ಬಡಗನ್ನೂರು: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹರಿಣಾಕ್ಷಿ ಎ ಇವರು ಜು.31ರಂದು ನಿವೃತ್ತಿ ಹೊಂದಲಿದ್ದಾರೆ.
ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಅರುವಾರುಗುತ್ತುವಿನ ಲಿಂಗಪ್ಪ ಶೆಟ್ಟಿ ಮತ್ತು ಲಕ್ಷ್ಮಿ ಇವರ ಪುತ್ರಿಯಾಗಿರುವ ಹರಿಣಾಕ್ಷಿ ಎ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೇಪು ಹಾಗೂ ಕಡಬದಲ್ಲಿ, ಪ್ರೌಢಶಿಕ್ಷಣವನ್ನು ಪದವಿಪೂರ್ವ ಕಾಲೇಜು ಕಡಬದಲ್ಲಿ, ವೃತ್ತಿಪರ ಶಿಕ್ಷಣವನ್ನು ಕೊಡಗಿನ ವಿರಾಜಪೇಟೆ ಸರ್ವೋದಯ ಕಾಲೇಜಿನಲ್ಲಿ ಪೂರೈಸಿರುತ್ತಾರೆ. 1995ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಾಡನ್ನೂರಿನಲ್ಲಿ ತಮ್ಮ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿ ಸುಮಾರು 15 ವರ್ಷಗಳ ಕಾಲ ಕರ್ತವ್ಯವನ್ನು ನಿರ್ವಹಿಸಿದರು. 2010ರಲ್ಲಿ ಸ.ಹಿ.ಪ್ರಾ.ಶಾಲೆ ಬಡಗನ್ನೂರು ಇಲ್ಲಿಗೆ ವರ್ಗಾವಣೆಗೊಂಡು 15 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. 30 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 20 ವರ್ಷಗಳು ಮುಖ್ಯ ಶಿಕ್ಷಕರ ಜವಾಬ್ದಾರಿಯನ್ನು ನಿರ್ವಹಿಸಿ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ.
ತಮ್ಮ ಕರ್ತವ್ಯದ ಅವಧಿಯಲ್ಲಿ ದಾನಿಗಳಿಂದ ಅತಿ ಹೆಚ್ಚಿನ ನೆರವನ್ನು ಪಡೆದು ಕೊಂಡು ಶಾಲೆಯ ಅಭಿವೃದ್ಧಿಯನ್ನು ಮಾಡಲು ಸಾಕಷ್ಟು ಶ್ರಮಿಸಿದ್ದ ಇವರು. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಗಳಿಂದ ದೊರೆಯುವ ಅನುದಾನವನ್ನು ಬಳಸಿಕೊಂಡು ಮೂಲಭೂತ ಅವಶ್ಯಕತೆಗಳನ್ನು ಅಭಿವೃದ್ದಿ ಪಡಿಸಲು ಶ್ರಮಿಸಿದ್ದಾರೆ.
ಹಸನ್ಮುಖಿ, ಸ್ನೇಹಪರ ಗುಣವನ್ನು ಮೈಗೂಡಿಸಿಕೊಂಡು, ಮಕ್ಕಳಿಗೆ ವಾತ್ಸಲ್ಯಮಯ ಶಿಕ್ಷಕಿಯಾಗಿ ಅಪಾರ ಜ್ಞಾನದ ಬೆಳಕನ್ನು ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಚೆಲ್ಲಿದ ಆದರ್ಶ ಶಿಕ್ಷಕಿಯಾಗಿ ಜು.31 ರಂದು ನಿವೃತ್ತಿಯನ್ನು ಹೊಂದುತ್ತಿರುವ ಇವರು ಪತಿ ಲಂಬೋದರ ರೈ ಮಕ್ಕಳಾದ ಲಹರಿ ರೈ, ಲಕ್ಷಿತಾ ರೈ ಹಾಗೂ ಅಳಿಯ ಸುಮಂತ್ ಶೆಟ್ಟಿ ಇವರೊಂದಿಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.