ನೆಲ್ಯಾಡಿ: ಕಾಡಾನೆ ಹಾಗೂ ಮಾನವನ ನಡುವಿನ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಯ ಗಡಿ ಭಾಗದಲ್ಲಿ ಆನೆ ಶಿಬಿರ ಸ್ಥಾಪನೆಗೆ ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸುಬ್ರಹ್ಮಣ್ಯ ಅರಣ್ಯ ವಲಯದ ಕೊಂಬಾರು ರಕ್ಷಿತಾರಣ್ಯ ಪ್ರದೇಶದಲ್ಲಿ ಕೆಂಪುಹೊಳೆ ಬದಿಯ ಪ್ರದೇಶ ಆನೆ ಶಿಬಿರಕ್ಕೆ ಸೂಕ್ತ ಎಂದು ಅರಣ್ಯ ಇಲಾಖೆಯ ಅರಣ್ಯ ಪಡೆ ಮುಖ್ಯಸ್ಥರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಕಾಡಾನೆಗಳ ದಾಳಿಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರ ಜೊತೆಗೆ ಪ್ರವಾಸೋದ್ಯಮವನ್ನೂ ಪ್ರೋತ್ಸಾಹಿಸುವುದು ಈ ಪ್ರಸ್ತಾವನೆಯ ಹಿಂದಿನ ಉದ್ದೇಶವಾಗಿದೆ. ಎರಡು ವರ್ಷಗಳಲ್ಲಿ ಕಾಡಾನೆ ದಾಳಿಯಿಂದ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಾಡಾನೆ ದಾಳಿ ಪ್ರಕರಣ ನಡೆಯುತ್ತಿದೆ. ಗುಂಡ್ಯ ಪ್ರದೇಶವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ, ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರಗಳಿಗೆ ಸಮೀಪವಿದೆ. ದುಬಾರೆ ಆನೆ ಕ್ಯಾಂಪ್ ಮಾದರಿಯಲ್ಲೇ ಅಭಿವೃದ್ಧಿ ಪಡಿಸಬಹುದು. ಕಡಬ ತಾಲೂಕಿನ ಶಿರಿಬಾಗಿಲು ಗ್ರಾಮದ ಗುಂಡ್ಯದಲ್ಲಿ ಕಾಡಾನೆ ಶಿಬಿರ ಸ್ಥಾಪಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಆನೆ ಶಿಬಿರ ಸೂಕ್ತ;
ಬಂಡಿಪುರ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಆನೆ ಶಿಬಿರಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಬ,ಸುಬ್ರಹ್ಮಣ್ಯ ಭಾಗಗಳಲ್ಲಿ ಕಾಡಾನೆಗಳು ಸಂಚರಿಸುತ್ತಿವೆ. ಕುದುರೆಮುಖ ವನ್ಯಜೀವಿ ವಲಯ, ಸಕಲೇಶಪುರ, ಬಿಸಿಲೆ ಘಾಟಿ, ಪುಷ್ಪಗಿರಿ, ತಲಕಾವೇರಿ ಅರಣ್ಯ ಭಾಗಗಳಾಗಿದ್ದು ಇವುಗಳನ್ನು ಸಂಪರ್ಕಿಸುವ ಭಾಗ ದಕ್ಷಿಣ ಕನ್ನಡ ಜಿಲ್ಲೆ. ಮೂಡಿಗೆರೆ, ಬೆಳ್ತಂಗಡಿ, ಕಡಬ, ಸುಳ್ಯ ಭಾಗದಲ್ಲಿ ಆನೆಗಳ ಚಟುವಟಿಕೆ ಹೆಚ್ಚು. ಶಿರಾಡಿ ಘಾಟಿ ಹೆದ್ದಾರಿಯ ಅಭಿವೃದ್ಧಿ ಹೆಚ್ಚಾದಂತೆ ಆನೆಗಳ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಿದೆ. ಹೆದ್ದಾರಿ ಅಗಲಗೊಳಿಸುವಿಕೆ ಹಾಗೂ ಇಕ್ಕೆಲಗಳಲ್ಲಿ ಎದ್ದುನಿಂತ ವಾಲ್ನಿಂದಾಗಿ ಆನೆಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಈ ಕಾರಣದಿಂದ ದಕ್ಷಿಣ ಕನ್ನಡಕ್ಕೆ ಆನೆ ಶಿಬಿರ ಅಗತ್ಯ ಎಂದು ಅರಣ್ಯಾಽಕಾರಿಗಳು ಹೇಳುತ್ತಿದ್ದಾರೆ.
