ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ, ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಮತ್ತು ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ರಾಮಕುಂಜ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನದ ಮಹತ್ವ ಹಾಗೂ ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಆ.3ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ವಿಜಯ ಬ್ಯಾಂಕ್ನ ನಿವೃತ್ತ ಮ್ಯಾನೇಜರ್ ಬಾಲಕೃಷ್ಣ ಗೌಡ ಕತ್ಲಡ್ಕ ಕೊಂಡ್ಯಾಡಿ ಅವರು ಉದ್ಘಾಟಿಸಿ ಶುಭಹಾರೈಸಿದರು. ಉಪನ್ಯಾಸ ನೀಡಿದ ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲಾ ಸಹಶಿಕ್ಷಕಿ ಮಾಲತಿ ಓಡ್ಲರವರು, ತುಳುನಾಡಿನ ಜನ ಪ್ರಕೃತಿಯ ಆರಾಧಕರು, ಪ್ರಕೃತಿಯನ್ನು ದೇವರು ಎಂದು ನಂಬಿ ಬದುಕುವವರಾಗಿದ್ದಾರೆ. ಆಟಿ ತಿಂಗಳು ಸತ್ವಯುತ ತಿಂಗಳು ಆಗಿದೆ. ಈ ತಿಂಗಳಲ್ಲಿ ಬೆಳೆಯುವ ಗಿಡ, ಬಳ್ಳಿಗಳಲ್ಲಿ ಔಷಧೀಯ ಶಕ್ತಿ ಹೆಚ್ಚಾಗಿರುತ್ತದೆ ಎಂದು ಹೇಳಿದ ಅವರು, ಆಚರಣೆಗಳ ವೇಳೆ ಹಿರಿಯರನ್ನು ನೆನಪಿಸಿಕೊಳ್ಳಬೇಕು. ನಮ್ಮಲ್ಲಿ ಮೊದಲು ಬದಲಾವಣೆಯಾಗಬೇಕು. ಆಗ ಸಮಾಜವೂ ಬದಲಾವಣೆಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಮಾತನಾಡಿ, ಹೊಸಮಠದಲ್ಲಿ ಗೌಡ ಸಂಘದ ಅಸ್ಮಿತೆಯ ಸಂಕೇತವಾಗಿ ಸಭಾಭವನ ನಿರ್ಮಾಣಗೊಳ್ಳುತ್ತಿದೆ. ಗೌಡ ಸಮಾಜದವರು ಸಂಘಟಿತರಾಗಬೇಕು. ನಮ್ಮ ಸಮಾಜಕ್ಕೆ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಶಕ್ತಿ ತುಂಬುಲು ಸಂಘಟನೆ ಬೇಕೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಶಿವಣ್ಣ ಗೌಡ ಕಕ್ವೆ ಮಾತನಾಡಿ, ಆಲಂಕಾರು ವಲಯದಲ್ಲಿ ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘ ಹೆಚ್ಚು ಸಕ್ರೀಯವಾಗಿದೆ. ಪ್ರತಿವರ್ಷ ಆಟಿಡೊಂಜಿ ದಿನ, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ ಆಯೋಜಿಸುತ್ತಿದೆ. ಇತರೇ ಗ್ರಾಮ ಸಮಿತಿಗಳಿಗೆ ಮಾದರಿಯಾಗಿದೆ ಎಂದರು.
