ಕಾರ್ಗಿಲ್ ವಿಜಯೋತ್ಸವಕ್ಕೆ ಸಿದ್ಧಗೊಂಡ ಅಮರ್ ಜವಾನ್ ಜ್ಯೋತಿ

0

ಅಂಬಿಕಾ ಸಂಸ್ಥೆಗಳು ನಿರ್ಮಿಸಿದ ಈ ಸ್ಮಾರಕ ದೇಶಕ್ಕೇ ಹೆಮ್ಮೆ


ಪುತ್ತೂರು:
ಅಮರ್ ಜವಾನ್ ಜ್ಯೋತಿ ಸ್ಮಾರಕ – ಇದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಸೈನಿಕರಿಗಾಗಿ ದೆಹಲಿಯ ಇಂಡಿಯಾ ಗೇಟ್ ನಲ್ಲಿ ರೂಪಿಸಲಾಗಿರುವ ವೀರಸ್ಮಾರಕ. 1971ರ ಭಾರತ ಪಾಕಿಸ್ಥಾನ ಯುದ್ಧದ ತರುವಾಯ ಹುತಾತ್ಮ ಸೈನಿಕರ ಗೌರವಾರ್ಥವಾಗಿ ಜನವರಿ 26, 1972ರಲ್ಲಿ ಈ ಸ್ಮಾರಕವನ್ನು ರಚಿಸಲಾಗಿದೆ. ಇದು ಕೇಂದ್ರ ಸರ್ಕಾರ ರೂಪಿಸಿರುವ ಸರ್ಕಾರಿ ಯುದ್ಧ ಸ್ಮಾರಕ. ದೇಶಪ್ರೇಮಿಗಳಿಗಂತೂ ಮೈರೋಮಾಂಚನಗೊಳ್ಳಬಹುದಾದ ಪವಿತ್ರ ತಾಣ.
ಇಂತಹದೇ ಒಂದು ’ಅಮರ್ ಜವಾನ್ ಜ್ಯೋತಿ ಸ್ಮಾರಕ’ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತಲೆಯಿತ್ತಿ ನಿಂತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಅನುಕ್ಷಣವೂ ನೆನಪಿಸುತ್ತಿದೆ ಎಂಬ ವಿಷಯ ಅದೆಷ್ಟು ಮಂದಿಗೆ ತಿಳಿದಿದೆ ಎಂಬುದು ಗೊತ್ತಿಲ್ಲ!


ನಿಜ, ಪುತ್ತೂರಿನ ಹೃದಯ ಭಾಗದಲ್ಲಿರುವ ಕಿಲ್ಲೆ ಮೈದಾನದ ಬಳಿಯ ಸುಮಾರು ನಲವತ್ತು ಸೆಂಟ್ಸ್ ಸರ್ಕಾರಿ ಜಾಗದಲ್ಲಿ ಈ ಅಮರ್ ಜವಾನ್ ಜ್ಯೋತಿ ಯೋಧ ಸ್ಮಾರಕ ರೂಪುಗೊಂಡಿದೆ. ಪ್ರವಾಸಾರ್ಥವಾಗಿ ಪುತ್ತೂರಿಗೆ ಬರುವ ಯಾರೇ ಆಗಲಿ ಈ ಸ್ಮಾರಕವನ್ನು ಕಂಡು ಕೈಮುಗಿಯದಿದ್ದರೆ ಅಷ್ಟರಮಟ್ಟಿಗೆ ಅವರ ಪ್ರವಾಸ ಅಪೂರ್ಣವೇ! ಇಡಿಯ ದೇಶದಲ್ಲಿ ಖಾಸಗಿಯಾಗಿ ನಿರ್ಮಾಣಗೊಂಡಿರುವ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕ ಇದು ಎಂಬುದು ಇದರ ಹೆಚ್ಚುಗಾರಿಕೆ. ಈ ಸ್ಮಾರಕದ ಬಳಿ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆ ನಡೆಯಲಿದೆ.


ಅಂದಹಾಗೆ, ಈ ಸ್ಮಾರಕವನ್ನು ನಿರ್ಮಾಣ ಮಾಡಿದ್ದಲ್ಲದೆ ಅದರ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವುದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು. ದೇಶದ ಬಗೆಗೆ, ಸೈನಿಕರ ಬಗೆಗೆ ಅಪಾರ ಕಾಳಜಿ, ಪ್ರೀತಿ ಹೊಂದಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿರುವ ಸುಬ್ರಹ್ಮಣ್ಯ ನಟ್ಟೋಜರಿಗೆ ಈ ಸ್ಮಾರಕವನ್ನು ನಿರ್ಮಾಣಮಾಡಬೇಕೆಂಬ ಕನಸು ಮೂಡಿದ್ದೇ ಒಂದು ರೋಚಕ ವಿಚಾರ.


ಭಾರತೀಯ ಸೈನಿಕರ ಬಗೆಗೆ ಬಾಲ್ಯದಿಂದಲೇ ಸುಬ್ರಹ್ಮಣ್ಯ ನಟ್ಟೋಜರಿಗೆ ವಿಶೇಷ ಅಭಿಮಾನ. ಹಾಗಾಗಿಯೇ ಪ್ರತಿವರ್ಷವೂ ಕಾಶ್ಮೀರ, ಲಡಾಕ್, ಕಾರ್ಗಿಲ್ ಪ್ರದೇಶಗಳಿಗೆ ನಟ್ಟೋಜರು ಭೇಟಿ ಕೊಡುವುದಿದೆ. 2016ರಲ್ಲಿ ಕಾರ್ಗಿಲ್ ಭೇಟಿ ಮಾಡಿದಾಗ -10 ಡಿಗ್ರಿಗಿಂತಲೂ ಅಲ್ಲ ಕೊರೆಯುವ ಚಳಿಯಲ್ಲಿ ಭಾರತೀಯ ಸೈನಿಕರು ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವುದಕ್ಕೂ ತಯಾರಾಗಿರುವ ಅವರ ಮಾತುಗಳನ್ನಾಲಿಸಿ ಇಂತಹ ಸೈನಿಕರಿಗೆ ತಾನೇನಾದರೂ ಮಾಡಬೇಕು ಎಂದು ನಿಶ್ಚಯಿಸಿದರು. ಪರಿಣಾಮವಾಗಿಯೇ ಸೈನಿಕರ ತ್ಯಾಗವನ್ನು ಪ್ರತಿ ಕ್ಷಣವೂ, ಪ್ರತಿದಿನವೂ ಸ್ಮರಿಸುವಂತಹ ಅಮರ್ ಜವಾನ್ ಜ್ಯೋತಿ ಸ್ಮಾರಕವನ್ನು ರೂಪಿಸಿದರು.


ಈ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ 19 ಕೆ.ಜಿ.ಯ ಗ್ಯಾಸ್ ಸಿಲಿಂಡರ್ ಅನ್ನು ಜೋಡಣೆ ಮಾಡಲಾಗಿದೆ. ಅದರಿಂದ ಪೈಪ್ ಮುಖಾಂತರ ಬರುವ ಗ್ಯಾಸ್ ಜ್ಯೋತಿಯಾಗಿ ಉರಿಯುತ್ತದೆ. ಜ್ಯೋತಿ ಉರಿಯುವ ಪಕ್ಕದಲ್ಲೇ ಸೈನಿಕರ ಬಂದೂಕು ಹಾಗೂ ಶಿರಸ್ತ್ರಾಣದ ಪ್ರತಿರೂಪವನ್ನು ನಿರ್ಮಿಸಲಾಗಿದೆ. ಉರಿಯುವ ಜ್ಯೋತಿ ಗಾಳಿಗೆ ಆರದಂತೆ ಸುತ್ತಲೂ ಗ್ಲಾಸ್‌ನ ಆವರಣವನ್ನು ರಚಿಸಲಾಗಿದೆ. ಅಲ್ಲದೆ ಉರಿಯುವ ಜ್ಯೋತಿಯ ಸುತ್ತ ಪುಟ್ಟದೊಂದು ಕಟ್ಟಡ ತಲೆ ಎತ್ತಿನಿಂತಿದೆ. ಕಟ್ಟಡದ ಬದಿಗೆ ಸ್ಟೀಲ್ ಸರಳುಗಳನ್ನು ಹಾಕಿ ಹೊರಗಿಂದ ಜ್ಯೋತಿಯನ್ನು ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆಯೇ ಸರಳಿನ ಬಾಗಿಲನ್ನು ನಿರ್ಮಿಸಲಾಗಿದ್ದು ಯೋಧರಿಗೆ ಗೌರವಾರ್ಪಣೆ ಸಲ್ಲಿಸುವಂತಹ ಸಂದರ್ಭ ಬಂದಾಗ ಜ್ಯೋತಿಯ ಬಳಿಗೆ ತೆರಳುವಂತಹ ಅವಕಾಶವೂ ಇದೆ.


