ತುಳುನಾಡಿನ ಆಚರಣೆಗಳಿಗೆ ತನ್ನದೇ ಆದ ಮಹತ್ವವಿದೆ- ರಾಕೇಶ್ ರೈ ಕೆಡೆಂಜಿ
ಕಾಣಿಯೂರು: ಹಿರಿಯರ ತ್ಯಾಗ, ಹಿರಿಯರು ಆಚರಿಸಿಕೊಂಡು ಬಂದಂತಹ ಸಂಪ್ರದಾಯ ಅದೆಲ್ಲವೂ ಇವತ್ತು ನಮಗೆ ವರದಾನವಾಗಿದೆ. ನಮ್ಮ ತುಳುನಾಡಿನಲ್ಲಿ ಆಚರಿಸುವ ಪ್ರತಿಯೊಂದು ಆಚರಣೆಗೂ ತನ್ನದೇ ಆದ ಮಹತ್ವವಿದೆ. ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಠ್ಯದ ವಿಚಾರಗಳ ಜೊತೆ ಜೀವನ ರೂಪಿಸುವ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಅಗತ್ಯವಿದೆ ಎಂದು ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ಹೇಳಿದರು.
ಅವರು ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಹಸಿರ ಸಿರಿ ಇಕೋ ಕ್ಲಬ್ ಇದರ ಸಹಯೋಗದೊಂದಿಗೆ ಆ 2ರಂದು ನಡೆದ ಆಷಾಢ ಮಾಸದ ವೈಶಿಷ್ಟ್ಯ ‘ ಆಟಿದ ಲೇಸ್’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ತುಳುನಾಡೆಂದರೆ ಅದು ವೈಶಿಷ್ಟ್ಯತೆಗೆ ಇನ್ನೊಂದು ಹೆಸರು
ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತೊಮ್ಮೆ ನೆನಪಿಸುವ ಕೆಲಸ ಇಂತಹ ಕಾರ್ಯಕ್ರಮದ ಮೂಲಕ ನಡೆಯುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕಷ್ಟಪಟ್ಟು ಕಟ್ಟಿದ ಆಚರಣೆಗಳು ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳು ಅಗತ್ಯ. ಆಟಿ ತಿಂಗಳು ಎಂದರೆ ಅದು ಕಷ್ಟದ ತಿಂಗಳು. ಹಾಲೆ ಮರದ ಕಷಾಯ ಕುಡಿಯುವ ಹಿನ್ನೆಲೆಯಲ್ಲೂ ವೈಜ್ಞಾನಿಕ ಸತ್ಯ ಅಡಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್ ಮಾತನಾಡಿ, ಎಲ್ಲರ ಸಹಕಾರದಿಂದ ಆಟಿದ ಲೇಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರ ಅಗತ್ಯ ಎಂದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಸಿ ಯಶೋದರವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಕಲಿಕೆಗೆ ಪೂರಕವಾಗಿದೆ. ಆ ಮೂಲಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಡೆದಂತಹ ಜ್ಞಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯೆ ಸುನಂದಾ ಅಬ್ಬಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಎಸ್ ಡಿ ಎಂ ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಶ್ವಿನ್ ಕರಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಎಸ್ ಡಿ ಎಂ ಸಿ ಸದಸ್ಯರಾದ ಸುಧಾಕರ್ ಕಾಣಿಯೂರು, ಸುರೇಶ್ ಬೆದ್ರಂಗಳ, ಶೋಭಾ ಉಪ್ಪಡ್ಕ, ಸಂಧ್ಯಾ ಕಾರಡ್ಕ, ಮೋಹನ್ ಶೇರ, ರಕ್ಷಿತಾ ನಿಡ್ಡಾಜೆ, ಉಷಾ ಮದ್ಕೂರು, ಸದಾನಂದ ಕಡೀರ, ಮಹೇಶ್ ಪೈಕ, ಮಾಯಿಲಪ್ಪ ಬೆದ್ರಂಗಳ ಅತಿಥಿಗಳನ್ನು ಗೌರವಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಶಾಲಾ ಮುಖ್ಯಗುರು ಶಶಿಕಲಾರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕ ಜನಾರ್ದನ ಹೇಮಳ ವಂದಿಸಿದರು. ಶಿಕ್ಷಕಿ ಶೋಭಿತಾರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಗೀತಾ ಕುಮಾರಿ, ಸುರೇಖಾ, ಶೃತಿ, ದಿವ್ಯ, ಜಯಲತಾ, ಸುಶ್ಮಿತಾ ಸಹಕರಿಸಿದರು.
ಬೊಬ್ಬೆಕೇರಿ ಶಾಲೆಯಲ್ಲಿ ನಡೆದ ಆಷಾಢ ಮಾಸದ ವೈಶಿಷ್ಟ್ಯ ಆಟಿದ ಲೇಸ್ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.