ಆಹಾರ ವಿತರಣೆ, ದಾಖಲಾತಿ ನಿರ್ವಹಣೆಯೊಂದೇ ಕೆಲಸ
ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಸಮಯವೇ ಇಲ್ಲ…!?
ಗರ್ಭಿಣಿ, ಬಾಣಂತಿಯರಿಗೆ ಗ್ರಾಂ ಲೆಕ್ಕದಲ್ಲಿ ಆಹಾರ ಕೊಡುವ ಬದಲು ಪೌಷ್ಠಿಕಾಂಶ ಪದಾರ್ಥಗಳನ್ನು ವಿತರಿಸಿ-ಆಗ್ರಹ
ಪುತ್ತೂರು: ಅಂಗನವಾಡಿಗಳ ಮೂಲಕ ಗರ್ಭಿಣಿ, ಬಾಣಂತಿಯರಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶ ವಿತರಣೆಯನ್ನು ಮಾಡಲು ಸರಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು ಅದರಂತೆ ಆಹಾರ ವಿತರಣೆಯಾಗುತ್ತಿದೆ. ಆದರೆ ಆಹಾರ ವಿತರಣೆಯ ಬಳಿಕ ಎಫ್ಆರ್ಎಕ್ಸ್ ಅಂದರೆ ಆಹಾರ ಪಡೆದುಕೊಂಡ ಪ್ರತಿಯೊಂದು ಮಗುವಿನ ಹಾಗೂ ಗರ್ಭಿಣಿಯರ, ಬಾಣಂತಿಯರ ಪೇಸ್ಕ್ಯಾಪ್ಚರ್ ಫೋಟೋ ತೆಗೆದು ಮೊಬೈಲ್ ಮೂಲಕ ದಾಖಲಾತಿಯನ್ನು ಇಲಾಖೆಗೆ ಸಲ್ಲಿಸುವ ಕೆಲಸ ಆಗಬೇಕಾಗಿರುವುದರಿಂದ ಅಂಗನವಾಡಿ ಶಿಕ್ಷಕಿಯರಿಗೆ ಪ್ರತಿ ದಿನ ಇದೇ ಕೆಲಸ ಆಗುತ್ತಿದೆ. ಅದರಲ್ಲೂ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ದಾಖಲಾತಿ ಅಪ್ಲೋಡು ಕೂಡ ಕಷ್ಟವಾಗುತ್ತಿದೆ. ಆದ್ದರಿಂದ ಅಂಗನವಾಡಿಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಪೂರ್ವ ಶಿಕ್ಷಣ ಕೊಡಿಸಲು ಶಿಕ್ಷಕಿಯರಿಗೆ ಸಮಯವೇ ಸಾಲುತ್ತಿಲ್ಲ ಎಂಬ ಕೂಗು ಕೆದಂಬಾಡಿ ಗ್ರಾಮಸಭೆಯಲ್ಲಿ ಕೇಳಿಬಂತು. ಗ್ರಾಮಸ್ಥರಾದ ಅಶ್ರಫ್ ಸಾರೆಪುಣಿ ಎಂಬವರು ಕೇಳಿದ ಪ್ರಶ್ನೆಯೊಂದಕ್ಕೆ ಅಂಗನವಾಡಿ ಶಿಕ್ಷಕಿ ತಾರಾ ಬಲ್ಲಾಳ್ರವರು ಪ್ರತಿಕ್ರಿಯೆ ನೀಡಿದರು.
ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆಯವರ ಅಧ್ಯಕ್ಷತೆಯಲ್ಲಿ ಆ.4 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸುರೇಶ್ರವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಅಂಗನವಾಡಿಗಳಲ್ಲಿ ಶಿಕ್ಷಕಿಯರು ಮೊಬೈಲ್ನಲ್ಲೇ ಬ್ಯುಸಿಯಾಗಿರುತ್ತಾರೆ ಎಂಬ ಮಾತೊಂದು ಸಭೆಯಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಶಿಕ್ಷಕಿ ತಾರಾ ಬಲ್ಲಾಳ್ರವರು, ನಮ್ಮ ಪ್ರಸ್ತುತ ವ್ಯವಸ್ಥೆ ಹೀಗಿದೆ ಸರಕಾರದ ಆದೇಶದಂತೆ ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶ ವಿತರಣೆ ಮಾಡಲಾಗುತ್ತಿದ್ದು ಹೀಗೆ ವಿತರಣೆ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ಮಗುವಿನ ಹಾಗೇ ಗರ್ಭಿಣಿ, ಬಾಣಂತಿಯರ ಪೇಸ್ಕ್ಯಾಪ್ಚರ್ ಫೋಟೋ ದಾಖಲೆ(ಎಫ್ಆರ್ಎಕ್ಸ್)ಯನ್ನು ನಾವು ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಕೆಲವೊಂದು ಕಡೆಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ತುಂಬಾನೇ ಇದೆ. ಹೀಗಿರುವಾಗ ಬಹಳಷ್ಟು ಕಷ್ಟವಾಗುತ್ತದೆ ನಾವು ಇಡೀ ದಿನ ಮೊಬೈಲ್ನಲ್ಲೇ ಇರಬೇಕಾಗುತ್ತದೆ ಇದರಿಂದ ಅಂಗನವಾಡಿ ವಿದ್ಯಾರ್ಥಿಗಳ ಶಾಲಾ ಪೂರ್ವ ಶಿಕ್ಷಣಕ್ಕೆ ಸಮಯವೇ ಸಿಗುತ್ತಿಲ್ಲ ನಾವೇನು ಮಾಡೋದು? ನಮ್ಮನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ, ನಾವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇವೆ. ಆದರೆ ಈ ರೀತಿಯ ತೊಂದರೆಗಳಿಂದ ಕಷ್ಟವಾಗುತ್ತಿದೆ ಎಂಬ ವಿಚಾರವನ್ನು ಸಭೆಯ ಮುಂದಿಟ್ಟರು.
ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಮತ್ತಷ್ಟು ತೊಂದರೆ…!
ಕೆಲವೊಂದು ಕಡೆಗಳಲ್ಲಿ ಅದರಲ್ಲೂ ಹಳ್ಳಿ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಹಳಷ್ಟಿದೆ. ಹೀಗಿರುವಾಗ ಫೋಟೋ ಕ್ಯಾಪ್ಚರ್ ಮಾಡಿ ಅದನ್ನು ಇಲಾಖೆಗೆ ಕಳಿಸಿಕೊಡುವುದೇ ಸಾಹಸವಾಗುತ್ತದೆ. ಕೆಲವೊಂದು ದಾಖಲಾತಿ ಪೂರ್ಣಗೊಳ್ಳದೇ ಇದ್ದರೆ ಮರುದಿನ ಗರ್ಭಿಣಿ, ಬಾಣಂತಿಯರನ್ನು ಅಂಗನವಾಡಿಗೆ ಕರೆಸಿಕೊಳ್ಳಬೇಕಾಗುತ್ತದೆ. ಇದಲ್ಲದೆ ಅವರುಗಳು ಬಂದು ಅಂಗನವಾಡಿಗಳಲ್ಲಿ ಇದಕ್ಕಾಗಿಯೇ ಕೂತುಕೊಳ್ಳಬೇಕಾದ ಪರಿಸ್ಥಿತಿ ಕೂಡ ಇದೆ ಎಂದ ಅಂಗನವಾಡಿ ಶಿಕ್ಷಕಿ ತಾರಾ ಬಲ್ಲಾಳ್ರವರು ಒಟ್ಟಿನಲ್ಲಿ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡಲು ನಮಗೆ ಸಮಯವೇ ಸಾಕಾಗುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಉದ್ಯಮಿ ನಾರಾಯಣ ಪೂಜಾರಿ ಕುರಿಕ್ಕಾರರವರು ಎಲ್ಲಾ ಕಡೆಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಆದರೆ ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಸರಕಾರಿ ಕಛೇರಿ,ಬ್ಯಾಂಕ್, ರೇಷನ್ ಅಂಗಡಿ ಹೀಗೆ ಎಲ್ಲಿಗೆ ಹೋದರು ನೆಟ್ವರ್ಕ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ತಿಳಿಸಿದರು. ಇದಕ್ಕೆ ಗ್ರಾಪಂ ಸದಸ್ಯ ರತನ್ ರೈ ಕುಂಬ್ರರವರು ಉತ್ತರಿಸಿದ ಈಗಾಗಲೇ ಕೆದಂಬಾಡಿ ಗ್ರಾಮದಲ್ಲಿರುವ ನೆಟ್ವರ್ಕ್ ಸಮಸ್ಯೆ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರಕಾರಕ್ಕೆ ತಿಳಿಸುವ ಪ್ರಯತ್ನ ಆಗಿದೆ ಎಂದು ತಿಳಿಸಿದರು.
ಗರ್ಭಿಣಿ, ಬಾಣಂತಿಯರಿಗೆ ಗ್ರಾಂ ಲೆಕ್ಕದಲ್ಲಿ ಪೌಷ್ಟಿಕಾಂಶ ವಿತರಣೆ…!?
ಅಂಗನವಾಡಿಗಳಲ್ಲಿ ಬಾಣಂತಿ, ಗರ್ಭಿಣಿಯರಿಗೆ ಒಂದಷ್ಟು ಬಗೆಯ ಪೌಷ್ಟಿಕ ಆಹಾರಗಳನ್ನು ಗ್ರಾಂ ಲೆಕ್ಕದಲ್ಲಿ ಕೊಡಲಾಗುತ್ತದೆ. ಆದರೆ ಈ ಗ್ರಾಂ ಲೆಕ್ಕದಲ್ಲಿ ಕೊಡುವ ಬದಲು ಒಳ್ಳೆಯ ಪೌಷ್ಟಿಕಾಂಶ ಇರುವ ಆಹಾರಗಳನ್ನು ಕೊಟ್ಟರೆ ಒಳ್ಳೆಯದು, ಗ್ರಾಂ ಲೆಕ್ಕದ ಆಹಾರ ಪದಾರ್ಥಗಳನ್ನು ಕಟ್ಟಿಕೊಂಡು ಬರುವುದೇ ದೊಡ್ಡ ಕೆಲಸವಾಗಿದೆ ಎಂದು ಅಶ್ರಫ್ ಸಾರೆಪುಣಿ ಹೇಳಿದರು. ಇದಕ್ಕೆ ಉತ್ತರಿಸಿದ ಅಂಗನವಾಡಿ ಶಿಕ್ಷಕಿ ತಾರಾ ಬಲ್ಲಾಳ್ರವರು ಪ್ರಸ್ತುತ 16 ಬಗೆಯ ಆಹಾರಗಳನ್ನು ಕೊಡಲಾಗುತ್ತಿದೆ. ಇದನ್ನು ಕೂಡ ತೂಕ ಮಾಡಿ ಕಟ್ಟಿ ಕೊಡುವುದೇ ದೊಡ್ಡ ಕೆಲಸವಾಗಿದೆ. ನಮ್ಮಲ್ಲಿ ಡಿಜಿಟಲ್ ತೂಕದ ಯಂತ್ರ ಇಲ್ಲ ಕಲ್ಲಿನ ತೂಕದ ಯಂತ್ರ ಇರುವುದು ಈ ಗ್ರಾಂ ಲೆಕ್ಕವನ್ನು ತೂಕ ಮಾಡಿ ಕಟ್ಟಿ ಕೊಡಲಿಕ್ಕಾಗಿಯೇ ಬಹಳಷ್ಟು ಸಮಯ ಬೇಕಾಗುತ್ತದೆ ಎಂದರು.
ಆನೆ ಹಾವಳಿಗೊಂದು ಶಾಶ್ವತ ಪರಿಹಾರ ಒದಗಿಸಿ
ಈಗಾಗಲೇ ನೆರೆಯ ಕೆಯ್ಯೂರು ಗ್ರಾಮಕ್ಕೆ ಆನೆ ಬರುತ್ತಿದ್ದು ಅಲ್ಲಿನ ಬಹಳಷ್ಟು ಕೃಷಿಕರ ತೋಟಗಳಿಗೆ ದಾಳಿ ಮಾಡಿ ಕೃಷಿ ನಾಶ ಮಾಡುತ್ತಿದೆ. ಆನೆಯನ್ನು ಶಾಶ್ವತವಾಗಿ ಬೇರೆ ಕಡೆಯ ಸ್ಥಳಾಂತರ ಮಾಡಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಗ್ರಾಮಸ್ಥರು ಒತ್ತಾಯ ಮಾಡುತ್ತಲೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಆನೆ ಕೆದಂಬಾಡಿ ಗ್ರಾಮಕ್ಕೆ ಕಾಲಿಡಲೂಬಹುದು ಆದ್ದರಿಂದ ಆನೆ ಹಾವಳಿಗೊಂದು ಶಾಶ್ವತ ಪರಿಹಾರ ಒದಗಿಸುವ ಅಗತ್ಯವಿದೆ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ನಾರಾಯಣ ಪೂಜಾರಿ ಕುರಿಕ್ಕಾರ ಒತ್ತಾಯಿಸಿದರು.
ರಾತ್ರಿ ಸಮಯ ಬೀಟ್ ಪೊಲೀಸ್ ಗಸ್ತು ಬರಬೇಕು
ಕೆಲವು ತಿಂಗಳುಗಳ ಹಿಂದೆ ಪ್ರತಿ ಗ್ರಾಮದಲ್ಲಿ ಪೊಲೀಸ್ ಜನ ಸಂಪರ್ಕ ಸಭೆ ನಡೆಯುತ್ತಿತ್ತು ಆದರೆ ಈಗ ನಡೆಯುತ್ತಿಲ್ಲ ಆದ್ದರಿಂದ ಗ್ರಾಮದಲ್ಲಿ ಪೊಲೀಸ್ ಜನ ಸಂಪರ್ಕ ಸಭೆ ನಡೆಯಬೇಕು ಎಂದು ತಿಳಿಸಿದ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿಯವರು,ರಾತ್ರಿ ವೇಳೆ ತಿಂಗಳಾಡಿ ಪೇಟೆ ಸಹಿತ ಮುಖ್ಯರಸ್ತೆಯಲ್ಲಿ ಪೊಲೀಸರು ಗಸ್ತು ಬರಬೇಕು ಎಂದು ತಿಳಿಸಿದರು.
ಪಂಚಾಯತ್ ಬಳಕೆಗೆ ಉಚಿತ ವಿದ್ಯುತ್ ಕೊಡಲಿ…
ಮೆಸ್ಕಾಂ ಶುಲ್ಕ ಪಾವತಿಗಾಗಿಯೇ ಪಂಚಾಯತ್ ಪ್ರತಿವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಕುಡಿಯುವ ನೀರು ಸರಬರಾಜು, ದಾರಿ ದೀಪ ಇತ್ಯಾದಿಗಳ ನಿರ್ವಹಣೆಗೆ ಬಹಳಷ್ಟು ಹಣ ಬೇಕಾಗುತ್ತದೆ. ಆದ್ದರಿಂದ ಸರಕಾರ ಪಂಚಾಯತ್ ಕುಡಿಯುವ ನೀರು ಸರಬರಾಜಿಗೆ, ಬೀದಿ ದೀಪಗಳಿಗೆ ಉಚಿತವಾಗಿ ವಿದ್ಯುತ್ ಕೊಟ್ಟರೆ ಬಹಳಷ್ಟು ಉಪಯೋಗವಾಗುತ್ತದೆ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಮೋಹನ್ ಆಳ್ವ ಮುಂಡಾಳಗುತ್ತು ತಿಳಿಸಿದರು.
ಅರಣ್ಯ ಇಲಾಖೆಯಿಂದ ಹಾಲು ಮಡ್ಡಿ ಗಿಡ ಒದಗಿಸಿ
ಅರಣ್ಯ ಇಲಾಖೆಯಿಂದ ಈಗಾಗಲೇ ಬೇರೆ ಬೇರೆ ಜಾತಿಯ ಮರದ ಗಿಡಗಳ ವಿತರಣೆಯಾಗುತ್ತಿದೆ. ಆದರೆ ಹಾಲುಮಡ್ಡಿ(ದೂಪದ ಮರ) ಮರದ ಗಿಡ ಸಿಗುತ್ತಿಲ್ಲ. ದೂಪದ ಮರವು ಪರಿಸರಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ ಆದ್ದರಿಂದ ದೂಪದ ಮರದ ಗಿಡಗಳನ್ನು ಇಲಾಖೆ ಸರಬರಾಜು ಮಾಡಬೇಕು ಎಂದು ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ತಿಳಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಯವರು ತಿಳಿಸಿದರು.
ಸೋಲಾರ್ ಲೈಟ್ಸ್, ಸಿಸಿ ಕ್ಯಾಮರ ಹಾಕೋದು ಬೇಡವೇ ಬೇಡ…?
ದಯವಿಟ್ಟು ಸೋಲಾರ್ನಿಂದ ಕಾರ್ಯನಿರ್ವಹಿಸುವ ಲೈಟ್ಸ್, ಸಿಸಿ ಕ್ಯಾಮರಗಳನ್ನು ಹಾಕಲೇಬೇಡಿ ಎಂದು ನಾರಾಯಣ ಪೂಜಾರಿ ಕುರಿಕ್ಕಾರ ತಿಳಿಸಿದರು. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಸೋಲಾರ್ ಬೀದಿ ದೀಪಗಳನ್ನು ಹಾಕಿದರೆ ಒಂದೇ ವರ್ಷದಲ್ಲಿ ಹಾಳಾಗಿ ಹೋಗುತ್ತವೆ. ಹೆಚ್ಚಾಗಿ ಬ್ಯಾಟರಿ ಸಮಸ್ಯೆಗಳೆ ಬರುವುದರಿಂದ ಇಂತಹ ಸೋಲಾರ್ ಲೈಟ್ಸ್, ಸಿಸಿ ಕ್ಯಾಮರಗಳಿಗೆ ಖರ್ಚು ಮಾಡುವುದು ವ್ಯರ್ಥ ಎಂದು ಅವರು ತಿಳಿಸಿದರು. ಕುಯ್ಯಾರು ಮತ್ತು ಮಾರುತಿಪುರಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ವಿಚಾರವನ್ನು ಅಶ್ರಫ್ ಸಾರೆಪುಣಿ ತಿಳಿಸಿದರು.ತಿಂಗಳಾಡಿ ಜಂಕ್ಷನ್ನಲ್ಲಿರುವ ಸಿಸಿ ಕ್ಯಾಮರ ಹಾಳಾಗಿ ಹಲವು ತಿಂಗಳು ಕಳೆದಿದೆ ಇನ್ನು ಕೂಡ ದುರಸ್ತಿ ಆಗಿಲ್ಲ ಎಂದು ನೌಷಾದ್ ತಿಂಗಳಾಡಿ ತಿಳಿಸಿದರು. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಪಿಡಿಒ ಅಜಿತ್ ಜಿ.ಕೆ ಹೇಳಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿಬೀಡು, ಸದಸ್ಯರುಗಳಾದ ರತನ್ ರೈ ಕುಂಬ್ರ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಮೆಲ್ವಿನ್ ಮೊಂತೆರೋ, ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಸುಜಾತ ರೈ, ಅಸ್ಮಾ ಗಟ್ಟಮನೆ, ರೇವತಿ ಬೋಳೋಡಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ವರದಿ ಮಂಡಿಸಿದರು. ಪ್ರಭಾರ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಮೃದುಳಾ, ಗಣೇಶ್, ಶಶಿಪ್ರಭಾ ರೈ, ವಿದ್ಯಾಪ್ರಸಾದ್ ಸಹಕರಿಸಿದ್ದರು.

ಗ್ರಾಂ ಲೆಕ್ಕದಲ್ಲಿ ಸಿಗುವ ಆಹಾರ ಪದಾರ್ಥಗಳು
ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ 16 ಬಗೆಯ ಆಹಾರ ಪದಾಧರ್ಥಗಳನ್ನು ಗ್ರಾಂ ಲೆಕ್ಕದಲ್ಲಿ ಕೊಡಲಾಗುತ್ತಿದೆ. ಅದರಲ್ಲಿ ಕುಚಲಕ್ಕಿ 816 ಗ್ರಾಂ, ಬೆಳ್ತಿಗೆ ಅಕ್ಕಿ 937 ಗ್ರಾಂ, ತೊಗರಿ ಬೇಳೆ 108 ಗ್ರಾಂ, ಉಪ್ಪು 63 ಗ್ರಾಂ, ಎಣ್ಣೆ 69 ಗ್ರಾಂ, ಸೋಯಮಿಕ್ಸ್ 137 ಗ್ರಾಂ, ಸಾಂಬಾರು ಮಸಾಲೆ 84 ಗ್ರಾಂ, ಹೆಸ್ರು ಕಾಳು 60 ಗ್ರಾಂ, ಕಡ್ಲೆ 47 ಗ್ರಾಂ, ಮೆಣಸು 9 ಗ್ರಾಂ, ಸಾಸಿವೆ 9 ಗ್ರಾಂ, ಬೆಲ್ಲ 96 ಗ್ರಾಂ, ಹಾಲಿನ ಹುಡಿ 475 ಗ್ರಾಂ, ಸಕ್ಕರೆ 185 ಗ್ರಾಂ, ಮಿಲ್ಲೆಟ್ ಲಡ್ಡು 1625 ಗ್ರಾಂ, ಮೊಟ್ಟೆ 25 ಇವಿಷ್ಟು ಪೌಷ್ಟಿಕ ಆಹಾರ ಪದಾರ್ಥಗಳನ್ನು ಕೊಡಲಾಗುತ್ತಿದೆ.
ವೈದ್ಯರೇ ಗರ್ಭಿಣಿಯರಿಗೆ ಜೋರು ಮಾಡಬೇಡಿ…!?
ತಿಂಗಳಾಡಿ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರು ಬಹಳ ಒಳ್ಳೆಯ ವೈದ್ಯರಾಗಿದ್ದಾರೆ ಮತ್ತು ಒಳ್ಳೆಯ ಔಷಧಿ ಕೂಡ ಇಲ್ಲಿ ಸಿಗುತ್ತಿದೆ. ಆದರೆ ಗರ್ಭಿಣಿಯರು ಆಸ್ಪತ್ರೆಗೆ ಬಂದರೆ ಅವರಿಗೆ ಜೋರು ಧ್ವನಿಯಲ್ಲಿ ಮಾತನಾಡುತ್ತೀರಿ ಎಂಬ ದೂರು ಇದೆ ಎಂದು ಅಶ್ರಫ್ ಸಾರೆಪುಣಿ ತಿಳಿಸಿದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿ ಡಾ.ಭವ್ಯರವರು, ನಾನು ಯಾರಿಗೂ ಜೋರು ಧ್ವನಿಯಲ್ಲಿ ಮಾತನಾಡುತ್ತಿಲ್ಲ ಬಹುಷಹ ನನ್ನ ಧ್ವನಿ ಸ್ವಲ್ಪ ಜೋರು ಇರುವ ಕಾರಣ ಅವರಿಗೆ ಹಾಗೆ ಅನ್ನಿಸಿರಬಹುದು ಅದು ಬಿಟ್ಟರೆ ನಾನ್ಯಾಕೆ ಜೋರು ಮಾಡಲಿ ಎಂದು ಹೇಳಿದರು.
