ಪುತ್ತೂರು: ಪತ್ರಿಕಾ ಸಂಸ್ಥೆಯೊಂದರ ಸಿಬ್ಬಂದಿಯ ವಾಟ್ಸಾಪ್ ಖಾತೆಯನ್ನು ಹೈಜಾಕ್ ಮಾಡಿ ಅದರ ಮೂಲಕ ಆಪ್ತ ಸ್ನೇಹಿತರಿಂದ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಆ.5ರಂದು ಬೆಳಗ್ಗೆ ನಡೆದಿದೆ.
ವಿಷಯ ತಿಳಿದ ವಾಟ್ಸಾಪ್ ಖಾತೆಯ ವಾರಿಸುದಾರ ಪೊಲೀಸರಿಗೆ ದೂರು ನೀಡುವ ಮೂಲಕ ಹೈಜಾಕ್ ಗೆ ಒಳಗಾಗಿದ್ದ ವಾಟ್ಸಪ್ ಖಾತೆಯನ್ನು ಸರಿಪಡಿಸಿಕೊಂಡಿದ್ದಾರೆ. ಪುತ್ತೂರು ವಿಜಯ ಕರ್ನಾಟಕ ಪತ್ರಿಕೆಯ ಜಾಹಿರಾತು ವಿಭಾಗದ ರವೀಂದ್ರ ಎಂಬವರ ಮೊಬೈಲ್ ವಾಟ್ಸಪ್ ಖಾತೆ ಹ್ಯಾಕರ್ಗಳಿಂದ ಹೈಜಾಕ್ ಆಗಿತ್ತು, ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ ವಾಟ್ಸಾಪ್ ಸಂಪರ್ಕ ಪಟ್ಟಿಯಲ್ಲಿದ್ದ 10ಕ್ಕೂ ಅಧಿಕ ಆಪ್ತ ಸ್ನೇಹಿತರಿಗೆ ತುರ್ತು ಸಂದೇಶ ರವಾನಿಸಿ ವಂಚಿಸಲು ಯತ್ನಿಸಿದ್ದಾರೆ. ವಂಚಕ, ಅರೆಬರೆ ಇಂಗ್ಲಿಷ್ ನಲ್ಲಿ ನನ್ನ ಯುಪಿಐ ಕೆಲಸ ಮಾಡುತ್ತಿಲ್ಲ ತೀರಾ ತುರ್ತಾಗಿ 60 ಸಾವಿರ ರೂ. ಬೇಕಾಗಿದೆ. ಕೇವಲ ಎರಡು ಗಂಟೆಯೊಳಗೆ ವಾಪಸ್ ಮಾಡುತ್ತೇನೆ ಎಂದು ಅಂಗಲಾಚಿದ್ದಾನೆ. ಈ ಹಣವನ್ನು ಅವಿನಾಶ್ ಕುಮಾರ್ ಎಂಬ ವ್ಯಕ್ತಿಯ 9241745226 ಸಂಖ್ಯೆಗೆ ಕಳುಹಿಸುವಂತೆ ಸೂಚಿಸಿದ್ದಾನೆ. ಆದರೆ ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ಹಾಕಲು ಹೇಳಿದ್ದರಿಂದ ಸಂಶಯಗೊಂಡ ಗೆಳೆಯರು, ಕೂಡಲೇ ಕರೆ ಮಾಡಲು ಯತ್ನಿಸಿದರೂ, ಮೊಬೈಲ್ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಇದು ವಂಚಕರ ಪೂರ್ವಯೋಜಿತ ತಂತ್ರವಾಗಿದ್ದು, ಸಂತ್ರಸ್ತರನ್ನು ಸಂಪರ್ಕಿಸಲು ಸಾಧ್ಯವಾಗದಂತೆ ಮಾಡಿದ್ದರು. ಘಟನೆಯಿಂದ ಆಘಾತಕ್ಕೊಳಗಾದ ರವೀಂದ್ರ ದೇರ್ಲರವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಾರ್ಸೆಲ್ಗೆ ಕಾಲ್ ಬಂದಿತ್ತು
ನಾನು ವಿಜಯ ಕರ್ನಾಟಕ ಪತ್ರಿಕೆಯ ಪುತ್ತೂರು ಕಚೇರಿಯಲ್ಲಿರುವ ವೇಳೆ ಪಾರ್ಸೆಲ್ ಕುರಿತು ಕಾಲ್ ಬಂದಿತ್ತು. ಅದರಲ್ಲಿ ಪಾರ್ಸೆಲ್ ಪಡೆಯಲು ಅಪರಿಚಿತ ನಂಬರ್ಗೆ ಕರೆ ಮಾಡುವಂತೆ ನಾನು ಕಾಲ್ ಮಾಡಿದ್ದೆ. ಅದು ಕರೆ ಸ್ವೀಕರಿಸಿಲ್ಲ. ಆದಾದ ಬಳಿಕ ಮತ್ತೆ ಯಾವುದೇ ಬೇರೆ ನಂಬರ್ಗೆ ಕರೆ ಮಾಡಿದರೂ ಸ್ವಿಚ್ ಆಫ್ ಎಂಬ ಸಂದೇಶ ಕೇಳುತ್ತಿತ್ತು. ಇದೇ ವೇಳೆ ಸ್ಥಳೀಯರೊಬ್ಬರು ನಿಮ್ಮ ವಾಟ್ಸಾಪ್ನಿಂದ ತುರ್ತು ಹಣದ ಬೇಡಿಕೆಯ ಸಂದೇಶ ನನ್ನ ವಾಟ್ಸಪ್ ಗೆ ಬಂದಿದೆ ಎಂದು ಹೇಳಿದಾಗ ನಾನು ಅನುಮಾನಗೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದೆ. ಬಳಿಕ ತನ್ನ ಮೊಬೈಲ್ ಸಂಪರ್ಕ ಸರಿಪಡಿಸಿಕೊಂಡೆ.