ಪುತ್ತೂರು: ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯೋರ್ವರಿಗೆ ಸುಸೂತ್ರವಾಗಿ ಆಲಂಕಾರು 108 ಆಂಬುಲೆನ್ಸ್ ಸಿಬ್ಬಂದಿಗಳು ಹೆರಿಗೆ ಮಾಡಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಜು.28ರಂದು ಬೆಳಿಗ್ಗೆ ನಡೆದಿದೆ.

ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ಡೊಂಬಟೆಬರಿ ನಿವಾಸಿ ಸುಮಲತಾ (21ವ.)ಅವರಿಗೆ ಜು.28ರಂದು ಮುಂಜಾನೆ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ತೆರಳಲು ಅವರ ಪತಿ ದಿವಾಕರ ಅವರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಸಮೀಪದಲ್ಲಿ 108 ಆಂಬುಲೆನ್ಸ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆಲಂಕಾರು 108 ಆಂಬುಲೆನ್ಸ್‌ನವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಕರೆ ಸ್ವೀಕರಿಸಿದ ಆಲಂಕಾರು 108 ಆಂಬುಲೆನ್ಸ್ ಸಿಬ್ಬಂದಿಗಳು 7.30ಕ್ಕೆ ಸುಮಲತಾ ಅವರ ಮನೆಗೆ ತಲುಪುತ್ತಿದ್ದರು. ಆದರೆ ಆ ವೇಳೆಗಾಗಲೇ ಸುಮಲತಾ ಅವರಿಗೆ ಹೆರಿಗೆ ನೋವು ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ 108 ಆಂಬುಲೆನ್ಸ್ ಸುಶ್ರೂಷಕಿ ತೇಜಶ್ರೀ ಹಾಗೂ ಪೈಲೆಟ್ ಸತೀಶ್ ಅವರು ಸುಮಲತಾ ಅವರಿಗೆ ಅವರ ಮನೆಯಲ್ಲಿಯೇ ಸುಸೂತ್ರವಾಗಿ ಹೆರಿಗೆ ಮಾಡಿಸಿದರು. ಬಳಿಕ ಆಂಬುಲೆನ್ಸ್‌ನಲ್ಲಿಯೇ ತಾಯಿ ಹಾಗೂ ಹೆಣ್ಣು ಶಿಶುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.