ರಾಮಕುಂಜ ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲ ವಳೆಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪದ್ಮಪ್ಪ ಗೌಡ ಕೆ.,ಸ್ವಾಗತಿಸಿ, ಗೌರವಾಧ್ಯಕ್ಷ ಗುಮ್ಮಣ್ಣ ಗೌಡ ಪಿ.ವಂದಿಸಿದರು. ಹರೀಶ್ ಬಾರಿಂಜ ನಿರೂಪಿಸಿದರು. ಶರಣ್ಯ, ಸಿಂಚನ ಪ್ರಾರ್ಥಿಸಿದರು. ಸಂಘದ ಪದಾಧಿಕಾರಿಗಳಾದ ಬಾಲಕೃಷ್ಣ ಗೌಡ ಪಟ್ಟೆ ಸಂಪ್ಯಾಡಿ, ಪೂವಪ್ಪ ಗೌಡ ಸಂಪ್ಯಾಡಿ, ಹರೀಶ್ ಯಸ್.ಕಾಜರುಕ್ಕು, ಸೀತಾರಾಮ ಗೌಡ ಅರ್ಬಿ, ಪರಮೇಶ್ವರ ಗೌಡ ಸಂಪ್ಯಾಡಿ, ವಿಶ್ವನಾಥ ಮೆಸ್ಕಾಂ, ಕವಿತಾ ಇರ್ಕಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಆಟೋಟ ಸ್ಪರ್ಧೆ:
ರಾಮಕುಂಜ ಗ್ರಾಮದ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಶ್ರೀ ಅನಂತಪದ್ಮನಾಭ ಒಕ್ಕಲಿಗ ಸ್ವ-ಸಹಾಯ ಸಂಘ ಗಾಣಂತಿ ಸಂಪ್ಯಾಡಿ ಸಂಘಕ್ಕೆ ಅತ್ಯುತ್ತಮ ಸ್ವಸಹಾಯ ಸಂಘ ಬಹುಮಾನ ನೀಡಿ ಗೌರವಿಸಲಾಯಿತು. ಆಟಿ ತಿಂಗಳಲ್ಲಿ ತಯಾರಿಸಿದ ವಿವಿಧ ಖಾದ್ಯಗಳ ಸ್ಪರ್ಧೆಯೂ ನಡೆಯಿತು.
ಸನ್ಮಾನ:
2024-25ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದುಕೊಂಡ ಪ್ರೀತಿ ಆರ್.ಎಸ್. ಕಾಜರುಕ್ಕು, ವರ್ಷಾ ಜಿ.ಗಾಂಧಾರಿಮಜಲು, ಹೇಮಂತ ರಾಮಂಡ, ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಈಶ್ವರ ಗೌಡ ಬಾರಿಂಜ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ಕರುಣಾಕರ ದೊಡ್ಡ ಉರ್ಕ, ಮಹೇಶ್ ಬಾಂತೊಟ್ಟು, ನಾಟಿವೈದ್ಯೆ ನಾಗಮ್ಮ ಉರ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪದ್ಮಪ್ಪ ಗೌಡ ಕೆ.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಿತ್ರಾವತಿ ಬಾರಿಂಜ, ಬಾಲಕೃಷ್ಣ ಗೌಡ ಸಂಪ್ಯಾಡಿ ಸನ್ಮಾನಿತರನ್ನು ಪರಿಚಯಿಸಿದರು.
ಸ್ವ-ಸಹಾಯ ಸಂಘದ ಸದಸ್ಯರಿಗೆ ವಿಮಾನದಲ್ಲಿ ಪ್ರವಾಸ;
ಪ್ರತಿ ವರ್ಷವೂ ಗ್ರಾಮದ ಒಕ್ಕಲಿಗ ಸ್ವ-ಸಹಾಯ ಸಂಘದ ಸದಸ್ಯರಿಗೆ ಒಕ್ಕೂಟದ ವತಿಯಿಂದ ವಿವಿಧ ಪ್ರವಾಸಿ ತಾಣಗಳಿಗೆ 1 ದಿನದ ಪ್ರವಾಸ ಆಯೋಜಿಸುತ್ತಿದ್ದೇವೆ. ಮುಂದಿನ ಜನವರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೋಗಿ ಬೆಂಗಳೂರಿನಲ್ಲಿ ಸುತ್ತಾಡಿ ಮತ್ತೆ ಮಂಗಳೂರಿಗೆ ಪ್ರವಾಸ ಆಯೋಜಿಸಲಾಗುವುದು. ಸ್ವಸಹಾಯ ಸಂಘದ ಸದಸ್ಯರಿಗೆ ಇದೊಂದು ಅವಕಾಶವಾಗಿದೆ. ಎಲ್ಲಾ ಸದಸ್ಯರೂ ಈ ಪ್ರವಾಸದಲ್ಲಿ ಭಾಗಿಗಳಾಗಬೇಕೆಂದು ರಾಮಕುಂಜ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪದ್ಮಪ್ಪ ಗೌಡ ಹೇಳಿದರು.