ಈ ಅಮರ್ ಜವಾನ್ ಜ್ಯೋತಿಯನ್ನು ನಿರ್ಮಿಸಿದ್ದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಾದರೂ ನಿರ್ಮಿಸಿದ ಬಳಿಕ ಅದನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ. ಹಾಗಾಗಿ ಅದೀಗ ಸಾರ್ವಜನಿಕ ಸಂಪತ್ತು. ಆದಾಗ್ಯೂ ನಿರ್ವಹಣೆಯ ನೆಲೆಯಿಂದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಉದ್ಯೋಗಿ ರವಿಚಂದ್ರ ಅವರು ಪ್ರತಿದಿನ ಜ್ಯೋತಿಯ ಬಳಿ ತೆರಳಿ ಗಮನಿಸುತ್ತಿದ್ದಾರೆ. ಅಗತ್ಯ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಇತ್ತ ಸರ್ಕಾರವೂ ಸ್ಮಾರಕದ ಭದ್ರತೆಗಾಗಿ ಪೋಲೀಸರಿಗೆ ಜವಾಬ್ದಾರಿ ನೀಡಿದೆ. ಹಾಗಾಗಿ ಪ್ರತಿದಿನ ಪೋಲಿಸರು ಈ ಸ್ಥಳಕ್ಕೆ ಭೇಟಿಕೊಟ್ಟು ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಜತೆಗೆ ’ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ’ ಎಂಬ ಸಂಘಟನೆಯೂ ರೂಪುದಳೆದಿದೆ. ಈ ಸಂಘಟನೆಯ ಮೂಲಕ ನಾನಾ ಬಗೆಯ ಕಾರ್ಯಚಟುವಟಿಕೆಗಳೂ ಇಲ್ಲಿ ನಡೆಯುತ್ತಿರುತ್ತವೆ. ಕಾರ್ಗಿಲ್ ವಿಜಯ ದಿನ, ಸ್ವಾತಂತ್ರ್ಯೋತ್ಸವ, ಯೋಧರು ಅಥವ ಭಾರತೀಯ ಸೇನೆಗೆ ಸಂಬಂಧಿಸಿದ ಕಾರ್ಯಕ್ರಮವೇ ಮೊದಲಾದ ಕಾರ್ಯಕ್ರಮಗಳು ಇಲ್ಲಿ ಸಂಘಟಿತಗೊಳ್ಳುತ್ತವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾಥಿಗಳು ತಪ್ಪದೇ ಭಾಗವಹಿಸುತ್ತಾರೆ.


ಖರ್ಚುವೆಚ್ಚ:
ಅಮರ್ ಜವಾನ್ ಜ್ಯೋತಿ ಸ್ಮಾರಕ ನಿರ್ಮಾಣಕ್ಕೆ ಸುಮಾರು 8 ಲಕ್ಷ ರೂಪಾಯಿ ವೆಚ್ಚವಾಗಿದೆ. ಅಷ್ಟೂ ಮೊತ್ತವನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳೇ ಭರಿಸಿವೆ. ಈ ಸ್ಮಾರಕದ ಸುತ್ತ ಇಂಟರ್ ಲಾಕ್ ವ್ಯವಸ್ಥೆಯನ್ನೂ ಕಲ್ಪಿಸಿರುವುದು ಕಾರ್ಯಕ್ರಮ ಆಯೋಜನೆಗೆ ಅನುಕೂಲಕರವಾಗಿ ಪರಿಣಮಿಸಿದೆ. ಇದರೊಂದಿಗೆ ವಿವಿಧ ಕಾರ್ಯಕ್ರಮಗಳು ಇಲ್ಲಿ ಸಂಘಟಿತಗೊಳ್ಳುವಾಗ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದಲೇ ಹೂವಿನ ಅಲಂಕಾರ, ಯೋಧರ ಗೌರವಾರ್ಥ ಅರ್ಪಿಸುವ ರೀತ್‌ನ ವೆಚ್ಚವನ್ನು ಹೊಂದಿಸಲಾಗುತ್ತಿದೆ.


