ಸಂಶುದ್ದೀನ್ ಗಡಿಪಾರಿಗೆ ಸಿದ್ಧತೆ
ಪುತ್ತೂರು: ಕಲ್ಲೇರಿಯಲ್ಲಿರುವ ಬೆಂಗಳೂರು ಅಯ್ಯಂಗಾರ್ ಬೇಕರಿಯ ಮಾಲಕ ಕೆ.ಎನ್. ಶರತ್ ಕುಮಾರ್‌ರವರ ಮನೆಗೆ ನುಗ್ಗಿ ಕಳವು ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರಾಯದ ಸಂಶುದ್ದೀನ್, ನವಾಝ್ ಮಹಮ್ಮದ್ ಮತ್ತು ಸಯ್ಯದ್ ನಿಜಾಂ ತಂಞಳ್ ಅಪರಾಧಿಗಳು ಎಂದು ಪರಿಗಣಿಸಿ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆಯ ವಿವರ:
ಕರಾಯ ನಿವಾಸಿಗಳಾದ ಸಂಶುದ್ದೀನ್, ನವಾಝ್ ಮಹಮ್ಮದ್ ಮತ್ತು ಸಯ್ಯದ್ ನಿಜಾಂ ತಂಳ್ ಎಂಬವರು 2021ರ ಜನವರಿ 14ರಂದು ರಾತ್ರಿ 7.30ರ ವೇಳೆಗೆ ಕಲ್ಲೇರಿಯಲ್ಲಿರುವ ಬೆಂಗಳೂರು ಅಯ್ಯಂಗಾರ್ ಬೇಕರಿಯ ಮಾಲಕರಾದ ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಜಾವಗಲ್ ಹೋಬಳಿಯ ಕೋಳಗುಂದದವರಾದ ಕೆ.ಎನ್. ಶರತ್ ಕುಮಾರ್‌ರವರ ಕರಾಯದಲ್ಲಿರುವ ಮನೆಯ ಪ್ರವೇಶ ದ್ವಾರದ ಬಾಗಿಲನ್ನು ಕಬ್ಬಿಣದ ರಾಡ್‌ನಿಂದ ತೆರೆದು ಮನೆಯ ಒಳಗೆ ಪ್ರವೇಶಿಸಿ ಬೆಡ್‌ರೂಮಿನ ಗೋದ್ರೇಜ್ ಕಪಾಟಿನಲ್ಲಿದ್ದ 26.73 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 61.59 ಗ್ರಾಂ ತೂಕದ ಲಕ್ಷ್ಮಿ ಪದಕ ಇರುವ ಚಿನ್ನದ ಎರಡು ಎಲೆಯ ಮುತ್ತಿನ ಸರಗಳು, 15.11 ಗ್ರಾಂ. ತೂಕದ ಕೆಂಪು ಕಲ್ಲು ಇರುವ ಓಲೆ ಜುಮಕಿ, 1.91 ಗ್ರಾಂ. ತೂಕದ ಕಿವಿಯ ಕಪ್ಪು ಕಲ್ಲುಗಳಿರುವ ಚಿನ್ನದ ಕಿವಿಯೋಲೆ, 5.89 ಗ್ರಾಂ. ತೂಕದ ಮುತ್ತಿನ ಹರಳಿನ ಉಂಗುರ, 3.79 ಗ್ರಾಂ. ತೂಕದ ಮುತ್ತಿನ ಹರಳಿನ ಉಂಗುರ, 2.09 ಗ್ರಾಂ ತೂಕದ ಗಣೇಶ ಮತ್ತು ಲಕ್ಷ್ಮಿ ದೇವರ ಚಿತ್ರ ಇರುವ ಚಿನ್ನದ ಪದಕ ಎರಡು, ಎರಡು ಚಿಕ್ಕ ಬೆಳ್ಳಿಯ ದೀಪಗಳು, ಅಲ್ಲದೆ ಸ್ಟೀಲ್ ಬಾಕ್ಸ್‌ನಲ್ಲಿದ್ದ ನಗದು 10 ಸಾವಿರ ರೂ ಸೇರಿದಂತೆ ಒಟ್ಟು 3,95,೦೦೦ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಐಪಿಸಿ 454, 457 ಮತ್ತು 380ರಡಿಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸಂಶುದ್ದೀನ್, ನವಾಝ್ ಮಹಮ್ಮದ್ ಮತ್ತು ಸಯ್ಯದ್ ನಿಜಾಂ ತಂಞಳ್‌ರವರನ್ನು ಬಂಧಿಸಿದ್ದರು.
ಆರೋಪಿಗಳು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ತನಿಖೆ ಪೂರ್ಣಗೊಳಿಸಿದ ತನಿಖಾಽಕಾರಿಯಾಗಿದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಪೂರ್ಣಗೊಳಿಸಿದ ಬೆಳ್ತಂಗಡಿಯ ಪ್ರಧಾನ ಹಿರಿಯ ನ್ಯಾಯಾಧಿಶರು ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಽಶರಾದ ಮನು ಬಿ.ಕೆ. ಅವರು ಸಾಕ್ಷಿ ಅಧಾರಗಳನ್ನು ಪರಿಶೀಲಿಸಿ, ಆರೋಪಿಗಳು ದೋಷಿ ಎಂದು ತೀರ್ಪು ನೀಡಿದ್ದಾರೆ. ಆರೋಪಿಗಳಿಗೆ 380 ಐಪಿಸಿ ಅಡಿಯ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಸಾದಾ ಆರು ತಿಂಗಳ ಕಾರಾಗೃಹ ಶಿಕ್ಷೆ, 454 ಐಪಿಸಿ ಆಡಿಯ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ, 457 ಐಪಿಸಿ ಅಡಿಯ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ಐದು ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಽಸಲಾಗಿದೆ. ಐಪಿಸಿ 357ರಡಿಯಲ್ಲಿ ಮನೆಯ ಮಾಲಕ ಕೆ.ಎನ್. ಶರತ್ ಕುಮಾರ್ ಅವರಿಗೆ ದಂಡದ ಮೊತ್ತ 15 ಸಾವಿರ ರೂ ಪಾವತಿಸುವಂತೆಯೂ ತೀರ್ಪಿನಲ್ಲಿ ಆದೇಶಿಸಲಾಗಿದೆ. ಕಳವಾದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಈಗಾಗಲೇ ಮನೆಯ ಮಾಲಕರಿಗೆ ಒಪ್ಪಿಸಲಾಗಿದೆ.ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು.

ಕರಾಯದಲ್ಲಿ ನಡೆದಿರುವ ಕಳವು ಪ್ರಕರಣ ಸೇರಿದಂತೆ ವಿವಿಧ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಂಶುದ್ದೀನ್‌ನನ್ನು ದ.ಕ. ಜಿಲ್ಲೆಯಿಂದ ಗಡೀಪಾರು ಮಾಡಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.