ಆಲಂಕಾರು: ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ,ಕುಂಕುಮಾರ್ಚನೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇಮೂ ಶ್ರೀ ಕುಡುಪು ನರಸಿಂಹ ತಂತ್ರಿಗಳು ಮತ್ತು ವೇ.ಮೂ ಸುಬ್ರಹ್ಮಣ್ಯ ಕಾರಂತ ರವರ ನೇತೃತ್ವದಲ್ಲಿ ಜು.25ರಂದು ನಡೆಯಿತು.


ಆಗಮಿಸಿದ ವೃತದಾರಿ ಭಕ್ತಾಧಿಗಳು ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು. ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಸಚಿವರು ಹಾಗು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಜೀರ್ಣೋದ್ಧಾರದ ಕೆಲಸ ಕಾರ್ಯ ವೀಕ್ಷಣೆ ಮಾಡಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಕ್ಕೆ ಸರಕಾರದ ವತಿಯಿಂದ ಅನುದಾನ ಒದಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ,ಅಭಯಚಂದ್ರ ಜೈನ್,ವಿನಯಕುಮಾರ್ ಸೊರಕೆ,ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಬಳಿಕ ಸಭಾಕಾರ್ಯಕ್ರಮ ನಡೆಯಿತು. ಸಭೆ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಉದ್ಯಮಿ ಕಾಂಗ್ರೆಸ್ ಮುಖಂಡ ಜಿ.ಕೃಷ್ಷಪ್ಪ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪ್ರವೀಣ ಪಿ ರೈ ಮರುವಂಜ,ಉದ್ಯಮಿಗಳಾದ ಅಭಿಲಾಷ ಪಿ.ಕೆ ಉಪಸ್ಥಿತರಿದ್ದು ಶುಭಹಾರೈಸಿದರು.

ಅಭಿವೃದ್ಧಿ ಸಮಿತಿಯ ಅದ್ಯಕ್ಷ ಹೇಮಂತ್ ರೈ ಮನವಳಿಕೆ ಜೀರ್ಣೋದ್ಧಾರದ ಕುರಿತು ಸಮಗ್ರವಾಗಿ ತಿಳಿಸಿದರು. ಮಮತಾ ಅಂಬರಾಜೆ ಸ್ವಾಗತಿಸಿ, ಸರಿತಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿ ಸದಾನಂದ ಕುಮಾರ್ ಮಡ್ಯೋಟ್ಟು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು, ಭಕ್ತಾದಿಗಳು ಸಹಕರಿಸಿದರು.