ಜ್ಯೋತಿಯ ಖರ್ಚನ್ನು ಭರಿಸುವ ಅವಕಾಶ:
ಅಮರ್ ಜವಾನ್ ಜ್ಯೋತಿ ಸ್ಮಾರಕ ಎಲ್ಲರ ಹೆಮ್ಮೆ. ಹಾಗಾಗಿಯೇ ಈ ಜ್ಯೋತಿಗೆ ಸಂಬಂಧಿಸಿದ ಗ್ಯಾಸ್‌ನ ಖರ್ಚನ್ನು ನೀಡುವುದಕ್ಕೆ ಆಸಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ವರ್ಷಕ್ಕೆ ಸುಮಾರು ಇಪ್ಪತ್ತು ಗ್ಯಾಸ್ ಸಿಲಿಂಡರ್ ಈ ಜ್ಯೋತಿಯ ಬೆಳಗುವಿಕೆಗೆ ಬೇಕಾಗುತ್ತದೆ. ಯಾರಾದರೂ ಬಯಸುವುದಿದ್ದರೆ ಗ್ಯಾಸ್ ಸಿಲಿಂಡರ್‌ನ ವೆಚ್ಚವನ್ನು ಭರಿಸುವುದಕ್ಕೆ ಅವಕಾಶವಿದೆ. ಅವರವರ ಆಸಕ್ತಿಗನುಗುಣವಾಗಿ ಒಂದು ಸಿಲಿಂಡರ್ ಮೊತ್ತದಿಂದ ತೊಡಗಿ ಎಷ್ಟು ಸಿಲಿಂಡರ್‌ಗಳನ್ನು ಬೇಕಾದರೂ ಪ್ರಾಯೋಜಿಸುವುದಕ್ಕೆ ಅವಕಾಶವಿದೆ. ಮೊದಲ ವರ್ಷ ಸುಮಾರು 38 ಮಂದಿ ತಲಾ 1 ಸಾವಿರ ರೂಪಾಯಿಯಂತೆ ನೀಡಿ ತಮ್ಮ ಸಹಭಾಗಿತ್ವವನ್ನು ಕಾಣಿಸಿದ್ದಾರೆ.


ಮಾಜಿ ಸೈನಿಕರ ಸಂಘದ ಸಹಯೋಗ:
ಈ ಸ್ಮಾರಕದ ಬಳಿ ನಡೆಯುವ ಬಹುತೇಕ ಎಲ್ಲಾ ಕಾರ್ಯಕ್ರಮಗಳಿಗೂ ಪುತ್ತೂರಿನ ಮಾಜಿ ಸೈನಿಕರ ಸಂಘ ಸಹಯೋಗವನ್ನು ಒದಗಿಸುತ್ತಿದೆ. ಅಂತೆಯೇ ಪುತ್ತೂರಿನ ಮಾಜಿ ಸೈನಿಕರು ಇಂತಹದ್ದೊಂದು ಸ್ಮಾರಕ ರಚನೆಯಾಗಿದ್ದರ ಬಗೆಗೆ ಅಪಾರ ಹೆಮ್ಮೆ ಹಾಗೂ ಕೃತಜ್ಞತೆ ವ್ಯಕ್ತಪಡಿಸುತ್ತಾರೆ.


ಭಾರತೀಯ ಸೇನೆಯೆಡೆಗೆ ಅಂಬಿಕಾದ ಅಭಿಮಾನ:
ಸೇನಾ ನಿವೃತ್ತಿಯಾಗಿ ತವರಿಗೆ ಆಗಮಿಸುವ ಯೋಧರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಅದ್ದೂರಿಯಾಗಿ ಸ್ವಾಗತಿಸುವ ಪರಿಪಾಠವಿದೆ. ದೇಶದ ಬೇರೆಲ್ಲೂ ಇಂತಹದ್ದೊಂದು ಕಾರ್ಯಕ್ರಮ ಖಾಸಗಿ ಸಂಸ್ಥೆಯಿಂದ ಆಯೋಜನೆಗೊಳ್ಳುವ ಉದಾಹರಣೆ ಇಲ್ಲ ಎಂಬುದು ಉಲ್ಲೇಖಾರ್ಹ. ಭಾರತಮಾತೆಯನ್ನು ರಕ್ಷಿಸುವುದಕ್ಕಾಗಿ ತನ್ನ ವೈಯಕ್ತಿಕ ಹಿತವನ್ನು ಬದಿಗೊತ್ತಿ ಕಾರ್ಯನಿರ್ವಹಿಸುವ ಯೋಧ ತವರಿಗೆ ಮರಳುವಾಗ ಆತನ್ನು ಗುರುತಿಸಬೇಕು, ಆತನ ಕಾರ್ಯಕ್ಕೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ ಎಂಬುದನ್ನು ತಿಳಿಸಬೇಕು ಎಂಬುದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಭಾವನೆಯಾಗಿದೆ.
ಇದರೊಂದಿಗೆ ನಟ್ಟೋಜ ಫೌಂಡೇಶನ್ ಟ್ರಸ್ಟ್ ತಾನು ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ, ಅಂಬಿಕಾ ಪದವಿಪೂರ್ವ ವಿದ್ಯಾಲಯ, ಅಂಬಿಕಾ ಪದವಿ ಮಹಾವಿದ್ಯಾಲಯಗಳಲ್ಲಿ ಸೈನಿಕರ ಮಕ್ಕಳಿಗೆ ವಿಶೇಷ ಶುಲ್ಕ ವಿನಾಯಿತಿಯನ್ನೂ ನೀಡುತ್ತಿದೆ.

