ಫಸಲು ಉಳಿಸುವುದೇ ಚಿಂತೆ :ದೋಟಿ ಮೊರೆ ಹೋದ ಕೃಷಿಕರು
ವರದಿ: ಶರತ್ ಕುಮಾರ್ ಪಾರ
ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ದ.ಕ.ಜಿಲ್ಲೆಯಾದ್ಯಂತ ಅಡಿಕೆ ಮರಗಳಿಗೆ ಕೊಳೆ ರೋಗದ ಭೀತಿ ಆವರಿಸಿದ್ದು ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ.
ಈ ಬಾರಿ ಮುಂಗಾರು ಮೇ ಕೊನೆಯ ತಿಂಗಳಿನಲ್ಲೇ ಆರಂಭವಾಗಿದ್ದು ಬಳಿಕ ನಿರಂತರ ಮಳೆ ಸುರಿಯಲಾರಂಭಿಸಿದೆ. 2024ರಲ್ಲಿ ಜೂ.15ರ ನಂತರ ಮಳೆ ಆರಂಭವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಂದು ತಿಂಗಳು ಮೊದಲೇ ಮಳೆ ಆರಂಭಗೊಂಡಿದೆ. ಮುಂಗಾರಿನ ಜೊತೆಗೆ ವಾಯುಭಾರ ಕುಸಿತವೂ ಆಗಿದ್ದ ಕಾರಣ ಮಳೆ ಬೇಗನೇ ಆರಂಭವಾಗಿದೆ. ಬಳಿಕ ಶುರುವಾದ ಮಳೆ ಕಳೆದ ಎರಡು ತಿಂಗಳಿನಿಂದ ನಿರಂತರ ಬರುತ್ತಿದೆ. ಈ ಮಧ್ಯೆ ಒಂದೆರಡು ದಿನ ಮಾತ್ರ ಬಿಟ್ಟಿತ್ತಲ್ಲದೆ ಮತ್ತೆ ಬಿಡದೆ ಸುರಿಯುತ್ತಿದೆ.
ಬೋರ್ಡೋ ದ್ರಾವಣ ಸಿಂಪಡಣೆಗೂ ಅಡ್ಡಿ:
ಎರಡು ತಿಂಗಳಿನಿಂದ ಪ್ರತೀದಿನ ಮಳೆ ಸುರಿಯುತ್ತಿರುವ ಪರಿಣಾಮ ಅಡಿಕೆ ತೋಟಗಳಿಗೆ ಮದ್ದು ಸಿಂಪಡೆಣೆ ಕಾರ್ಯಕ್ಕೂ ಅಡಚಣೆಯಾಗಿದೆ. ಸಾಮಾನ್ಯವಾಗಿ ಮೇ. ಜೂನ್ ತಿಂಗಳಿನಲ್ಲಿ ಪ್ರಥಮ ಸುತ್ತಿನ ಮದ್ದು ಸಿಂಪಡಣೆ ನಡೆದು ಬಳಿಕ 45 ದಿನಗಳ ಬಳಿಕ ಮತ್ತೆ ಎರಡನೇ ಬಾರಿ ಮದ್ದು ಸಿಂಪಡಣೆ ಮಾಡುತ್ತಾರೆ ಕೃಷಿಕರು. ಆದರೆ ಈ ಬಾರಿ ಶೇ.80 ಅಡಿಕೆ ತೋಟಗಳಿಗೆ ಮೊದಲ ಬಾರಿಯ ಮದ್ದು ಸಿಂಪಡಣೆಯೇ ನಡೆದಿಲ್ಲ. ಪ್ರತೀದಿನ ಮಳೆ ಸುರಿಯುತ್ತಿರುವ ಪರಿಣಾಮ ದೊಡ್ಡ ಮಟ್ಟದ ಅಡಿಕೆ ಕೃಷಿಕರು ಮದ್ದು ಸಿಂಪಡಣೆ ಸಾಧ್ಯವಾಗದೆ ಅಸಹಾಯಕರಾಗಿ ಕೈಚೆಲ್ಲಿ ಕೂತಿದ್ದಾರೆ. ಕೆಲವು ರೈತರು ದೋಟಿ ಸಹಾಯದಿಂದ ತಾವೇ ಮದ್ದು ಸಿಂಪಡಣೆ ಮಾಡುತ್ತಿದ್ದಾರೆ.
ಕೊಳೆರೋಗದ ಭೀತಿ:
ಮಳೆಯಿಂದ ಬೋರ್ಡೋ ದ್ರಾವಣ ಸಿಂಪಡಣೆ ಸಾಧ್ಯವಾಗದೆ ಅಡಿಕೆ ತೋಟದಲ್ಲಿ ಕೊಳೆ ರೋಗ ಭೀತಿ ಆವರಿಸಿದೆ. ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಭಾಗದಲ್ಲಿ ನಿರಂತರ ಮಳೆ ಅಡ್ಡಿ ಮಾಡುತ್ತಿದೆ. ಅಲ್ಲದೆ ಪ್ರತೀದಿನ ಮಳೆ ಸುರಿಯುತ್ತಿದ್ದು ಕೊಳೆರೋಗ ಸಮಸ್ಯೆ ಹೆಚ್ಚಿನ ಕಡೆ ಕಾಣಿಸಿದೆ. ಕೊಳೆರೋಗದಿಂದ ದೊಡ್ಡದಾದ ಅಡಿಕೆಗಳು(ನಳ್ಳಿ) ಕೆಳಗೆ ಬೀಳುತ್ತಿವೆ. ಇದರಿಂದ ಕಂಗಾಲಾದ ಕೃಷಿಕರು ಉಳಿದ ಅಡಿಕೆಯನ್ನು ರಕ್ಷಿಸುವುದು ಹೇಗೆ ಎಂಬ ಚಿಂತೆಯಲ್ಲಿ ತೊಡಗಿದ್ದಾರೆ.
