ರಾಮಕುಂಜ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಮಹಿಳಾ ಸಮಿತಿ ಆಶ್ರಯದಲ್ಲಿ ಆಟಿ ಸಂಭ್ರಮ ಕಾರ್ಯಕ್ರಮ ಆ.3ರಂದು ಹಳೆನೇರೆಂಕಿಯಲ್ಲಿರುವ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖಾ ಕಟ್ಟಡದ ವಠಾರದಲ್ಲಿ ನಡೆಯಿತು.

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕೆಡೆಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಳೆನೆರೆಂಕಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಬರೆಂಬೆಟ್ಟು ಅವರು ಉತ್ತಮ ರೀತಯಲ್ಲಿ ಸಮಾಜದ ಸಂಘಟನೆಯನ್ನು ಮಾಡುತ್ತಿದ್ದಾರೆ. ಇತರೇ ಪದಾಧಿಕಾರಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಯುವಕರು ಹೆಚ್ಚಾಗಿ ಭಾಗವಹಿಸಿ ಸಂಘದ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿಯವರು ಹಿಂದಿನ ಕಾಲದ ಆಟಿ ತಿಂಗಳ ಆಹಾರ ಪದ್ಧತಿಗಳು, ಔಷಧಿ ತಯಾರಿ ಸೇವನೆಯ ಉದ್ದೇಶಗಳ ಬಗ್ಗೆ ವಿವರಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಅನುಗುಣವಾಗಿ ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಳೆನೇರೆಂಕಿ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಬರೆಂಬೆಟ್ಟು ಮಾತನಾಡಿ, ಹಳೆನೇರೆಂಕಿ ಬಿಲ್ಲವ ಸಂಘ ಹಳೆನೇರೆಂಕಿಯಲ್ಲಿ ಸ್ವಂತ ಕಟ್ಟಡ ಹೊಂದಿದ್ದು ಸಮುದಾಯದ ಸಂಘಟನೆಗೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಸಮುದಾಯದ ಸಂಘಟನೆಗೆ ಸಮಾಜದ ಯುವಕ-ಯುವತಿಯರು ಕೈಜೋಡಿಸಬೇಕೆಂದು ಹೇಳಿದರು.
ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಹಿರಿಯರಾದ ವಿಶ್ವನಾಥ ರೈ ಎರಟಾಡಿ, ಹಳೆನೇರೆಂಕಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶೇಖರ ಗೌಡ ಹಿರಿಂಜ ಶುಭಹಾರೈಸಿದರು.
ನಾರಾಯಣ ಗುರುಗಳ ಭಾವಚಿತ್ರ ವಿತರಣೆ:
ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಶಿಕ್ಷಕ ದಿನೇಶ್ ಹಾಗೂ ತಣ್ಣೀರುಪಂತ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಶಿಕ್ಷಕ ಪ್ರೇಮನಾಥ ಅವರು ಕೊಡುಗೆಯಾಗಿ ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರವನ್ನು ಗ್ರಾಮದ ಬಿಲ್ಲವ ಸಮುದಾಯದ ಕುಟುಂಬಕ್ಕೆ ವಿತರಿಸಲಾಯಿತು.
ಸನ್ಮಾನ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡ ಅಜಿತ್ಕುಮಾರ್ ಪಾಲೇರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಳೆನೇರೆಂಕಿ ಬಿಲ್ಲವ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ಸುಚೇತ ಸ್ವಾಗತಿಸಿದರು. ಹಳೆನೇರೆಂಕಿ ಬಿಲ್ಲವ ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಕದ್ರ ವಂದಿಸಿದರು. ಶಿಕ್ಷಕರಾದ ದಿನೇಶ್ ಬರೆಂಬೆಟ್ಟು, ಪ್ರೇಮನಾಥ್ ಕಾರ್ಯಕ್ರಮ ನಿರ್ವಹಿಸಿದರು. ಜೋತಿಕಾ ಎನ್.ಕೆ.ಕದ್ರ, ಆನಂದ ಕದ್ರ ಪ್ರಾರ್ಥಿಸಿದರು. ಸಮಿತಿ ಪದಾಧಿಕಾರಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಆಟಿತಿಂಗಳ ವಿವಿಧ ಖಾದ್ಯಗಳ ಊಟೋಪಚಾರ ನಡೆಯಿತು.