ಉಪ್ಪಿನಂಗಡಿ: ಶವ ಸಂಸ್ಕಾರ ಎನ್ನುವುದು ಒಂದು ತೆರನಾದ ಯಜ್ಞವಿದ್ದಂತೆ. ಮಾನವನ ಮೃತ ಶರೀರವನ್ನು ಪಂಚಭೂತಗಳಲ್ಲಿ ಲೀನಗೊಳಿಸುವ ಈ ಕಾರ್ಯವನ್ನು ಆತ್ಮಸಂತೋಷಕ್ಕಾಗಿ ನಡೆಸಿಕೊಂಡು ಬರುತ್ತಿರುವ ವ್ಯಕ್ತಿ ಹೊನ್ನಪ್ಪ ಗೌಡ ವರೆಕ್ಕಾ. ಇವರ ಈ ಕಾರ್ಯ ಎಲ್ಲರಿಗೂ ಮಾದರಿಯೆನಿಸಿದೆ.
ಉಪ್ಪಿನಂಗಡಿಯ ದುರ್ಗಾಗಿರಿಯಲ್ಲಿನ ಶ್ರೀ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಉದಾರವಾಗಿ ನೀಡಲ್ಪಟ್ಟ ಎರಡು ಸಿಲಿಕಾನ್ ದಹನ ಘಟಕವಿದ್ದು, ಇಲ್ಲಿ ಕೊರೋನಾ ಸಮಯದಲ್ಲಿ ಕೋರೋನಾ ಕಾರಣದಿಂದ ಮೃತಪಟ್ಟ ಬಹಳಷ್ಟು ಮಂದಿಯ ಅಂತ್ಯ ಸಂಸ್ಕಾರವನ್ನು ಸೇವಾ ಭಾರತಿಯ ಸ್ವಯಂ ಸೇವಕರ ಸಹಕಾರದೊಂದಿಗೆ ನಡೆಸಲಾಗಿತ್ತು. ಬಳಿಕದ ದಿನಗಳಲ್ಲಿ ಅಂತ್ಯಸಂಸ್ಕಾರ ಕಾರ್ಯ ಇಲ್ಲಿ ನಿರಂತರ ನಡೆಯುತ್ತಾ ಬರುತ್ತಿದೆ. ಹೊನ್ನಪ್ಪ ಗೌಡರು ತನ್ನ ಆತ್ಮ ಸಂತೋಷಕ್ಕಾಗಿ ಸದ್ದಿಲ್ಲದೆ ಈ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಪ್ರತಿ ಶವ ಸಂಸ್ಕಾರದಲ್ಲಿ ತಲಾ 500 ರೂಪಾಯಿಯನ್ನು ಸ್ವಚ್ಚತೆಯ ನೆಲೆಯಲ್ಲಿ ಅವರಿಗೆ ಸ್ಮಶಾನ ಸಮಿತಿಯು ನೀಡಬಯಸಿದರೂ, ಸ್ಮಶಾನದಲ್ಲಿನ ಮೂಲಭೂತ ಅವಶ್ಯಕತೆಗಳು ಈಡೇರುವ ವರೆಗೆ ತನಗೆ ಯಾವುದೇ ಸಂಭಾವನೆ ಬೇಡವೆಂದು, ಪಾವತಿಸಬಯಸುವ ಸ್ವಚ್ಚತಾ ಸಂಭಾವನೆಯನ್ನು ಸಮಿತಿಗೆ ಹಿಂದಿರುಗಿಸುತ್ತಿದ್ದಾರೆ. ಈ ಮೂಲಕ ತನ್ನ ಶ್ರಮ, ತನ್ನ ಸಮಯವನ್ನು ಸಮಾಜಕ್ಕೆ ಅರ್ಪಿಸಿ, ಭಾರತೀಯ ಜೀವನ ಮೌಲ್ಯಗಳಾದ ತ್ಯಾಗ ಮತ್ತು ಸೇವೆಯನ್ನು ತನ್ನ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ.