ಆರೋಪಿಗಳ ಬಂಧನಕ್ಕೆ ಜರ್ನಲಿಸ್ಟ್ ಯೂನಿಯನ್ ಆಗ್ರಹ
ಪುತ್ತೂರು: ಕಡಬ ಮರ್ದಾಳದ ಸಂತೋಷ್ ಸಹಿತ ಮೂವರು ಯೂಟ್ಯೂಬರ‍್ಸ್‌ಗಳಿಗೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸಮೀಪದ ಪಾಂಗಾಳ ರಸ್ತೆಯ ಬಳಿ ಆ.6ರಂದು ಸಂಜೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಮತ್ತು ಬಳಿಕದ ಬೆಳವಣಿಗೆಯಲ್ಲಿ ಉಜಿರೆಯಲ್ಲಿ ನ್ಯೂಸ್ ಚಾನೆಲ್ ವರದಿಗಾರರಿಬ್ಬರ ಮೇಲೆ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ.
ಯೂಟ್ಯೂಬರ್‌ಗಳಾದ, ಯುನೈಟೆಡ್ ಮೀಡಿಯಾದ ಅಭಿಷೇಕ್, ಕುಡ್ಲ ರಾಂಪೇಜ್‌ನ ಅಜೇಯ್ ಅಂಚನ್, ಸಹನ್ ಮತ್ತು ಸಂಚಾರಿ ಸ್ಟುಡಿಯೋದ ಸಂತೋಷ್ ಮರ್ದಾಳ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಗೊಂಡವರನ್ನು ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ಧರ್ಮಸ್ಥಳ ಠಾಣಾ ಮುಂಭಾಗದಲ್ಲಿ ಜನರು ಜಮಾಯಿಸಿದ್ದು, ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹೆಚ್ಚುವರಿ ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದ್ದು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ಘಟನೆಯ ಬೆನ್ನಲ್ಲೆಯೇ ಈ ರೀತಿ ಹಲ್ಲೆ ನಡೆಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಪ್ರಜಾಪ್ರಭುತ್ವ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರು ಫೇಸ್ಬುಕ್ ಲೈವ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳ ಠಾಣಾ ಎದುರು ಜಮಾಯಿಸಿದ ಜನರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ, ಎಸ್‌ಪಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ರಾತ್ರಿ ವೇಳೆ ಉಜಿರೆಯ ಬೆನಕ ಆಸ್ಪತ್ರೆಯ ಮುಂಭಾಗ ಸುವರ್ಣ ನ್ಯೂಸ್ ವರದಿಗಾರರಾದ ಹರೀಶ್ ಮತ್ತು ನವೀನ್ ಎಂಬವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ. ನಾಲ್ವರು ಯೂಟ್ಯೂಬರ‍್ಸ್‌ಗೆ ಧರ್ಮಸ್ಥಳದ ಭಕ್ತರು ಮತ್ತು ಸುವರ್ಣ ನ್ಯೂಸ್ ಚಾನೆಲ್ ವರದಿಗಾರರಿಗೆ ತಿಮರೋಡಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಉಜಿರೆಯ ಬೆನಕ ಆಸ್ಪತ್ರೆಯ ಮುಂಭಾಗ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಮಾಧ್ಯಮದವರಿಗೆ ಹಲ್ಲೆ-ಕೇಸು: ಗುಂಪು ಸೇರಿದವರ ವಿರುದ್ಧವೂ ಪ್ರಕರಣ
ಧರ್ಮಸ್ಥಳದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಐಜಿ ಅಮಿತ್ ಸಿಂಗ್, ಎಸ್‌ಪಿ ಡಾ.ಅರುಣ್, ಅಡಿಷನಲ್ ಎಸ್‌ಪಿ ರಾಜೇಂದ್ರ, ಡಿವೈಎಸ್‌ಪಿ ವಿಜಯಪ್ರಸಾದ್ ರಾತ್ರಿ ಧರ್ಮಸ್ಥಳ ಠಾಣೆಗೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದೆ. ಸೇರಿದ್ದ ಜನರನ್ನು ಚದುರಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಮತ್ತು ಅವರ ಎರಡು ವಾಹನಗಳಿಗೆ ಹಾನಿ ನಡೆಸಿದ ಬಗ್ಗೆ ಹಾಗೂ ಖಾಸಗಿ ನ್ಯೂಸ್ ಚಾನೆಲ್‌ನ ವರದಿಗಾರನ ಮೇಲೆ ನಡೆದ ಹಲ್ಲೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗುತ್ತಿದೆ. ಧರ್ಮಸ್ಥಳ ಪಾಂಗಾಳದಲ್ಲಿ ಲಾಠಿ ಚಾರ್ಜ್ ನಡೆದ ಸ್ಥಳದಲ್ಲಿ, ಧರ್ಮಸ್ಥಳ ಪೊಲೀಸ್ ಠಾಣಾ ಆವರಣದಲ್ಲಿ ಮತ್ತು ಆಸ್ಪತ್ರೆಯ ಮುಂದೆ ಕಾನೂನುಬಾಹಿರ ಗುಂಪು ಸೇರಿರುವ ಬಗ್ಗೆ ಪ್ರಕರಣ ದಾಖಲಿಸಲಾಗುತ್ತಿದೆ.
ಹಲ್ಲೆಗೊಳಗಾದವರು ಚಿಕಿತ್ಸೆಗಾಗಿ ದಾಖಲಾಗಿರುವ ಆಸ್ಪತ್ರೆಯ ವೈದ್ಯರೊಂದಿಗೆ ವಿಚಾರಿಸಲಾಗಿದ್ದು ಪ್ರಾಥಮಿಕ ಆರೋಗ್ಯ ತಪಾಸಣೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿರುವುದು ಕಂಡುಬಂದಿಲ್ಲ ಎಂದು ಮೌಖಿಕವಾಗಿ ತಿಳಿಸಿರುತ್ತಾರೆ. ಈ ದಿನ ನಡೆದ ಘಟನೆಗಳಿಗೆ ಸಂಬಂಽಸಿದ ವಿಡಿಯೋಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಆರೋಪಿಗಳ ಬಂಧನಕ್ಕೆ ಜರ್ನಲಿಸ್ಟ್ ಯೂನಿಯನ್ ಆಗ್ರಹ
ಧರ್ಮಸ್ಥಳ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ಎಸ್‌ಐಟಿ ನಡೆಸುತ್ತಿರುವ ತನಿಖೆ ಬಗ್ಗೆ ವರದಿ ಮಾಡಲು ತೆರಳಿದ್ದ ಯೂಟ್ಯೂಬ್ ಮಾಧ್ಯಮ ಹಾಗೂ ಟಿವಿ ವಾಹಿನಿ ವರದಿಗಾರರು,ಕ್ಯಾಮರಾಮೆನ್‌ಗಳ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.