ಅಡಿಕೆ ಫಸಲು ಉಳಿಸುವುದೇ ಸವಾಲಾಗಿದೆ:
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅಡಿಕೆ ಫಸಲು ಹೆಚ್ಚು ಇದೆ. ಕಳೆದ ಬಾರಿ ಶೇ.50ರಷ್ಟು ಅಡಿಕೆ ಫಸಲು ಕೊರತೆಯಾಗಿತ್ತು. ಕೆಲವು ಅಡಿಕೆ ತೋಟಗಳಲ್ಲಿ ಅಡಿಕೆ ಕೊಯ್ಲು ನಡೆಯಲೇ ಇಲ್ಲ. ಅಷ್ಟರಮಟ್ಟಿಗೆ ಅಡಿಕೆ ಕೊರತೆ ಕಾಡಿದೆ. ಈ ಬಾರಿ ಅಡಿಕೆ ಫಸಲು ಕಳೆದ ಬಾರಿಗಿಂತ ಜಾಸ್ತಿ ಇದೆ. ಆದರೆ ನಿರಂತರ ಮಳೆಯಿಂದ ಅಡಿಕೆ ಫಸಲನ್ನು ಉಳಿಸುವುದೇ ಕೃಷಿಕೆರಿಗೆ ಸವಾಲಾಗಿದೆ.ಅಡಿಕೆ ಕೃಷಿಕರು ಕಂಗಾಲು,
ಫಸಲು ಉಳಿಸುವುದೇ ಚಿಂತೆ :ದೋಟಿ ಮೊರೆ ಹೋದ ಕೃಷಿಕರು
ದೋಟಿಗೆ ಸರಕಾರದ ಸಹಾಯಧನವೂ ಬಂದ್‌ಮಳೆ ಪರಿಣಾಮ ಅಡಿಕೆ ಮರದಲ್ಲಿ ಹಾವಸೆ ಹಿಡಿದ ಕಾರಣ ಮರ ಹತ್ತಿ ಮದ್ದು ಸಿಂಪಡಣೆ ಕಷ್ಟಸಾಧ್ಯವಾದ ಕಾರಣ ಹೆಚ್ಚಿನ ಕೃಷಿಕರು ಈ ಬಾರಿ ದೋಟಿ ಮೊರೆ ಹೋಗಿದ್ದಾರೆ. ದೊಡ್ಡ ಅಡಿಕೆ ಕೃಷಿಕರು ರೂ.70, 80 ಸಾವಿರ ಕೊಟ್ಟು ದೋಟಿ ಖರೀದಿ ಮಾಡಿದ್ದಾರೆ. ಸಣ್ಣ ರೈತರಿಗೆ ಇಷ್ಟು ಹಣ ನೀಡುವುದು ಕಷ್ಟವಾಗಿದೆ. ದೋಟಿ ಖರೀದಿಗೆ ಕಳೆದ ಎರಡು ವರ್ಷದಿಂದ ಸರಕಾರದಿಂದ ಸಹಾಯಧನವೂ ಸಿಗುತ್ತಿಲ್ಲ. ಇದರಿಂದ ರೈತರಿಗೆ ದೋಟಿ ಖರೀದಿಗೂ ಸಂಕಷ್ಟವಾಗಿದೆ.
ಮಳೆಯಿಂದ ಅಡಿಕೆ ಮರಕ್ಕೆ ಹಾವಸೆ ಬಂದ ಕಾರಣ ದೋಟಿ ಮೊರೆ ಹೋಗುತ್ತಿದ್ದಾರೆ
ಕೊಳೆರೋಗ ಹೆಚ್ಚಾಗಿದೆ. ಕಳೆದ 40 ದಿನದಿಂದ ಬಿಸಿಲೇ ಬರಲಿಲ್ಲ. ಅಡಿಕೆ ಮರ ಹತ್ತಿ ಮದ್ದು ಬಿಡಲು ಮರಕ್ಕೆ ಹಾವಸೆ ಹಿಡಿದು ಸಾಧ್ಯವಾಗುವುದಿಲ್ಲ. ಈ ಬಾರಿ ಕೃಷಿಕರು ದೋಟಿಯ ಮೂಲಕ ಮದ್ದು ಸಿಂಪಡಣೆ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಅಡಿಕೆ ಫಸಲು ಉಳಿಸಬೇಕೆಂದು ದೋಟಿಗೆ ಮೊರೆ ಹೋಗಿದ್ದಾರೆ. ನಮ್ಮಲ್ಲಿ ಈ ಬಾರಿ ಸುಮಾರು 60 ದೋಟಿ ಮಾರಾಟವಾಗಿದೆ. ಆದರೆ ಸರಕಾರ ದೋಟಿಗೆ ನೀಡುತ್ತಿರುವ ಸಹಾಯಧನ ಕಳೆದ 2 ವರ್ಷದಿಂದ ಬರುತ್ತಿಲ್ಲ.
-ವಿಶ್ವಪ್ರಸಾದ್ ಸೇಡಿಯಾಪು
ಪ್ರಗತಿಪರ ಕೃಷಿಕರು ಹಾಗೂ ಮಾಲಕರು ಸೇಡಿಯಾಪು ಆಗ್ರೋ ಸೇಲ್ಸ್