ಪುತ್ತೂರು: ಕೋಡಿಂಬಾಡಿ ವನಿತಾ ಸಮಾಜದ ಪದಾಧಿಕಾರಿಗಳ ಪದಗ್ರಹಣ ಹಾಗೂ ಆಟಿದ ಕೂಟ ಕಾರ್ಯಕ್ರಮ ಜು.27ರಂದು ಕೋಡಿಂಬಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಹರಿಣಾಕ್ಷಿ ಕೈಪ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಪದ್ಮಲತಾ ಜೆ. ಶೆಟ್ಟಿ ಸ್ವಾಗತಿಸಿದರು. ದೀಪ ಪ್ರಜ್ವಲನೆ ಹಾಗೂ ಚೆನ್ನೆಮಣೆ ಆಟದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವನಿತಾ ಸಮಾಜದ ಗೌರವಾಧ್ಯಕ್ಷೆ ಪೂರ್ಣಿಮಾ ಎಸ್. ಶೆಟ್ಟಿ ಆಟಿದ ಕೂಟದ ಬಗ್ಗೆ ಮಾತುಗಳನ್ನಾಡಿದರು. ಸೌಮ್ಯ ಶಿವಪ್ರಕಾಶ್ ಮೋನಡ್ಕ ಅವರು ಆಟಿ ಮತ್ತು ಭೀಮನ ಅಮವಾಸ್ಯೆ ಕುರಿತು ತಿಳಿಸಿದರು. ಸುಲೋಚನಾ ಸೇಡಿಯಾಪು ಅವರು ಆಟಿಯ ಕಾಲದಲ್ಲಿ ಕಷ್ಟದ ಕಾಲಗಳನ್ನು ಹೇಗೆ ಅನುಭವಿಸುತ್ತಿದ್ದರು ಎಂಬುದರ ಬಗ್ಗೆ ತಿಳಿಸಿದರು. ಮಾನ್ವಿ ಶೆಟ್ಟಿ ಅವರು ಆಟಿ ಎಂದರೇನು, ಪದ್ಧತಿಗಳು ಏನು, ಯಾವ ರೀತಿ ಆಚರಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವನಿತಾ ಸಮಾಜದ ಅಧ್ಯಕ್ಷೆ ರಶ್ಮಿ ನಿರಂಜನ ರೈ ಮಠಂತಬೆಟ್ಟು ಅವರು ಕಾರ್ಯಕ್ರಮದ ಆಯೋಜನೆಗಳ ಬಗ್ಗೆ ತಿಳಿಸಿದರು ಮತ್ತು ಆಟಿದ ಕೂಟ ಕಾರ್ಯಕ್ರಮ ನಡೆಸುವುದರ ಮೂಲಕ ಮಹಿಳೆಯರು ಎಲ್ಲರೂ ಒಗ್ಗಟ್ಟಾಗಿ ಉತ್ತಮ ರೀತಿಯಲ್ಲಿ ವನಿತಾ ಸಮಾಜವನ್ನು ಬೆಳೆಸುವಲ್ಲಿ ಸಕರಿಸುವಂತೆ ವಿನಂತಿಸಿದರು. ನೂತನ ಪದಾಧಿಕಾರಿಗಳನ್ನು ಆಟಿಯ ವಿಶೇಷ ಹೂವಾದ ಜಾಜಿ ಮಲ್ಲಿಗೆಯೊಂದಿಗೆ ಅರಶಿನ ಕುಂಕುಮವನ್ನಿಟ್ಟು ಗೌರವಿಸಲಾಯಿತು. ಬಳಿಕ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ನಡೆಯಿತು. ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹೂವಿನ ಗಿಡ ನೀಡಿ ಅಭಿನಂದಿಸಲಾಯಿತು. ಸುಮಾರು 31 ಆಟಿಯ ವಿಶೇಷ ಖಾದ್ಯಗಳನ್ನು ತಯಾರಿಸಿ ಸದಸ್ಯರು ಸವಿದರು. ಕಾರ್ಯದರ್ಶಿ ಪವಿತ್ರ ಎಸ್. ಶೆಟ್ಟಿ ವಂದಿಸಿದರು. ವಿನುತ ಜೆ. ಬದಿನಾರು ಕಾರ್ಯಕ್ರಮ ನಿರೂಪಿಸಿದರು.

ಯಶೋದ ಬಾಲಕೃಷ್ಣ ಕಾಪು, ಭವ್ಯ ಡೆಕ್ಕಾಜೆ, ಶ್ರದ್ಧಾ ಎಸ್. ಶೆಟ್ಟಿ ಶಾಂತಿನಗರ, ಸವಿತಾ ಚಿದಾನಂದ ರೈ, ಧರ್ಮಾವತಿ ಸೇಡಿಯಾಪು ಮತ್ತಿತರರು ಭಾಗವಹಿಸಿದ್ದರು.