ಪ್ರವಾಸೋದ್ಯಮಕ್ಕೂ ನೆರವು:
ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು, ಕೊಡಗಿನ ದುಬಾರೆಯಲ್ಲಿ ಆನೆ ಶಿಬಿರಗಳಿದ್ದು ಹೊಸದಾಗಿ ಕೊಡಗಿನ ಮತ್ತಿಗೋಡು, ಹಾರಂಗಿಯಲ್ಲಿ ಆರಂಭಿಸಲಾಗಿದೆ. ಉತ್ತರ ಕನ್ನಡ ದಾಂಡೇಲಿಯ ಘನಸೋಲಿಯಲ್ಲಿ, ಬಂಡೀಪುರದ ರಾಂಪುರದಲ್ಲಿ ಆನೆ ಶಿಬಿರಗಳಿವೆ. ಇವು ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ. ಆನೆಗಳ ದಾಳಿಯೂ ಕಡಿಮೆಯಾಗುತ್ತದೆ ಎನ್ನುವ ಲೆಕ್ಕಚಾರವೂ ಈ ಉದ್ದೇಶದ ಹಿಂದಿದೆ.
ಶಿಬಿರಕ್ಕೆ 40 ಎಕ್ರೆ ಜಾಗ ಬೇಕು
ಆನೆ ಶಿಬಿರಕ್ಕೆ ಸುಮಾರು 40 ಎಕ್ರೆ ಜಾಗ ಬೇಕು. ಪ್ರತೀ ಆನೆಗೆ ತಲಾ ಒಬ್ಬ ಮಾವುತ, ಒಬ್ಬ ಕಾವಡಿ ಬೇಕು. ಇವರ ಮುಖ್ಯಸ್ಥನಾಗಿ ಜಮೇದಾರ ಇರುತ್ತಾರೆ. ಉಪ ವಲಯ ಅರಣ್ಯಾಧಿಕಾರಿಗೆ ಶಿಬಿರದ ಮೇಲುಸ್ತುವಾರಿ, ಶಿಬಿರದಲ್ಲಿ ಆನೆಯನ್ನು ಪಳಗಿಸುವ ಜಾಗ, ಅವುಗಳ ಆಹಾರ-ವಿಹಾರಕ್ಕೆ ಅರಣ್ಯ ಪ್ರದೇಶ, ಸ್ನಾನ, ಕುಡಿಯುವ ನೀರಿಗೆ ಪೂರಕವಾಗಿ ನದಿ ಇರಬೇಕು. ಕಚೇರಿ, ತರಬೇತಿ ಪಡೆದ ಸಿಬ್ಬಂದಿ, ವಾಹನ ಇತ್ಯಾದಿ ಅಗತ್ಯವಿದೆ.
ಮಂಗಳೂರು ವಿಭಾಗದಲ್ಲಿ ಇರುವಷ್ಟು ಆನೆಗಳ ಸಂಚಾರ, ಆನೆ ದಾಳಿಗಳ ಪ್ರಕರಣ ಉಳಿದ ಯಾವ ಭಾಗದಲ್ಲೂ ಕಂಡುಬಂದಿಲ್ಲ. ಹಾಗಾಗಿ ನಮ್ಮ ವಿಭಾಗ ವ್ಯಾಪ್ತಿಯ ಗುಂಡ್ಯದಲ್ಲಿ ನದಿಯೂ ಇರುವ ಕಾರಣ ಆನೆ ಶಿಬಿರ ಸ್ಥಾಪನೆಗೆ ಉಪಯುಕ್ತ ಜಾಗವಾಗಿದೆ. ಹಾಗಾಗಿ ಈ ಸ್ಥಳದಲ್ಲೇ ಆನೆ ಕ್ಯಾಂಪ್ ಸ್ಥಾಪನೆ ಕೋರಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
| ಆಂಟನಿ ಮರಿಯಪ್ಪ ಡಿಸಿಎ-,
ಮಂಗಳೂರು ವಿಭಾಗ