ಪೌರಾಯುಕ್ತ ಮಧು ಎಸ್.ಮನೋಹರ್‌ಗೆ ಬೀಳ್ಕೊಡುಗೆ

0

ಹೆಸರಿನಲ್ಲಿಯೇ ಎಸ್ ಇದ್ದು ಅವರಲ್ಲಿ ಏನೂ ಹೇಳಿದರೂ ನೋ ಎಂಬುದಿರಲಿಲ್ಲ-ಸಂಜೀವ ಮಠಂದೂರು
ಸಿಬ್ಬಂದಿ ಕೊರತೆ ನಡುವೆಯೂ ಸವಾಲಿನಲ್ಲಿ ಕರ್ತವ್ಯ ನಿರ್ವಹಣೆ- ಮಧು ಎಸ್.ಮನೋಹರ್‌


ಪುತ್ತೂರು:ನಗರ ಸಭೆಯಲ್ಲಿ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಧು ಎಸ್.ಮನೋಹರ್ ಅವರಿಗೆ ಬೀಳ್ಕೊಡುಗೆ ಸಮಾರಂಭವು ಜು.31ರಂದು ಪುರಭವನದಲ್ಲಿ ನಡೆಯಿತು.


ಹೆಸರಿನಲ್ಲಿಯೇ ಎಸ್ ಇದ್ದು ಅವರಲ್ಲಿ ಏನೂ ಹೇಳಿದರೂ ನೋ ಎಂಬುದಿರಲಿಲ್ಲ-ಸಂಜೀವ ಮಠಂದೂರು:
ಪೌರಾಯುಕ್ತರನ್ನು ಸನ್ಮಾನಿಸಿ ಗೌರವಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಳೆದ ಅವಧಿಯಲ್ಲಿ ಶಾಸಕನಾಗಿದ್ದಾಗ ಉತ್ತಮ ಅದಿಕಾರಿಗಳಿರಬೇಕು.ಪುತ್ತೂರಿನಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಕಬೇಕು ಎಂದು ನಗರ ಸಭೆಗೆ ಉತ್ತಮ ಅಧಿಕಾರಿಯ ಹುಡುಕಾಟದಲ್ಲಿದ್ದಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪರಿಸರ ಅಭಿಯಂತರರಾಗಿದ್ದ ಮಧು ಎಸ್. ಮನೋಹರ್ ಹಾಗೂ ಶಬರೀನಾಥರವರು ಬೆಳಕಿಗೆ ಬಂದಿದ್ದರು.ಪುತ್ತೂರು ನಗರ ಸಭೆಯನ್ನು ರೋಲ್ ಮಾಡೆಲ್ ಮಾಡಲು ನಮಗೆ ಇವರು ದೊರೆತಿದ್ದಾರೆ.ಮಧು ಎಸ್ ಮನೋಹರ್ ತನ್ನ ನಯ, ವಿನಯದ ಜೊತೆಗೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಸಮಾಜಕ್ಕೆ ಮಾದರಿಯಾಗಿದೆ.ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಸಿ ಸಿಎನ್‌ಜಿ ಘಟಕ ಪ್ರಾರಂಭಿಸಿ ಪುತ್ತೂರನ್ನು ರಾಜ್ಯಕ್ಕೆ ಮಾದರಿಯನ್ನಾಗಿಸಿದ್ದಾರೆ.ಸ್ವಚ್ಚತೆಯಲ್ಲಿ 36ನೇ ಸ್ಥಾನದಲ್ಲಿದ್ದ ನಗರ ಸಭೆ ಈಗ 2ನೇ ಸ್ಥಾನಕ್ಕೆ ಬಂದಿದೆ.ಸ್ಮಾರ್ಟ್‌ಸಿಟಿ ಕಲ್ಪನೆಯಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ವಚ್ಛ ಸುಂದರ ನಗರ ನಿರ್ಮಾಣ ಮಾಡಿದ್ದಾರೆ.ಅವರ ಹೆಸರಿನಲ್ಲಿಯೇ ಎಸ್ ಇದ್ದು ಅವರಲ್ಲಿ ಏನೂ ಹೇಳಿದರೂ ನೋ ಎಂಬುದಿರಲಿಲ್ಲ.ತನ್ನ ವೃತ್ತಿ ಧರ್ಮದ ಜೊತೆಗೆ ಜನರ ಪ್ರೀತಿ ಗಳಿಸಿದ ಅವರು ಮುಂದೆ ಉನ್ನತ ಹುದ್ದೆ ಪಡೆದು ಅವರ ನಿವೃತ್ತಿಯೂ ಪುತ್ತೂರಿನಲ್ಲಿಯೇ ನಡೆಯಲಿ ಎಂದು ಆಶಿಸಿ ಶುಭಹಾರೈಸಿದರು.


ಯಾಕೆ ಕಳುಹಿಸುತ್ತೀರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ -ಜೀವಂಧರ್ ಜೈನ್:
ನಗರ ಸಭಾ ಸದಸ್ಯ ಜೀವಂಧರ್ ಜೈನ್ ಮಾತನಾಡಿ, ನನ್ನ 25 ವರ್ಷಗಳ ರಾಜಕೀಯ ಜೀವನದಲ್ಲಿ ಬಹಳಷ್ಟು ಮುಖ್ಯಾಧಿಕಾರಿಗಳನ್ನು ನೋಡಿದ್ದೇನೆ.ಕೆಲವು ಅಧಿಕಾರಿಗಳನ್ನು ಯಾಕೆ ಕಳುಹಿಸಿಲ್ಲ ಎಂದು ಸಾರ್ವಜನಿಕರು ನಮ್ಮನ್ನು ಪ್ರಶ್ನಿಸಿದರೆ ಈಗ ಮಧು ಎಸ್. ಮನೋಹರ್‌ರವರನ್ನು ಯಾಕೆ ಕಳುಹಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ.ನಗರ ಸಭೆಗೆ ಅತೀ ದೊಡ್ಡ ಸಮಸ್ಯೆಯಾಗಿದ್ದ ಡಂಪಿಂಗ್ ಯಾರ್ಡ್‌ನ ಕಸವಿಲೇವಾರಿಯನ್ನು ಮಧು ಎಸ್ ಮನೋಹರ್ ಹಾಗೂ ಅವರ ಜೊತೆ ಶಬರಿನಾಥರವರು ಶೂನ್ಯಕ್ಕೆ ಇಳಿಸಿದ್ದಾರೆ.ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ರಾರಂಭಗೊಂಡ ಸಿಎನ್‌ಜಿ ಘಟಕದ ಕ್ರೆಡಿಟ್ ಅವರಿಬ್ಬರಿಗೆ ಸಲ್ಲುವಂಥದ್ದು.25 ವರ್ಷದಲ್ಲಿ ಇಂತಹ ಅದ್ದೂರಿ ಬೀಳ್ಕೊಡುಗೆ ಪ್ರಥಮ ಬಾರಿಗೆ ನಡೆಯುತ್ತಿದೆ.ಅಧಿಕಾರಿಯಾಗಿ ಸದಸ್ಯರಿಗೂ ಬಲ ತುಂಬಿದವರು ಮಧು ಎಸ್.ಮನೋಹರ್ ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಜನರ ಪ್ರೀತಿ ಗಳಿಸಿದ್ದಾರೆ-ಕೃಷ್ಣನಾರಾಯಣ:
ಬನ್ನೂರು ಡಂಪಿಂಗ್ ಯಾರ್ಡಿನ ಸಿ.ಎನ್.ಜಿ. ಘಟಕದ ಮುಖ್ಯಸ್ಥ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಪೌರಾಯುಕ್ತರಾಗಿ ಮಧು ಎಸ್. ಮನೋಹರ್ ಸಮರ್ಪಣಾ ಭಾವದಿಂದ ಕೆಲಸ ಮಾಡಿದವರು.ಸಿಎನ್‌ಜಿ ಘಟಕ ನಿರ್ಮಾಣದಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ.ಅವರಿಗೆ ಪರಿಸರದ ಮೇಲಿದ್ದ ಪ್ರೀತಿಯಿಂದಾಗಿ ಬನ್ನೂರು ಡಂಪಿಂಗ್ ಯಾರ್ಡ್‌ನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಯಿತು.ನಾವು ಯಾವುದೇ ಯೋಜನೆಯ ಬಗ್ಗೆ ತಿಳಿಸಿದರೆ ಅವರು ನಮಗಿಂತ ಒಂದು ಹಂತ ಮುಂದಕ್ಕೆ ಹೋಗಿ ಅದಕ್ಕೆ ಏನಾಗಬೇಕು ಎಂದು ಹೇಳುತ್ತಿದ್ದರು.ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿ ಜನರ ಪ್ರೀತಿ ಗಳಿಸಿದ್ದಾರೆ.ಇಂತಹ ದಕ್ಷ ಅಧಿಕಾರಿಯನ್ನು ಬೀಳ್ಕೊಡಲು ಮನಸ್ಸಿಲ್ಲದಿದ್ದರೂ ಅಽಕಾರಿಗಳಿಗೆ ವರ್ಗಾವಣೆ ಸಾಮಾನ್ಯ.ಉನ್ನತ ಹುದ್ದೆ ದೊರೆತು ಪುತ್ತೂರು ಜಿಲ್ಲಾ ಕೇಂದ್ರವಾದಾಗ ಮತ್ತೆ ಆಯುಕ್ತರಾಗಿ ಬರಲಿ ಎಂದರು.


ಉತ್ತಮ ಸೇವೆ ನೀಡಿದ ಜನಸ್ನೇಹಿ ಅಧಿಕಾರಿ-ವಾಮನ ಪೈ:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಮಧು ಎಸ್.ಮನೋಹರ್‌ರವರು ಪ್ರಾಯೋಗಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿದವರು. ವರ್ತಕರ ಸಮಸ್ಯೆಗಳಿಗೆ ಉತ್ತಮ ಸಲಹೆ ನೀಡಿ ಸ್ಪಂದಿಸುತ್ತಿದ್ದರು.ಇಂತಹ ಉತ್ತಮ ಅಧಿಕಾರಿಯನ್ನು ಅನಿವಾರ್ಯವಾಗಿ ಬೀಳ್ಕೊಡುತ್ತಿದ್ದೇವೆ.ಉತ್ತಮ ಸೇವೆ ಇಲ್ಲಿ ದೊರೆತ ಜನಸ್ನೇಹಿ ಅಽಕಾರಿ ಎಂಬ ಬಿರುದನ್ನು ನಿರಂತರವಾಗಿ ಉಳಿಸಿಕೊಳ್ಳಬೇಕು ಎಂದರು.


ಗ್ರಾಮೀಣ ಮಟ್ಟದಲ್ಲಿ ಸ್ವಚ್ಛತೆ ಯಶಸ್ಸಿಗೆ ಸಹಕಾರ ನೀಡಿದವರು-ನವೀನ್ ಭಂಡಾರಿ:
ತಾ.ಪಂ.ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ ಮಾತನಾಡಿ, ರಾಜಕೀಯ ವ್ಯವಸ್ಥೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಯಾಗಿ ತನ್ನ ಕರ್ತವ್ಯವನ್ನು ಮಧು ಎಸ್.ಮನೋಹರ್ ಸಮರ್ಥವಾಗಿ ನಿರ್ವಹಿಸಿದವರು.ಮಂಗಳೂರುನ ಸ್ವಚ್ಚತೆಗೆ ತಳಪಾಯ ಹಾಕಿದವರೇ ಮಧು ಮನೋಹರ್.ದೊಡ್ಡ ಮಟ್ಟದಲ್ಲಿ ಗಣ್ಯರು ಸೇರಿಕೊಂಡು ಮಾಡಿದ ಬೀಳ್ಕೊಡುಗೆ ನಡೆದಿರುವುದು ಇದೇ ಪ್ರಥಮ.ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಸಲಹೆ ಸೂಚನೆ ನೀಡುತ್ತಿದ್ದ ಇವರು ಗ್ರಾಮೀಣ ಮಟ್ಟದಲ್ಲಿ ಸ್ವಚ್ಚತೆ ಸಂಪೂರ್ಣ ಯಶಸ್ವಿಯಾಗುವಲ್ಲಿ ಸಹಕಾರ ನೀಡಿದವರು ಎಂದರು.


ಇಂಥ ಉತ್ತಮ ಅಧಿಕಾರಿಯನ್ನು ನೋಡಿಲ್ಲ-ಸುಂದರ ಪೂಜಾರಿ:
ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ನಗರ ಸಭೆಯಲ್ಲಿ ಇಂತಹ ಉತ್ತಮ ಅಧಿಕಾರಿಯನ್ನು ನಾವು ನೋಡಿಲ್ಲ.ನಾವು ಸಹೋದರರಂತೆ ಕೆಲಸ ಮಾಡುತ್ತಿದ್ದೆವು.ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಂಡವರು.ಸ್ವಚ್ಚತೆಯಲ್ಲಿ ನಗರ ಸಭೆ ಎರಡನೇ ಸ್ಥಾನಕ್ಕೆ ಬರಲು ಮಧು ಮನೋಹರ್ ಅವರೇ ಪ್ರಮುಖ ಕಾರಣರಾಗಿದ್ದಾರೆ ಎಂದರು.


