ಸ್ವ-ಸಹಾಯ ಸಂಘದ ಮಹಿಳಾ ಉದ್ಯಮಿಗಳಿಗೆ ವಿಶೇಷ ಕಾರ್ಯಾಗಾರ

0

ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್, ಸೌಜನ್ಯ ಫೌಂಡೇಶನ್, ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡೇ-ಎನ್‌ಆರ್‌ಎಲ್‌ಎಮ್), ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಸಹಯೋಗದಲ್ಲಿ ಸ್ವ ಸಹಾಯ ಸಂಘದ ಮಹಿಳಾ ಉದ್ಯಮಿಗಳಿಗೆ ಆ.6 ರಂದು ವಿಶೇಷ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಾಗಾರ ಉದ್ಘಾಟಿಸಿದ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಎಲ್ಲೂ ನಡೆಸದಂತಹ ಕಾರ್ಯಕ್ರಮವನ್ನು ಸುದ್ದಿ ಸಮೂಹ ಸಂಸ್ಥೆ ನಡೆಸುತ್ತಿದೆ. ಮಹಿಳೆಯರ ಆರ್ಥಿಕ ಸ್ಥಿತಿಗತಿ ಸುಧಾರಿಸಲು ನೆರವಾಗುವ ನಿಟ್ಟಿನಲ್ಲಿ ಅದರ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಪ್ರಯತ್ನಿಸುತ್ತಿದ್ದಾರೆ ಎಂದರು.

ಉದ್ಯಮ ಪ್ರಾರಂಭಿಸಲು ಬಂಡವಾಳ ಕಡಿಮೆ ಇದೆ ಎಂದು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬೇಡಿ. ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಿದ ಉದ್ಯಮಗಳು ಇಂದು ಉನ್ನತ ಮಟ್ಟಕ್ಕೆ ಬೆಳೆದು ನಿಂತಿವೆ. ಉದ್ಯಮಕ್ಕೆ ತೆಗೆದ ಸಾಲವನ್ನು ಉದ್ಯಮಕ್ಕೇ ಬಳಸಬೇಕು. ಸ್ಟಾರ್ಟಪ್ ಹಾಗೂ ಯುವ ಉದ್ಯಮಿಗಳಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

ಬ್ಯಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ಅಮಿತ್ ಶೆಟ್ಟಿ ಮಾತನಾಡಿ, ಇಂತಹ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು. ಯಾವುದೇ ಉದ್ಯಮವನ್ನು ಪ್ರಾರಂಭಿಸಬೇಕಾದರೆ ಸಣ್ಣ ಬಂಡವಾಳದಲ್ಲಿ ಪ್ರಾರಂಭಿಸಿ. ಬಳಿಕ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು. ನಿಮ್ಮ ಯಾವುದೇ ಉದ್ಯಮಕ್ಕೆ ಬ್ಯಾಂಕ್ ಆಫ್ ಬರೋಡಾ ಬೆಂಬಲಿಸುತ್ತದೆ. ಯಾವುದೇ ಮಾಹಿತಿ ಬೇಕಿದ್ದರೂ ನಮ್ಮ ಸ್ಥಳೀಯ ಶಾಖೆಯನ್ನು ಸಂಪರ್ಕಿಸಿ ಎಂದರು.

ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮಾತನಾಡಿ, ಸುದ್ದಿ ಸಮೂಹ ಸಂಸ್ಥೆ ಮಹಿಳಾಭಿವೃದ್ಧಿಗೆ ಶ್ರಮಿಸುತ್ತಿದೆ. ಕೃಷಿ ಮತ್ತು ಉದ್ಯಮ ಪ್ರಾರಂಭಿಸುವವರಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಉದ್ಯಮ ಪ್ರಾರಂಭಿಸುವ ಮುನ್ನ ಮಾರುಕಟ್ಟೆಯ ಜ್ಞಾನ ಪಡೆಯುವುದು ಅವಶ್ಯಕ. ಕಡಿಮೆ ಬಂಡವಾಳ ಮತ್ತು ಕಡಿಮೆ ಜಾಗದಲ್ಲಿ ಪ್ರಾರಂಭಿಸಿದ ಉದ್ಯಮಗಳಲ್ಲೂ ಉತ್ತಮ ಆದಾಯ ಗಳಿಸಬಹುದು. ಸೌಜನ್ಯ ಫೌಂಡೇಶನ್ ಮೂಲಕ ತರಬೇತಿ ಪಡೆದವರು ಉತ್ಪಾದಿಸುವ ಉತ್ಪನ್ನಗಳ ಮಾರುಕಟ್ಟೆಗೆ ನಾವು ಸಹಕರಿಸುತ್ತೇವೆ ಎಂದರು.

ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸೌಜನ್ಯ ಫೌಂಡೇಶನ್ ಸೀಮಾ ಭಟ್ ಅವರು, ಎರೆಹುಳ ಕಂಪೋಸ್ಟ್ ಮತ್ತು ಆತ್ಮನಿರ್ಭರ್ ಭಾರತದ ಬಗ್ಗೆ ಮಾಹಿತಿ ನೀಡಿದರು. ದೇಸಿ ದನಗಳನ್ನು ಸಾಕಲು ಆಸಕ್ತರಿದ್ದರೆ ಅಂತರವರಿಗೆ ಎರೆಹುಳ ಗೊಬ್ಬರ ತಯಾರಿಕೆ ಬಗ್ಗೆ ತರಬೇತಿ ನೀಡುತ್ತೇವೆ. ದೇಸಿ ಹಸುವಿನ ಗೊಬ್ಬರ ಬಳಸಿ ಮಾಡಿದ ಎರೆಹುಳ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಉದ್ಯಮ ಮಾಡುತ್ತಿದ್ದು ಅಥವಾ ಕಾರಣಾಂತರಗಳಿಂದ ಉದ್ಯಮ ನಿಂತುಹೋಗಿ ಮತ್ತೆ ಪ್ರಾರಂಭಿಸಲು ಚಿಂತಿಸುತ್ತಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದರು.

ಸುದ್ದಿ ಮಾಹಿತಿ ಟ್ರಸ್ಟ್‌ನ ಆಶಿಶ್ ಮಾತನಾಡಿ, ಯುವ ಉದ್ಯಮಿಗಳಿಗೆ ಬೆಂಬಲಿಸುವುದು ಮತ್ತು ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಸೌಜನ್ಯ ಫೌಂಡೇಶನ್ ಜೊತೆ ಸೇರಿಕೊಂಡು ನಾವು ಎರೆಹುಳ ಗೊಬ್ಬರದ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಲಿದ್ದೇವೆ. ಉತ್ಪನ್ನಗಳನ್ನು ಹೇಗೆ ಪ್ಯಾಕ್ ಮಾಡಬೇಕು, ಲೇಬಲ್, ಪ್ಯಾಕೇಟ್ ಡಿಸೈನ್ ಇತ್ಯಾದಿಗಳ ಬಗ್ಗೆಯೂ ಮಾಹಿತಿ ನೀಡಲಿದ್ದೇವೆ ಎಂದರು.

ಪುತ್ತೂರು ತಾಲೂಕು ಪಂಚಾಯತ್‌ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ. ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮಗಳಲ್ಲಿ ನಡೆಸಬೇಕು. ಎಲ್ಲರಿಗೂ ಸ್ವ ಉದ್ಯಮದ ಬಗ್ಗೆ ಅರಿವು ಮೂಡಿಸಬೇಕು. ಸರ್ಕಾರ ಮತ್ತು ಬ್ಯಾಂಕ್‌ಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.

ಕೃಷಿ ಕ್ಷೇತ್ರ ಅಧಿಕಾರಿ ಅಜಯ್ ಮತ್ತು ಬ್ಯಾಂಕ್ ಆಫ್ ಬರೋಡಾದ ಡಯಾನ ಅವರು ಬ್ಯಾಂಕ್ ಸಾಲಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈಶ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಅಧ್ಯಕ್ಷೆ ಮಮತಾ, ಅರಿವು ಕೃಷಿ ಕೇಂದ್ರದ ಚೈತ್ರಾ, ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲ್ ಹಾಗೂ ಸುದ್ದಿ ಬಿಡುಗಡೆ ಬೆಳ್ತಂಗಡಿ ಸಿಇಒ ಸಿಂಚನಾ ಊರುಬೈಲ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಗ್ರಾಮಗಳ ಸ್ವ ಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು. ಜಗತ್ ಕೆ. ಸ್ವಾಗತಿಸಿ, ತಾಲೂಕು ವ್ಯವಸ್ಥಾಪಕಿ (ಕೃಷಿಯೇತರ) ನಳಿನಾಕ್ಷಿ ವಂದಿಸಿದರು. ವಲಯ ಮೇಲ್ವಿಚಾರಕಿ ನಮಿತಾ ಕೆ. ನಿರೂಪಿಸಿದರು.

ಬ್ಯಾಂಕ್ ಆಫ್ ಬರೋಡಾ ಪುತ್ತೂರು ಶಾಖೆಯಿಂದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗಾಗಿ ಕೋಡಿಂಬಾಡಿಯ ವಿದ್ಯಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಮತ್ತು ಬೆಳಂದೂರಿನ ಚೇತನಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ತಲಾ 20 ಲಕ್ಷ ರೂಪಾಯಿ ಸಾಲ ಮಂಜೂರಾತಿ ಮಾಡಲಾಗಿದ್ದು, ಇದರ ಆದೇಶ ಪತ್ರವನ್ನು ಕಾರ್ಯಾಗಾರದಲ್ಲಿ ಸಂಘದ ಪ್ರಮುಖರಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here