ಪುತ್ತೂರು: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ (21ವ) ಮೃತದೇಹ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರು ತಂದೆ ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಘಟನೆ ವಿವರ:
ಜುಲೈ 27ರಂದು ಹೇಮಂತ್ ಮನೆಯಿಂದ ನಾಪತ್ತೆಯಾಗಿದ್ದ, ಈ ಬಗ್ಗೆ ಜುಲೈ 28 ರಂದು ಸೋಮವಾರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 29 ರಂದು ಮಂಗಳವಾರ ಮಧ್ಯಾಹ್ನದ ವೇಳೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಡ್ಯಾಂ ಬಳಿ ಯುವಕನ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಅದೇ ದಿನ ಮಧ್ಯಾಹ್ನದ ಬಳಿಕ ಸ್ಥಳೀಯ ಮುಳುಗುತಜ್ಞರ ತಂಡ, ಅಗ್ನಿಶಾಮಕದಳ ಹಾಗೂ ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣಾ ಪೊಲೀಸರ ತಂಡ ನೇತ್ರಾವತಿ ನದಿ ತೀರದಲ್ಲಿ ತೀವ್ರ ಹುಡುಕಾಟ ನಡೆಸಿತ್ತು. ಆದರೆ ಸಂಜೆವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಜುಲೈ 30 ರಂದು ಮತ್ತೆ ಬೆಳಿಗ್ಗೆಯಿಂದಲೇ ಅದೇ ತಂಡ ಜಕ್ರಿಬೆಟ್ಟು ಡ್ಯಾಂ ನಿಂದ ತುಂಬೆ ಡ್ಯಾಂವರೆಗೂ ಶೋಧ ನಡೆಸಿದೆಯಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜುಲೈ 31ರಂದು ಮತ್ತೆ ಕಡೇಶಿವಾಲಯ ಬಿಜೆಪಿ ಪ್ರಮುಖರಾದ ಸಂಪತ್ ಕೋಟ್ಯಾನ್ ಅವರ ಮುತುವರ್ಜಿಯಿಂದ ಈಶ್ವರ್ ಮಲ್ಪೆ ತಂಡ ಮತ್ತು ಜಿ.ವಿ ಫ್ರೆಂಡ್ಸ್ ಕಡೇಶಿವಾಲಯ ಹಾಗೂ ಎನ್.ಡಿ.ಆರ್.ಎಫ್ ತಂಡವನ್ನು ಕರೆಸಿಕೊಂಡು ಅಗ್ನಿಶಾಮಕದಳದ ಜೊತೆ ಜಂಟಿಯಾಗಿ ಸ್ಥಳೀಯ ಈಜುಗಾರ ನಿಸಾರ್ ಅವರೊಂದಿಗೆ ಜಕ್ರಿಬೆಟ್ಟುವಿನಿಂದ ತುಂಬೆವರೆಗೂ ಶೋಧ ನಡೆಸಿತ್ತು.
ಮಧ್ಯಾಹ್ನದ ಬಳಿಕ ತುಂಬೆ ಡ್ಯಾಂನಿಂದ ಕೆಳಭಾಗದಲ್ಲಿ ಮೂರು ತಂಡಗಳ ಜೊತೆಯಲ್ಲಿ ಡ್ರೋನ್ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಸಂಜೆ ವೇಳೆ ಡ್ರೋನ್ ನ ಕಣ್ಣಿಗೆ ಮೃತದೇಹವೊಂದು ತೇಲಾಡುತ್ತಿರುವುದು ಕಂಡು ಬಂದಿದ್ದು, ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ತಂಡ ಈತನ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ.