ವಿದ್ಯಾರ್ಥಿ ಜೀವನದಲ್ಲಿಯೇ ಗುರಿ ನಿರ್ಧರಿಸಬೇಕು : ಕರ್ನಲ್ ಶರತ್ ಭಂಡಾರಿ
ಪುತ್ತೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಪ್ರೇರಣೆ ಅತ್ಯಂತ ಅಗತ್ಯ. ಒಳ್ಳೆಯ ಉದ್ಯೋಗದ ಮೂಲಕ ಅತ್ಯುತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಿರುವಾಗಲೇ ಯೋಚಿಸಿ ಗುರಿ ನಿಶ್ಚಯಿಸಿ ಮುಂದುವರಿಯಬೇಕು. ಸ್ಪಷ್ಟವಾದ ಲಕ್ಷ್ಯ, ಪೋಷಕರ – ಅಧ್ಯಾಪಕರ ಮಾರ್ಗದರ್ಶನ, ನಿರಂತರ ಸ್ವ ಪ್ರಯತ್ನ ಇದ್ದಾಗ ಸಾಧನೆ ಸಾಧ್ಯವಾಗುತ್ತದೆ ಎಂದು ವಿಶ್ರಾಂತ ಬಾರತೀಯ ಸೇನೆಯ ವಿಶ್ರಾಂತ ಯೋಧ ಕರ್ನಲ್ ಶರತ್ ಭಂಡಾರಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಬುಧವಾರ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಸೈನ್ಯಕ್ಕೆ ಸೇರುವ ವಿಧಾನ, ಮಿಲಿಟರಿಗೆ ಸೇರಿದ ನಂತರ ಸಿಗುವ ಗೌರವ, ಸೌಲಭ್ಯ, ನಿವೃತ್ತರಾದ ನಂತರ ಸಿಗುವ ಸವಲತ್ತುಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರಲ್ಲದೆ ಮಿಲಿಟರಿಗೆ ಹೋದರೆ ಸಾಯುತ್ತೇವೆ ಎನ್ನುವ ಅಂಜಿಕೆ ಬೇಡ. ಧೈರ್ಯದಿಂದ ದೇಶ ಸೇವೆ ಮಾಡುವುದಲ್ಲದೆ ದೇಶ ರಕ್ಷಣೆ ಮಾಡಬೇಕು. ಸೇನೆಯಿಂದ ನಿವೃತ್ತರಾದ ನಂತರ ಸಮಾಜ ಸೇವೆ ಮಾಡಿ ಬದುಕಿನ ಸಾರ್ಥಕ್ಯ ಕಂಡುಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಪ್ರತಿಯೊಬ್ಬರೂ ಪಾರಂಪರಿಕ ಶಿಕ್ಷಣದ ಜೊತೆಗೆ ಮಿಲಿಟರಿ ಶಿಕ್ಷಣ ಪಡೆಯುವಂತಾಗಬೇಕು. ಭಾರತೀಯ ಮಿಲಿಟರಿ ಎಂಬುದು ಭ್ರಷ್ಟಚಾರ ಇಲ್ಲದ ಅತ್ಯಂತ ಪವಿತ್ರ ಕ್ಷೇತ್ರ. ಯಾವುದೇ ಪದವಿ ಓದಿದರೂ ಸೇನೆಗೆ ಸೇರುವ ಪ್ರಯತ್ನ ಮಾಡಿ ಸ್ವಲ್ಪ ಸಮಯವಾದರೂ ದೇಶ ಸೇವೆ ಮಾಡಬೇಕು ಎಂದು ಕರೆನೀಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ, ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶ್ರೀದೇವಿ, ಅನನ್ಯ, ಸಮನ್ವಿಕಾ, ಸೃಷ್ಟಿ, ನಿರೀಕ್ಷಾ ಪ್ರಾರ್ಥಿಸಿದರು. ಮುಕ್ತಾ ರೈ ಸ್ವಾಗತಿಸಿ ಪ್ರತೀತಾ ವಂದಿಸಿ, ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ ಸಹಕರಿಸಿದರು.