ಅಪಘಾತ ಮತ್ತು ಕ್ಯಾನ್ಸರ್ ಚಿಕಿತ್ಸೆಗೊಂದು ವರದಾನ ಕೆನರಾ ಬ್ಯಾಂಕ್ ಏಂಜಲ್ ಅಕೌಂಟ್
ಅಪಘಾತದಿಂದ ಗಾಯಗೊಂಡವರಿಗೆ ಹಾಗೇ ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ವರದಾನವಾಗಿ ಕೆನರಾ ಬ್ಯಾಂಕ್ನಿಂದ ಏಂಜಲ್ ಅಕೌಂಟ್ ಆಗಿದೆ. ಇದೊಂದು ಸಂಪೂರ್ಣ ಮಹಿಳಾ ಉಳಿತಾಯ ಖಾತೆಯಾಗಿದ್ದು 18 ರಿಂದ 69 ವರ್ಷದೊಳಗಿನ ಮಹಿಳೆಯರು ಈ ಅಕೌಂಟ್ ಅನ್ನು ಹೊಂದಬಹುದಾಗಿದೆ. ರೂ.5 ಸಾವಿರ ಹಾಕಿ ಖಾತೆ ತೆರೆಯಬೇಕಾಗುತ್ತದೆ ಮತ್ತು ಸರಾಸರಿ ಈ ಬ್ಯಾಲೆನ್ಸ್ ಇರಬೇಕಾಗುತ್ತದೆ. ಇದಲ್ಲದೆ ರೂ.5, 30 ಮತ್ತು 1 ಲಕ್ಷದ ಅಕೌಂಟ್ ಕೂಡ ಇದ್ದು ಇದರಲ್ಲಿ 3 ಲಕ್ಷ, 5 ಲಕ್ಷ ಮತ್ತು 10 ಲಕ್ಷ ರೂ.ಗಳ ವರೇಗೆ ವಿಮೆ ಇದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಕೆನರಾ ಬ್ಯಾಂಕ್ ಅನ್ನು ಸಂಪರ್ಕಿಸಬಹುದು ಎಂದು ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕಿ ಗೀತಾರವರು ಮಾಹಿತಿ ನೀಡಿದರು.
ನಿವೃತ್ತ ಸೈನಿಕ, ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ
ಗ್ರಾಮಸಭೆಯ ವಿಶೇಷ ಅಂಗವಾಗಿ ನಿವೃತ್ತ ಸೈನಿಕರಾಗಿರುವ ಲಕ್ಷ್ಮೀಶ ಕಡಮಜಲು ಹಾಗೂ ಗ್ರಾಪಂ ಸ್ವಚ್ಛತಾ ಸೇನಾನಿಗಳಾಗಿ ಪುಷ್ಪಾ ಬೋಳೋಡಿ ಮತ್ತು ಗಿರಿಜಾರವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಪೇಟಾ ತೊಡಿಸಿ,ಹಾಲು,ಫಲಪುಷ್ಪ ಹಾರಾರ್ಪಣೆಯೊಂದಿಗೆ ಗೌರವಿಸಲಾಯಿತು.
‘ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಪಂಚಾಯತ್ ಆಡಳಿತ ಮಂಡಳಿ, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಶ್ರಮ ಪಡುತ್ತಿದ್ದಾರೆ. ಸಭೆಯಲ್ಲಿ ಗ್ರಾಮಸ್ಥರಿಂದ ಬಂದ ಬೇಡಿಕೆ, ಸಲಹೆ ಸೂಚನೆಗಳನ್ನು ದಾಖಲಿಸಿಕೊಂಡು ಪರಿಶೀಲನೆ ಮಾಡಲಾಗುತ್ತದೆ. ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತೀ ಮುಖ್ಯ. ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು.’
ಸುಜಾತ ಮುಳಿಗದ್ದೆ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