ಚಾಟ್ಜಿಪಿಟಿ ನಂಬಬೇಡಿ, ವೈದ್ಯರನ್ನು ಸಂಪರ್ಕಿಸಿ: ಡಾ.ಶ್ರೀಪತಿ ರಾವ್
ಕಂಡಲ್ಲಿ ಉಗುಳುವುದರಿಂದ ಹರಡುವುದು ರೋಗ: ಡಾ.ಶ್ರೀಪ್ರಕಾಶ್
ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕದ ವತಿಯಿಂದ ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪ್ರಗತಿ ಪಾರಾಮೆಡಿಕಲ್ ಸಹಯೋಗದೊಂದಿಗೆ ಆಯೋಜಿಸಿದ ಉಚಿತ ವೈದ್ಯಕೀಯ ಶಿಬಿರ ಆ.6 ರಂದು ಬೊಳುವಾರಿನ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿರುವ ಫಿಯೋನಿಕ್ಸ್ ಕ್ಲಿನಿಕ್ನಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರಿನ ಮಾಜಿ ಅಧ್ಯಕ್ಷ ಡಾ.ಶ್ರೀಪತಿ ರಾವ್, ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತನೇ ಆಳುತ್ತಿರುವ ಚಾಟ್ಜಿಪಿಟಿ ವೈದ್ಯಕೀಯ ಕ್ಷೇತ್ರದ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಕ್ಲೀನಿಕ್ಗಳಿಗೆ ಹೋಗುತ್ತಿದ್ದ ಜನರು ಇಂದು ಚಾಟ್ಜಿಪಿಟಿ ಮೊರೆ ಹೋಗುತ್ತಿರುವುದು ಕಳವಳಕಾರಿ ಸಂಗತಿ. ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಚಾಟ್ಜಿಪಿಟಿಯಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದು ವಿಷಾದನೀಯ ಎಂದರು.

ಪ್ರಸ್ತುತ ದಿನಮಾನಸಗಳಲ್ಲಿ ಇಂದಿನ ವೈದ್ಯರಿಗೆ ಕ್ಲಿನಿಕಲ್ ಮೆಡಿಸಿನ್ ಏನೆಂದು ತಿಳಿದಿಲ್ಲ. ಇದನ್ನು ಕಲಿಸುವ ಶಿಕ್ಷಕರ ಕೊರತೆಯೇ ಇದಕ್ಕೆ ಕಾರಣ. ಹಿಂದಿನ ದಿನಗಳಲ್ಲಿ ಈ ಕ್ಲಿನಿಕಲ್ ಮೆಡಿಕಲ್ ಮೂಲಕ ರೋಗಿಗಳನ್ನು ಗುಣಪಡಿಸುತ್ತಿದ್ದೇವು. ಆದರೆ ಈಗ ಚಾಟ್ಜಿಪಿಟಿ ಮೂಲಕ ಗುಣಪಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಬಂದರೂ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಯೇ ಔಷಧಿ ಪಡೆದುಕೊಳ್ಳಬೇಕು. ಚಾಟ್ಜಿಪಿಟಿ ಔಷಧಿಗಳನ್ನು ನಂಬಬಾರದು ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಮಾತನಾಡಿ, ಭೂಮಿಯಲ್ಲಿ ಹುಟ್ಟಿದ ನಾವು ಗಾಳಿ, ನೀರು, ಆಹಾರ ಎಲ್ಲವನ್ನೂ ಸೇವಿಸುತ್ತೇವೆ. ಹೀಗಾಗಿ ಪರಿಸರವನ್ನು ಸ್ವಚ್ಛವಾಗಿಡಬೇಕು. ಪರಿಸರ ಹದಗೆಟ್ಟರೆ ಮನುಷ್ಯರು ಆರೋಗ್ಯ ಸಮಸ್ಯೆಗೆ ಸಿಲುಕುತ್ತಾರೆ. ಆರೋಗ್ಯವೇ ಭಾಗ್ಯ ಎನ್ನುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರ ಎಷ್ಟು ಸ್ವಚ್ಛವಾಗಿಟ್ಟುಕೊಂಡಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.
ಮನುಷ್ಯನಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ. ಹೀಗಾಗಿ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಜಂಕ್ಫುಡ್ ಸೇವಿಸುವುದನ್ನು ನಿಲ್ಲಿಸಬೇಕು, ಫ್ರಿಡ್ಜ್ನಲ್ಲಿಟ್ಟ ಆಹಾರ ಸೇವಿಸಬಾರದು, ಪೌಷ್ಟಿಕ ಆಹಾರ ಸೇವಿಸಬೇಕು. ಹಿರಿಯರ ಕಾಲದ ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಆ ಮೂಲಕ ನಾವೆಲ್ಲರೂ ಆರೋಗ್ಯಯುತವಾಗಿ ಬಾಳೋಣ ಎಂದರು.
