ನೆಲ್ಯಾಡಿ: ಕಳೆದ ಒಂದು ತಿಂಗಳಿನಿಂದ ಕೊಕ್ಕಡ, ಕೌಕ್ರಾಡಿ ಪರಿಸರದಲ್ಲಿ ಕೃಷಿ ಹಾನಿಗೊಳಿಸಿ ವ್ಯಕ್ತಿಯೋರ್ವರನ್ನು ಕೊಂದು ಹಾಕಿದ ಆನೆಗಳನ್ನು ಆನೆ ಮಾವುತರ ಸಹಾಯದಿಂದ ಪುಷ್ಪಗಿರಿ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಸಲಾಗಿತ್ತು. ಇದರ ಬೆನ್ನಲ್ಲೆ ಇಚ್ಲಂಪಾಡಿ, ಬಲ್ಯ ಗ್ರಾಮದಲ್ಲಿ ಆನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವ ಘಟನೆ ನಡೆದಿದೆ.

ಜು.20ರಂದು ರಾತ್ರಿ ಇಚ್ಲಂಪಾಡಿ ಗ್ರಾಮದಲ್ಲಿ ಕೃಷಿ ತೋಟಗಳಿಗೆ ಲಗ್ಗೆ ಇಟ್ಟಿದ ಕಾಡಾನೆ ಜು.22ರಂದು ರಾತ್ರಿ ಬಲ್ಯ ಸಮೀಪ, ಪಟ್ಟೆ ಸರಕಾರಿ ಶಾಲೆ ಬಳಿಯ ತೋಟಕ್ಕೆ ಲಗ್ಗೆ ಇಟ್ಟಿದೆ. ಬಲ್ಯ ಪಟ್ಟೆ ನಿವಾಸಿ ರಾಮಕೃಷ್ಣ ಎಡಪಡಿತ್ತಾಯ ಅವರ ತೋಟವೊಂದರ ಕಾಂಪೌಂಡ್ ಗೋಡೆ ಮುರಿದು, ಬಾಳೆ, ತೆಂಗು ಕೃಷಿ ನಾಶಗೊಳಿಸಿದೆ. ಈ ಭಾಗದಲ್ಲಿ ಇತರರ ಕೃಷಿ ತೋಟಕ್ಕೂ ಆನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಕೃಷಿ ತೋಟಕ್ಕೆ ಆನೆ ದಾಳಿ ತಪ್ಪಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.