ಕಾರ್ಯಕರ್ತರು, ಈ ನಿರ್ಧಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಆಕ್ಷೇಪ ವ್ಯಕ್ತಪಡಿಸಿ, ಆಕ್ರೋಶ ಹೊರ ಹಾಕಿದ್ದರು.ವಿಚಾರ ಶಾಸಕರ ಗಮನಕ್ಕೂ ಬಂದ ಹಿನ್ನೆಲೆಯಲ್ಲಿ ಅವರ ಸೂಚನೆಯಂತೆ ಉದ್ದೇಶಿತ ಸಭೆ ಮುಂದೂಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ.


ಸೊರಕೆ ಅವಧಿಯಿಂದ ನಗರ ಕಾಂಗ್ರೆಸ್ ಕಾರ್ಯನಿರ್ವಹಣೆ:
ಈ ಹಿಂದೆ ವಿನಯ ಕುಮಾರ್ ಸೊರಕೆ ಅವರು ಪುತ್ತೂರಿನಲ್ಲಿ ಶಾಸಕರಾಗಿದ್ದ ಅವಽಯಿಂದ ಪುತ್ತೂರು ನಗರ ಕಾಂಗ್ರೆಸ್ ಘಟಕ ಕಾರ್ಯನಿರ್ವಹಿಸುತ್ತಿದೆ.ಡಾಲಿ ಎ.ರೇಗೋ,ಸತೀಶ್ ನಾಕ್,ಸೂತ್ರಬೆಟ್ಟು ಜಗನ್ನಾಥ ರೈ,ಲ್ಯಾನ್ಸಿ ಮಸ್ಕರೇನ್ಹಸ್ ಅವರು ಈ ಹಿಂದೆ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಪ್ರಸ್ತುತ ಮಹಮ್ಮದಾಲಿಯವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ನಗರಸಭೆ ಚುನಾವಣೆ ತನಕ ನಗರ ಕಾಂಗ್ರೆಸ್ ಮುಂದುವರಿಕೆ?:
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು ಅವಕಾಶ ವಂಚಿತರಾಗಿದ್ದ ಮಹಮ್ಮದ್ ಆಲಿಯವರು ಆನಂತರದ ಬೆಳವಣಿಗೆಯಲ್ಲಿ ಪಕ್ಷದ ಸಕ್ರಿಯ ಚಟುವಟಿಕೆಯಿಂದ ತುಸು ದೂರ ಉಳಿದಿದ್ದರು.ಇನ್ನೇನು ನಗರ ಸಭೆಯ ಚುನಾವಣೆ ಸಮೀಪಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಮಹಮ್ಮದ್ ಆಲಿಯವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದರೆ ಸಮಸ್ಯೆಯಾಗುವ ಸಾಧ್ಯತೆ ಇರುವ ಕುರಿತು ಪಕ್ಷದ ಕೆಲವು ಪ್ರಮುಖರು ಶಾಸಕರ ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಮಹಮ್ಮದ್ ಆಲಿಯವರನ್ನು ಕರೆಸಿ ಮಾತುಕತೆ ನಡೆಸಿ ಅವರನ್ನು ಸಮಾಧಾನಿಸುವ ಪ್ರಯತ್ನ ನಡೆಸಿದ್ದರು.ಈ ವೇಳೆ ಆಲಿಯವರು ಕೆಲವೊಂದು ಶರ್ತಗಳನ್ನು ಮುಂದಿಟ್ಟಿರುವುದಾಗಿ ಹೇಳಲಾಗುತ್ತಿದೆ.ಅಲ್ಪಸಂಖ್ಯಾತ ಮತದಾರರೇ ಹೆಚ್ಚು ಇರುವ ನೆಟ್ಟಣಿಗೆಮುಡ್ನೂರು ಜಿ.ಪಂ.ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಬೇಕು ಎನ್ನುವುದು ಅದರಲ್ಲಿ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ.ಮಾತುಕತೆ ಸಂದರ್ಭ ಶಿವರಾಮ ಆಳ್ವ ಸೇರಿದಂತೆ ಪಕ್ಷದ ಕೆಲವು ಪ್ರಮುಖರು ಉಪಸ್ಥಿತರಿದ್ದರು.ಈ ಮಾತುಕತೆಗಳು ನಡೆದ ಬಳಿಕದ ಬೆಳವಣಿಗೆಯಲ್ಲಿ ಇದೀಗ ನಗರ ಕಾಂಗ್ರೆಸ್ ಘಟಕವನ್ನು ಬರ್ಖಾಸ್ತುಗೊಳಿಸುವ ತೀರ್ಮಾನಕೈಗೊಂಡಿರುವುದಕ್ಕೆ ಮಹಮ್ಮದ್ ಆಲಿಯವರ ಪರ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ನಿಟ್ಟಿನಲ್ಲಿ ಮುಂದಿನ ನಗರ ಸಭೆ ಚುನಾವಣೆ ಮುಗಿಯುವ ತನಕ ನಗರ ಕಾಂಗ್ರೆಸ್ ಘಟಕವನ್ನು ಬರ್ಖಾಸ್ತುಗೊಳಿಸದೆ ಯಥಾಸ್ಥಿತಿಯಲ್ಲಿ ಮಹಮ್ಮದ್ ಆಲಿಯವರ ನೇತೃತ್ವದಲ್ಲಿ ಮುಂದುವರಿಸಲು ತೀರ್ಮಾನವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಶಾಸಕರ ಸೂಚನೆಯಂತೆ ಸಭೆ ಮುಂದೂಡಿಕೆ
ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಬಿಡುವಿಲ್ಲದ ಕಾರಣ ಅವರ ಸೂಚನೆಯಂತೆ ಜು.22ರ ಕಾಂಗ್ರೆಸ್‌ನ ನಗರ ವಲಯಗಳ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ ಹೊರತು ಬೇರೆ ಯಾವುದೇ ಭಿನ್ನಾಭಿಪ್ರಾಯದಿಂದ ಅಲ್ಲ.ನಗರ ಕಾಂಗ್ರೆಸ್ ರದ್ದುಗೊಳಿಸುವ ತೀರ್ಮಾನಕ್ಕೆ ಕಾರ್ಯಕರ್ತರು,ಮುಖಂಡರುಗಳಿಂದ ನಮಗೆ ಯಾವುದೇ ಆಕ್ಷೇಪಗಳು ಬಂದಿಲ್ಲ.ಮಹಮ್ಮದ್ ಆಲಿಯವರು ಪಕ್ಷದ ಹಿರಿಯ ನಾಯಕರು, ಅವರಿಗೆ ಖಂಡಿತವಾಗಿಯೂ ಸೂಕ್ತ ಸ್ಥಾನ-ಮಾನ ಸಿಗಲಿದೆ
-ಕೃಷ್ಣಪ್ರಸಾದ್ ಆಳ್ವ ಅಧ್ಯಕ್ಷರು,ಪುತ್ತೂರು ಬ್ಲಾಕ್ ಕಾಂಗ್ರೆಸ್

