ಪುತ್ತೂರು: ರಾಜ್ಯ ಸಾರಿಗೆ ಇಲಾಖೆಯ ನೌಕರರು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ 38 ತಿಂಗಳ ಹಿಂಬಾಕಿ ಮತ್ತು ವೇತನ ಪರಿಷ್ಕರಣೆಗಾಗಿ ನ್ಯಾಯಯುತವಾದ ಬೇಡಿಕೆಯನ್ನು ಮುಂದಿಟ್ಟರೂ ಸರ್ಕಾರಕ್ಕೆ ಈಡೇರಿಸುವ ಕಾಳಜಿಯಾಗಲಿ, ಇಚ್ಛಾಶಕ್ತಿ ಯಾಗಲಿ ಇಲ್ಲ, ರಾಜ್ಯದಲ್ಲಿ ಸರ್ಕಾರ ನಿರ್ಜೀವವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಶಕ್ತಿ ಗ್ಯಾರಂಟಿ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ ಆದರೆ ಸಾರಿಗೆ ನೌಕರರ ಸಮಸ್ಯೆ ಗಳ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿಲ್ಲ ಇದೊಂದು ಹೃದಯ ಶೂನ್ಯ ಸರ್ಕಾರ, ಬೇಡಿಕೆಗೆ ಸ್ಪಂದಿಸಲು ಪ್ರತಿಭಟನೆಯ ಹೆಜ್ಜೆ ಇಟ್ಟಿರುವ ಸಾರಿಗೆ ನೌಕರರ ಸಂಘಟನೆಯ ಮುಷ್ಕರವನ್ನು ನಿಲ್ಲಿಸಲು ಕಾನೂನು ಪ್ರಯೋಗಿಸಲು ಸರ್ಕಾರ ಉತ್ಸುಕತೆ ತೋರಿಸುತ್ತಿದೆ,ಸಮಸ್ಯೆ ಬಗೆಹರಿಸುವ ಬದ್ಧತೆ ಪ್ರದರ್ಶಿಸುತ್ತಿಲ್ಲ. ಸರ್ಕಾರ ತಕ್ಷಣ ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಬೇಕೆಂದು ಕುಂಪಲ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.