ಆಧುನಿಕತೆ, ಅನ್ಯಭಾಷೆಗಳ ಹೇರಿಕೆಯಿಂದ ತುಳುವಿಗೆ ಹಾನಿ : ಹೇಮಂತ್
ಪುತ್ತೂರು: ತುಳು ಭಾಷೆಗೆ ಅದರದ್ದೇ ಆದ ಲಿಪಿ ಇದೆ. ತುಳು ಗ್ರಂಥಗಳಿವೆ. ಆದರೆ ಆಧುನಿಕತೆ ಮತ್ತು ಅನ್ಯ ಭಾಷಾ ಹೇರಿಕೆಯಿಂದಾಗಿ ತುಳು ಭಾಷೆ ತೆರೆಯಮರೆಗೆ ಸರಿಯುತ್ತಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಜೀವನ ಕೌಶಲ್ಯ ಶಿಕ್ಷಕ ಹೇಮಂತ್ ಹೇಳಿದರು.

ಅವರು ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾದ ಆಟಿದ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಅನುಭವಿಸುತ್ತಿದ್ದ ಕಷ್ಟದ ಜೀವನ, ಆ ಕಾಲಕ್ಕೆ ಸೇವಿಸುತ್ತಿದ್ದ ಆಹಾರ ಪದ್ಧತಿ, ರೋಗ-ರುಜಿನಗಳಿಗೆ ಔಷಧವಿಲ್ಲದ ಸಂದರ್ಭದಲ್ಲಿ ಪಾಲೆ ತೊಗಟೆಯ ಕಷಾಯ ಸೇವನೆ ಮತ್ತು ಅದರಲ್ಲಿನ ರೋಗ ನಿರೋಧಕ ಶಕ್ತಿಯ ಗುಣಗಳನ್ನು ವಿವರಿಸಿ, ಆಟಿ ತಿಂಗಳ ಕಷ್ಟವನ್ನು ಕಳೆಯಲು ಬರುವ ಆಟಿಕಳಂಜನ ಹಿನ್ನೆಲೆ, ವೇಷಭೂಷಣ, ಆಚರಣಾ ಪದ್ಧತಿಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ತುಳುನಾಡಿನ ಪರಂಪರೆಯ ದ್ಯೋತಕವಾದ ಚೆನ್ನಮಣೆ ಆಟದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲೆ ಮಾಲತಿ ಡಿ ಭಟ್ ಹಾಗೂ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿವಿಕ್ತಾ ರೈ ಸ್ವಾಗತಿಸಿ, ಕನಿಷ್ಕ್ ಧನ್ಯವಾದ ಸಮರ್ಪಣೆ ಮಾಡಿ, ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಆಟಿಕಳಂಜನ ಆಗಮನದ ಮೂಲಕ ತುಳು ಭಾಷೆಯಲ್ಲಿಯೇ ಆಟಿದ ಕೂಟ ಕಾರ್ಯಕ್ರಮ ನಡೆಸಲಾಯಿತು.