ಈಗೇಕೆ ದಿಢೀರ್ ನಿರ್ಧಾರ
ವಿನಯ ಕುಮಾರ್ ಸೊರಕೆ ಅವರು ಶಾಸಕರಾಗಿದ್ದ ಅವಽಯಿಂದಲ್ಲೇ ಪುತ್ತೂರು ನಗರ ಕಾಂಗ್ರೆಸ್ ಘಟಕ ಕಾರ್ಯನಿರ್ವಹಿಸುತ್ತಿದೆ.ಪಕ್ಷದ ಸಂವಿಧಾನದಲ್ಲಿ ಇಲ್ಲ ಎಂದು ಇದೀಗ ದಿಢೀರ್ ಆಗಿ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸುವ ತೀರ್ಮಾನದ ಉದ್ದೇಶವೇನು? ಕೆಪಿಸಿಸಿ ಸಂಯೋಜಕ ವಲಯ ಕಾಂಗ್ರೆಸ್ ಎನ್ನುವ ಹುದ್ದೆಯೂ ಪಕ್ಷದ ಸಂವಿಧಾನದಲ್ಲಿ ಇಲ್ಲ.ಬೂತ್,ಬ್ಲಾಕ್, ಡಿಸಿಸಿ, ಕೆಪಿಸಿಸಿ ಮತ್ತು ಎಐಸಿಸಿ ಮಾತ್ರ ಕಾಂಗ್ರೆಸ್ ಸಂವಿಧಾನದಲ್ಲಿ ಇರುವ ಹುದ್ದೆಗಳು. ಇದೀಗ ಏಕಾಏಕಿ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಲು ಹೊರಟಿರುವುದಕ್ಕೆ ಪಕ್ಷದ ಕೆಲವು ಪ್ರಮುಖರು ಮತ್ತು ಹಲವು ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾಗಿದೆ.ನಾನು ನಗರ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ನಗರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಉತ್ತಮವಾಗಿ ನಡೆಯುತ್ತಿದೆ.ಆದರೆ ಗ್ರಾಮಾಂತರ ಮಟ್ಟದಲ್ಲಿ ಪಕ್ಷ ಸಂಘಟನೆ ಏನೂ ಇಲ್ಲ
ಹೆಚ್.ಮಹಮ್ಮದ್ ಆಲಿ, ಅಧ್ಯಕ್ಷರು,ಪುತ್ತೂರು ನಗರ ಕಾಂಗ್ರೆಸ್

LEAVE A REPLY

Please enter your comment!
Please enter your name here