ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ವಿಪರೀತ ಮಳೆಯ ಕಾರಣ ಅಲ್ಲಲ್ಲಿ ಕೆಲವೊಂದು ಹೊಂಡಗಳು ಬಿದ್ದಿವೆ. ಇದರ ದುರಸ್ಥಿ ಕಾರ್ಯ ಶಾಸಕರ ಸೂಚನೆಯಂತೆ ನಡೆಯುತ್ತಿದೆ.
ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಉಪ್ಪಿನಂಗಡಿ ರಸ್ತೆಯಲ್ಲಿನ ಹೊಂಡದಿಂದ ವಾಹನದ ಟಯರ್ ಪಂಕ್ಚರ್ ಆಗಿದ್ದು, ಬಿಜೆಪಿಯವರಿಗೆ ಗೊತ್ತಾಗುತ್ತದೆ. ಕಳೆದ 15 ವರ್ಷದಲ್ಲಿ ಕಲ್ಲಡ್ಕದಲ್ಲಿ ಎಷ್ಟು ಟಯರ್ ಪಂಕ್ಚರ್ ಆಗಿತ್ತು?, ಆಗ ಬಿಜೆಪಿಯವರ ಕಣ್ಣು ಕುರುಡಾಗಿತ್ತಾ? ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಕಿಡಿಕಾರಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪುತ್ತೂರು ಶಾಸಕರು ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಕೋಟಿಗಟ್ಟಲೆ ಅನುದಾನ ಬರುತ್ತಿದೆ, ಇದನ್ನು ಕಂಡು ಸಹಿಸಲಾಗದ ನಾಲಾಯಕ್ ಬಿಜೆಪಿಯವರು ಉಪ್ಪಿನಂಗಡಿ ರಸ್ತೆಯ ವಿಚಾರವಾಗಿ ರಾಜಕೀಯ ಮಾಡಿ ಶಾಸಕರನ್ನು ಕೆಣಕುವ ಕೆಲಸಕ್ಕೆ ಮುಂದಾಗಿದ್ದಾರೆ. ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುವ ರಸ್ತೆ ಮೂರು ವರ್ಷದ ಹಿಂದೆ ನಿರ್ಮಾಣವಾಗಿದೆ. ಕಾಮಗಾರಿ ಕಳಪೆಯಾದ ಕಾರಣ ಮೂರೇ ವರ್ಷಕ್ಕೆ ಹೊಂಡ ಬಿದ್ದಿದೆ. 40% ವ್ಯವಹಾರ ನಡೆದಿದೆ ಎಂದು ಈ ರಸ್ತೆಯೇ ಸಾರಿ ಹೇಳುತ್ತಿದೆ. ಗುಣಮಟ್ಟ ಚೆನ್ನಾಗಿರುತ್ತಿದ್ದರೆ ಕೆಮ್ಮಾಯಿಯಲ್ಲಿ ಅಷ್ಟೊಂದು ಹೊಂಡ ಹೇಗೆ ನಿರ್ಮಾಣವಾಗಿದೆ ಇದಕ್ಕೆ ಬಿಜೆಪಿ ಉತ್ತರಿಸಬೇಕು.
ಉಪ್ಪಿನಂಗಡಿ ರಸ್ತೆಯ ದುರಸ್ಥಿ ಕಾರ್ಯ ಮಳೆಯ ನಡುವೆಯೂ ನಡೆಯುತ್ತಿದೆ. ಶಾಸಕ ಅಶೋಕ್ ರೈ ಅವರು ಹೇಳಿದ್ದನ್ನು ಮಾಡಿ ತೋರಿಸುತ್ತಾರೆ ಎಂದ ಹೇಮನಾಥ ಶೆಟ್ಟಿಯವರು ಬಿಜೆಪಿಯವರು ಅಭಿವೃದ್ದಿಗೆ ಕೈಜೋಡಿಸುವುದನ್ನು ಕಲಿಯಲಿ. ಕ್ಷುಲ್ಲಕ ವಿಚಾರವನ್ನು ರಾಜಕೀಯಕ್ಕೆ ಎಳೆದು ತಂದರೆ ಜನ್ಮ ಜಾಲಾಡಲು ನಮಗೂ ಗೊತ್ತಿದೆ ಎಂದರು.