





ಉಪ್ಪಿನಂಗಡಿ: ಆಟಿ (ಆಷಾಢ) ಅಮಾವಾಸ್ಯೆಯ ದಿನವಾದ ಗುರುವಾರದಂದು ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ಅಸಂಖ್ಯಾತ ಭಕ್ತಾದಿಗಳಿಂದ ತೀರ್ಥ ಸ್ನಾನ ಹಾಗೂ ಗತಿಸಿದ ಹಿರಿಯರಿಗೆ ಸದ್ಗತಿ ಬಯಸಿ ತಿಲಹೋಮಾದಿ ಪಿಂಡ ಪ್ರಧಾನ ಕಾರ್ಯಕ್ರಮಗಳು ನಡೆದವು.



ದಕ್ಷಿಣಕಾಶಿ ಎಂದೇ ಪ್ರಸಿದ್ದವಾಗಿರುವ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ಕ್ಷೇತ್ರದಲ್ಲಿರುವ ಇಲ್ಲಿನ ದೇವಾಲಯಕ್ಕೆ ಗುರುವಾರ ಬೆಳಗ್ಗೆಯಿಂದಲೇ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತಾದಿಗಳು ಪುರೋಹಿತರ ಮುಖೇನ ಗತಿಸಿದ ಹಿರಿಯರಿಗೆ ತಿಲಹೋಮ, ಪಿಂಡ ಪ್ರಧಾನವನ್ನು ನೆರೆವೇರಿಸಿದರೆ, ಇನ್ನು ಹಲವರು ನವ ಧಾನ್ಯಗಳನ್ನು ಸಂಗಮ ತಟದಲ್ಲಿ ಗಂಗಾ ಮಾತೆಗೆ ಸಮರ್ಪಿಸಿ ಗತಿಸಿದ ಹಿರಿಯರಿಗೆ ಸದ್ಗತಿ ಬಯಸಿದರು ಹಾಗೂ ಆಟಿ ಅಮಾವಾಸ್ಯೆಯ ತೀರ್ಥ ಸ್ನಾನವೂ ನಡೆಯಿತು.






ಶ್ರೀ ದೇವಾಲಯದಲ್ಲಿ ಬೆಳಗ್ಗೆ ಬಂದ ಭಕ್ತರಿಗೆ ಆಟಿ ಅಮಾವಾಸ್ಯೆಯ ದಿನದಂದು ಸೇವಿಸುವ ಹಾಲೆ ಮರದ ಕಷಾಯವನ್ನು ವಿತರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಸದಸ್ಯರಾದ ಕೃಷ್ಣರಾವ್ ಆರ್ತಿಲ, ವೆಂಕಪ್ಪ ಪೂಜಾರಿ, ಗೋಪಾಲಕೃಷ್ಣ ರೈ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್, ದಿವಾಕರ, ಪದ್ಮನಾಭ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಸಕ್ರೀಯವಾಗಿದ್ದುಕೊಂಡು ವಿವಿಧ ಕಾರ್ಯಗಳನ್ನು ನಿರ್ವಹಿಸಿದರು. ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡದವರು ದೋಣಿ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ಸನ್ನದ್ಧರಾಗಿದ್ದುಕೊಂಡು ನದಿಗೆ ಬರುವ ಭಕ್ತರ ಸುರಕ್ಷತೆಯನ್ನು ನೋಡಿಕೊಂಡರು. ಈ ಸಂದರ್ಭ ಶ್ರೀ ದೇವಾಲಯದ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ರಾಮಚಂದ್ರ ಮಣಿಯಾಣಿ ಮತ್ತಿತರರು ಇದ್ದರು.










