ದುರಸ್ತಿಗೆ ಎರಡು ದಿನಗಳ ಗಡುವು, ಇಲ್ಲದಿದ್ದಲ್ಲಿ ಜು.26ರಂದು ಪ್ರತಿಭಟನೆ
ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸುತ್ತಿರುವುದು
ಪುತ್ತೂರು: ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವ ಪುತ್ತೂರು-ಉಪ್ಪಿನಂಗಡಿ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ ಬನ್ನೂರು, ಚಿಕ್ಕಮುಡ್ನೂರು ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಎರಡು ದಿನಗಳ ಗಡುವು ನೀಡಿದ್ದಾರೆ. ಎರಡು ದಿನಗಳಲ್ಲಿ ದುರಸ್ತಿ ಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪುತ್ತೂರು ನಗರದ ನಂತರ ತಾಲೂಕಿನ ಅತೀ ದೊಡ್ಡ ಪೇಟೆಯಾದ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಿ ರಾಜ್ಯ ಹೆದ್ದಾರಿಗೆ ಪರಿವರ್ತಿಸಲಾಗಿದೆ. ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳ ಅಡಿಪಾಯವನ್ನು ಕಳೆದ ಅವಧಿಯ ಬಿಜೆಪಿ ಸರಕಾರ ಮಾಡಿದೆ.
ಹೊಸ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈ ರಸ್ತೆಗೆ ಪುತ್ತೂರು ನಗರದಿಂದ ಸೇಡಿಯಾಪು ವರೆಗೆ ಯಾವುದೇ ನಿರ್ವಹಣೆ ಮಾಡದೆ ಜನರು ನಿತ್ಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ರಸ್ತೆಯಲ್ಲಿರುವ ಹೊಂಡಗಳಿಂದಾಗಿ ಅಪಘಾತಗಳಾಗುವ ಆತಂಕ ಎದುರಾಗಿದೆ. ಅನೇಕ ವಾಹನಗಳು ಈ ಹೊಂಡಗಳಲ್ಲಿ ಹೂತು ಹೋಗಿ ವಾಹನ ಸಂಚಾರಕ್ಕೂ ಅಡಚನೆಯಾಗುತ್ತಿದೆ.
ಈ ರಸ್ತೆಯಲ್ಲಿ ಸಂಚರಿಸಲು ಭಯ ಭೀತರಾಗಿರುವ ಸಾರ್ವಜನಿಕರು ರಸ್ತೆ ಅವ್ಯವಸ್ಥೆಯ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ದೂರುಗಳನ್ನು ನೀಡುತ್ತಿದ್ದು ಹೋರಾಟ ನಡೆಸಲು ಒತ್ತಡ ಹೇರುತ್ತಿದ್ದಾರೆ. ಸಾರ್ವಜನಿಕರ ಈ ಸಮಸ್ಯೆಗಳಿಗೆ ಸ್ಪಂದಿಸಿ ಸಾರ್ವಜನಿಕರನ್ನು ಒಟ್ಟು ಸೇರಿಸಿಕೊಂಡು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಜು.26 ಪ್ರತಿಭಟನೆ:
ರಸ್ತೆ ದುರಸ್ತಿಗೆ ಎರಡು ದಿನಗಳ ಕಾಲವಕಾಶ ನೀಡಲಾಗುವುದು. ಆ ನಂತರವೂ ದುರಸ್ತಿ ಪಡಿಸದಿದ್ದಲ್ಲಿ ಜು.26ರಂದು ಪ್ರತಿಭಟನೆ ನಡೆಸಲಾಗುವುದು. ಮುಂದೆ ಇದರಿಂದಾಗುವ
ಎಲ್ಲಾ ಅನಾಹುತಗಳಿಗೆ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಬನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಹಾಯಕ ಆಯುಕ್ತರು ಪುತ್ತೂರು, ಆರಕ್ಷಕರ ಠಾಣೆ ಪುತ್ತೂರು, ತಹಶೀಲ್ದಾರರು ಪುತ್ತೂರು, ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆಯ ನಿರ್ಧಾರವನ್ನು ತಿಳಿಸಿದ್ದಾರೆ.
ಆರ್ಯಾಪು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾಗೇಶ್ ಟಿ.ಎಸ್., ಚಿಕ್ಕಮುಡ್ನೂರು ಬಿಜೆಪಿ ಶಕ್ತಿಕೇಂದ್ರದ ಕಾರ್ತಿಕ್ ಅಂದ್ರಟ್ಟ , ಬೂತ್ ಅಧ್ಯಕ್ಷರುಗಳಾದ ದಯಾನಂದ ಅನಂತಿಮಾರು, ಪ್ರಕಾಶ್ ಚಿಕ್ಕಮುಡ್ನೂರು, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, ಉಪಾಧ್ಯಕ್ಷ ಶೀನಪ್ಪ ಕುಲಾಲ್ ಸದಸ್ಯರಾದ ಜಯ ರಮೇಶ್, ರಾಘವೇಂದ್ರ ಅಂದ್ರಟ್ಟ, ತಿಮ್ಮಪ್ಪ ಮೂಡಾಯೂರು, ಮಾಜಿ ಸದಸ್ಯ ರತ್ನಾಕರ ಪ್ರಭು, ಬಿಜೆಪಿ ಕಾರ್ಯಕರ್ತರಾದ ನವೀನ್ ಕಂಜೂರು, ಹರೀಶ್, ಹಾಗೂ ಸಂತೋಷ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು