ಪುತ್ತೂರು:ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 -26ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ ಆ.1ರಂದು ನಡೆಯಿತು.
ಪೂರ್ವಭಾವಿ ಸಭೆಯ ಅಧ್ಯಕ್ಷ ಸ್ಥಾನವನ್ನು ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ವಹಿಸಿ ಮಾತನಾಡಿ, ತಾಲೂಕು ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ, ಅದೊಂದು ಸವಾಲು. ಪ್ರೀತಿಯಿಂದ ಕ್ರೀಡಾಕೂಟದ ಆಯೋಜನೆಗೆ ಒಪ್ಪಿಕೊಂಡ ಪ್ರಿಯದರ್ಶಿನಿ ವಿದ್ಯಾಸಂಸ್ಥೆಗೆ ನಮ್ಮೆಲ್ಲರ ಪೂರ್ಣ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆಗೈದ ಡಿಸಿಸಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರೂ,ಪ್ರಿಯದರ್ಶಿನಿ ಬೆಳ್ಳಿಹಬ್ಬ ಸಮಿತಿ ಇದರ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ನಮ್ಮೂರಿನ ಈ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯುವುದು ಕಷ್ಟದ ಕೆಲಸವಲ್ಲ. ಪ್ರಿಯದರ್ಶಿನಿಯ ಸಹಭಾಗಿತ್ವದಲ್ಲಿ ನಡೆಯುವ ಕ್ರೀಡಾಕೂಟ ಖಂಡಿತಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಪ್ರಿಯದರ್ಶಿನಿಯ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ರೈ ಬೈಲಾಡಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಲಿಂಗರಾಜು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕರುಣಾಕರ ಮಣಿಯಾಣಿ, ಮಾಮಚ್ಹನ್, ಸೀತಾರಾಮ ಗೌಡ, ಸುಧಾಕರ ರೈ, ಬಾಲಕೃಷ್ಣ, ಅಬ್ರಹಾಂ ಕೊಂಬಾರು ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರಾದ ಪ್ರಣಿತ ವೃಷ್ಟಿ ಹಾಗೂ ಅನನ್ಯ ಪ್ರಾರ್ಥಿಸಿದರು. ಶಾಲಾ ಮುಖ್ಯ ಗುರು ರಾಜೇಶ್ ಎನ್ ಸ್ವಾಗತಿಸಿದರು. ಸಹ ಶಿಕ್ಷಕಿ ಭವ್ಯ ವಂದಿಸಿದರು. ಸಹ ಶಿಕ್ಷಕಿ ಸಂಧ್ಯಾ ಎ ಕಾರ್ಯಕ್ರಮ ನಿರೂಪಿಸಿದರು.