ನಗರ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ತಹಶೀಲ್ದಾರ್ ಬಿ.ಎಸ್.ಕೂಡಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ನಿಹಾಲ್ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಉಲ್ಲಾಸ್ ಪೈ, ಗುತ್ತಿಗೆದಾರರ ಸಂಘದ ಮುರಳಿಕೃಷ್ಣ ಹಸಂತಡ್ಕ,ಪರಿಸರ ಅಭಿಯಂತರ ಶಬರೀನಾಥ ರೈ, ಪೌರ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಕುಮಾರ್, ಪೌರ ಕಾರ್ಮಿಕರ ಕರಾವಳಿ ವಿಭಾಗದ ಸಂಚಾಲಕ ಬಿ.ಕೆ ಅಣ್ಣಪ್ಪ ಕಾರೆಕ್ಕಾಡು, ನೂತನ ಪೌರಾಯುಕ್ತೆ ವಿದ್ಯಾ ಎಂ.ಕಾಲೆ ಸಂದರ್ಭೋಚಿತ ಮಾತನಾಡಿ ಶುಭಹಾರೈಸಿದರು.


ಅಭಿನಂದನೆಗಳ ಮಹಾಪೂರ:
ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ನಗರ ಸಭೆಯಿಂದ ಅದ್ದೂರಿಯಾಗಿ ಬೀಳ್ಕೊಡುಗೆ ಸನ್ಮಾನ ನಡೆಯಿತು.ಇದಲ್ಲದೆ ನಗರ ಸಭಾ ಸದಸ್ಯರು, ಸಿಬಂದಿಗಳು, ಗುತ್ತಿಗೆದಾರರು, ವರ್ತಕರು,ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ವತಿಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.ಜನಸ್ನೇಹಿತ ಅಧಿಕಾರಿಗೆ ಜನತೆ ಸರತಿ ಸಾಲಿನಲ್ಲಿ ನಿಂತು ಅಭಿನಂದನೆ ಸಲ್ಲಿಸುತ್ತಿದ್ದರು.ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.

ಸಿಬ್ಬಂದಿ ಕೊರತೆ ನಡುವೆಯೂ ಸವಾಲಿನಲ್ಲಿ ಕರ್ತವ್ಯ ನಿರ್ವಹಣೆ
ಸನ್ಮಾನ ಸ್ವೀಕರಿಸಿದ ಮಧು ಎಸ್. ಮನೋಹರ್ ಮಾತನಾಡಿ, ಐದು ವರ್ಷಗಳ ಕಾಲ ಪುತ್ತೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದ ನನಗೆ ಸರಕಾರಿ ಸೇವೆಗೆ ನೇಮಕಗೊಂಡ ಬಳಿಕ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬ ಹಂಬಲವಿತ್ತು.ಪೌರಾಯುಕ್ತನಾಗಿ ಪುತ್ತೂರಿನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ.ನಗರ ಸಭೆಯಲ್ಲಿ ಸಿಬಂದಿಗಳ ಕೊರತೆ, ಹಿರಿಯ ಅಧಿಕಾರಿಗಳ ಕೊರತೆಯ ಮಧ್ಯೆಯೂ ಸವಾಲಿನಲ್ಲಿ ಕರ್ತವ್ಯ ನಿರ್ವಹಿಸಲಾಗಿದೆ.ನಗರದ ಸ್ವಚ್ಚತೆಗೆ ಪೂರಕವಾಗಿ ಕೃಷ್ಣನಾರಾಯಣ ಮುಳಿಯರವರ ಯೋಜನೆ ಯಶಸ್ವಿಯಾಗಿ ನಡೆದಿದ್ದು ಅವರ ಯೋಜನೆಯಂತೆ ಪ್ರಾರಂಭಿಸಲಾದ ಸಿಎನ್‌ಜಿ ಘಟಕದಿಂದ ಪುತ್ತೂರಿನ ಹೆಸರು ದೇಶದಲ್ಲಿ ರಾರಾಜಿಸುವಂತಾಗಿದೆ.ಕರ್ನಾಟಕದ ಪ್ರಥಮ ಸಿಎನ್‌ಜಿ ಘಟಕ ಪುತ್ತೂರಿನಲ್ಲಿದ್ದು ಪುತ್ತೂರನ್ನು ನ್ಯಾಷನಲ್ ಮ್ಯಾಪ್‌ನಲ್ಲಿ ತೋರಿಸುವಲ್ಲಿ ಸಹಕಾರಿಯಾಗಿದೆ.ಸ್ವಚ್ಚತಾ ಪ್ರಶಸ್ತಿಗೆ ಪೌರ ಕಾರ್ಮಿಕರ ಶ್ರಮ ಕಾರಣವಾಗಿದೆ.ಸ್ವಚ್ಚತೆಯಲ್ಲಿ 36ನೇ ಸ್ಥಾನದಲ್ಲಿದ್ದ ಪುತ್ತೂರು ಈಗ ಎರಡನೇ ಸ್ಥಾನದಲ್ಲಿದ್ದು ಈ ವರ್ಷ ಪ್ರಥಮ ಸ್ಥಾನಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ,ತನ್ನ ಕರ್ತವ್ಯದ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here