ಈ ಸ್ಮಾರಕವನ್ನು ನಿರ್ಮಾಣ ಮಾಡಿಕೊಟ್ಟವರು ಪುತ್ತೂರಿನ ಶ್ರೀರಾಮ್ ಕನ್ಸ್ಟ್ರಕ್ಷನ್‌ನ ಮಾಲಕರಾದ ಇಂಜಿನಿಯರ್ ಪ್ರಸನ್ನ ಎಂ ಭಟ್. ಅತ್ಯಂತ ಆಕರ್ಷಕವಾಗಿ, ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಈ ಸ್ಮಾರಕದ ನಿರ್ಮಾಣ ನಡೆದಿದೆ. ಪುತ್ತೂರಿನ ಶಿಲ್ಪಾ ಗ್ಯಾಸ್ ಎಜೆನ್ಸಿಯ ಮಾಲಕ ಉಮಾನಾಥ್ ಅವರು ತಮ್ಮ ಏಜೆನ್ಸಿ ವತಿಯಿಂದ ಈ ಸ್ಮಾರಕದಲ್ಲಿ ಜ್ಯೋತಿ ಬೆಳಗುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಿಕೊಟ್ಟಿದ್ದಾರೆ. ಸಿಲಿಂಡರ್‌ನಿಂದ ಜ್ಯೋತಿಯೆಡೆಗೆ ಗ್ಯಾಸ್ ಪೈಪ್ ಲೈನ್ ಜೋಡಣೆ ಮಾಡಿಕೊಟ್ಟು ನಿರಂತರವಾಗಿ ಜ್ಯೋತಿ ಉರಿಯುವಂತೆ ಮಾಡಿದ್ದಾರೆ.

ನಮ್ಮ ದೇಶದ ಅಸ್ಮಿತೆ ಉಳಿದುಕೊಂಡಿರುವುದೇ ನಮ್ಮ ಯೋಧರಿಂದ. ಎಲ್ಲಿಯವರೆಗೆ ನಾವು ಯೋಧರಿಗೆ ಗೌರವ ನೀಡುತ್ತೇವೆಯೋ ಅಲ್ಲಿಯವರೆಗೆ ದೇಶ ಸುಭದ್ರವಾಗಿರುತ್ತದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳೆಲ್ಲವೂ ಉಳಿದಿರುವುದು ಯೋಧರಿಂದ ಎಂಬುದನ್ನು ಮರೆಯಬಾರದು. ಮನೆಯಲ್ಲಿ ಹೇಗೆ ದೇವರಿಗೆ ದೀಪ ಬೆಳಗುತ್ತೇವೆಯೋ ಹಾಗೆಯೇ ಯೋಧರಿಗೂ ಬೆಳಗಬೇಕು. ಆ ಬೆಳಕು ನಮ್ಮ ದೇಶವನ್ನು ರಕ್ಷಿಸುವ ಸೈನಿಕರಿಗೆ ಶಕ್ತಿಯನ್ನೊದಗಿಸಲಿ ಎಂಬ ಭಾವನೆ ಜ್ಯೋತಿಯನ್ನು ಉರಿಸುವುದರ ಹಿಂದೆ ಅಡಗಿದೆ.
ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

LEAVE A REPLY

Please enter your comment!
Please enter your name here