ಉಗುಳುವುದರಿಂದ ಹರಡುವುದು ರೋಗ: ಕಂಡಕಂಡಲ್ಲಿ ಕಸ ಎಸೆಯುವ ಮನುಷ್ಯರು ಎಲ್ಲೆಂದರಲ್ಲಿ ಉಗುಳುವ ದುರಾಭ್ಯಾಸವನ್ನೂ ಹೊಂದಿದ್ದಾರೆ. ಧಾರ್ಮಿಕ ಕೇಂದ್ರಗಳ ಆವರಣ, ರಸ್ತೆ, ಬಸ್ ನಿಲ್ದಾಣ, ಮನೆ ಅಂಗಳ ಸೇರಿದಂತೆ ಅನೇಕ ಕಡೆಗಳಲ್ಲಿ ಉಗುಳುತ್ತಾರೆ. ಇದು ಕಾಯಿಲೆ ಹರಡುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸುವ ಪ್ರಯತ್ನ ಮಾಡಬೇಕಿದೆ. ಇದು ಈಡೇರಿದರೆ ಶೇ.50 ರಷ್ಟು ಕಾಯಿಲೆ ಯುದ್ಧ ಗೆದ್ದಂತೆ ಎಂದು ಡಾ.ಶ್ರೀಪ್ರಕಾಶ್ ಹೇಳಿದರು.
ಫಿಯೋನಿಕ್ಸ್ ಕ್ಲಿನಿಕ್ನ ಡಾ.ಅವಿಲ್ ಗೊನ್ಸಾಲ್ವಿಸ್ ಮತ್ತು ಡಾ.ಅಲೆನ್ ಪಿಂಟೋ ಅವರು ಉಚಿತ ಆರೋಗ್ಯ ತಪಾಸಣೆ, ಬಿಪಿ ಶುಗರ್ ಪರೀಕ್ಷೆ ನಡೆಸಿದರು. ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸಹಕರಿಸಿದರು. ಅಲ್ಲದೆ, ಆರೋಗ್ಯ ಸಮಸ್ಯೆ ಕಂಡುಬಂದವರಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.
ರೋಟರಿ ಕ್ಲಬ್ನ ಶ್ರೀಕಾಂತ್ ಕೊಳತ್ತಾಯ, ಝೆವಿಯರ್ ಡಿ’ಸೋಜಾ, ಎಂ.ಜಿ.ರಫೀಕ್, ಹೆರಾಲ್ಡ್ ಮಾಡ್ತಾ, ರೋಟರ್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ, ಡಾ.ಅವಿಲ್ ತಂದೆ ಅಲ್ವಿನ್ ಗೊನ್ಸಾಲ್ವಿಸ್, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಕಾರ್ಯದರ್ಶಿ ಆದಿತ್ಯ ಭಟ್, ಸಂಘಟನಾ ಕಾರ್ಯದರ್ಶಿ ಅಶ್ವಥ್, ಖಜಾಂಜಿ ಅಕ್ಷತಾ, ಪದಾಧಿಕಾರಿಗಳಾದ ಗೋಪಾಲಕೃಷ್ಣ ಮಾಡಾವು, ಆಸೀಫ್ ಆನೆಮಜಲು, ಚಂದ್ರಕಾಂತ್ ಉರ್ಲಾಂಡಿ, ಪ್ರಜ್ವಲ್ ಬೇಕಲ್, ತಾರನಾಥ್ ಹೊಸವಳಿಕೆ, ಪ್ರೀತಾ, ಜಯಲಕ್ಷ್ಮೀ, ನರೇಶ್ ಜೈನ್, ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶ್ರೀಧರ್ ರೈ ಕೋಡಂಬು ಸ್ವಾಗತಿಸಿ, ಡಾ.ಅವಿಲ್ ಗೊನ್ಸಾಲ್ವಿಸ್ ವಂದಿಸಿದರು. ಕರ್ನಾಟಕ ಪತ್ರಕರ್ತರ ಸಂಘದ ಮಾಜಿ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೆಲು ನಿರೂಪಿಸಿದರು.
ನಿರೀಕ್ಷೆಗೂ ಮೀರಿದ ಸ್ಪಂದನೆ
ನಾವು ಆಯೋಜಿಸಿದ ಚೊಚ್ಚಲ ಉಚಿತ ವೈದ್ಯಕೀಯ ಶಿಬಿರಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರಕಿದೆ ಎಂದು ಫಿಯೋನಿಕ್ಸ್ ಕ್ಲಿನಿಕ್ನ ಡಾ.ಅವಿಲ್ ಗೊನ್ಸಾಲ್ವಿಸ್ ಹೇಳಿದರು. 50 ಮಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಮಾಡಲು ಯೋಜಿಸಲಾಗಿತ್ತು. ಆದರೆ 62 ಮಂದಿ ಈ ಶಿಬಿರವನ್ನು ಸದುಪಯೋಗ ಮಾಡಿಕೊಂಡಿದ್ದಾರೆ ಎಂದರು.